ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್‌ಮಸ್ ಹಬ್ಬ ಬರುತ್ತದೆ. ಈ ಸಮಯದಲ್ಲಿ ರಜೆ ಇರುವುದರಿಂದ ಬಹಳಷ್ಟು ಜನರು ಊರುಗಳಿಗೆ ಹೋಉತ್ತಾರೆ. ಅದರಲ್ಲೂ ಹೊಸ ವರ್ಷ ಸಹ ಹತ್ತಿರ ಇರುತ್ತದೆ. ಇದರಿಂದ ಪ್ರವಾಸ ಹೋಗುವವರು ಜಾಸ್ತಿ ಇರುತ್ತಾರೆ. ಕ್ರಿಸ್‌ಮಸ್ (Christmas) ಸಮಯದಲ್ಲಿ ಜನರನ್ನ ನಿಭಾಯಿಸಲು ಸುಲಭವಾಗಲಿ ಎಂದು ವಿಶೇಷ ಎಕ್ಸ್‌ಪ್ರೆಸ್ ರೈಲು (Express Train) ಆರಂಭ ಮಾಡಲು ನೈಋತ್ಯ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ.
ಬೆಂಗಳೂರು ಮತ್ತು ಬೀದರ್ ನಡುವೆ ಎಕ್ಸ್‌ಪ್ರೆಸ್
ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಜಾಸ್ತಿ ಇರುತ್ತದೆ. ಅನೇಕ ಜನರು ಟಿಕೆಟ್ ಸಿಗದೇ ಪರದಾಡುತ್ತಾರೆ. ಬಹಳ ಕಷ್ಟಪಟ್ಟು ರೈಲಿನಲ್ಲಿ ಸಂಚಾರ ಮಾಡುತ್ತಾರೆ. ಹಾಗಾಗಿ ಜನರ ಈ ಸಮಸ್ಯೆಯನ್ನ ಕಡಿಮೆ ಮಾಡಲು ನೈಋತ್ಯ ರೈಲ್ವೆ ಇಲಾಖೆ ಬೆಂಗಳೂರು ಕಂಟೋನ್ಮೆಂಟ್ ಮತ್ತು ಬೀದರ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲನ್ನ ಆರಂಭ ಮಾಡುತ್ತಿದೆ. ಇದೇ ಡಿಸೆಂಬರ್ 24ರಂದು ರೈಲು ಸಂಖ್ಯೆ 06291 ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ವಿಶೇಷ ಎಕ್ಸ್ ಪ್ರೆಸ್ ರಾತ್ರಿ 9: 15ಕ್ಕೆ ಹೊರಟು, ಮರುದಿನ ಬೆಳಿಗ್ಗೆ 11:30ಕ್ಕೆ ಬೀದರ್ ತಲುಪಲಿದೆ. ಮರಳಿ 06292 ವಿಶೇಷ ಎಕ್ಸ್ ಪ್ರೆಸ್ ರೈಲು ಬೀದರ್‌ನಿಂದ 25 ರ ಮಧ್ಯಾಹ್ನ 1 ಗಂಟೆಗೆ ಹೊರಟು, ಮರುದಿನ ಬೆಳಗಿನ ಜಾವ 4 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಎಲ್ಲೆಲ್ಲಿ ಈ ರೈಲು ಸ್ಟಾಪ್ ಕೊಡಲಿದೆ?
ಮಾರ್ಗಮಧ್ಯದಲ್ಲಿ, ಈ ವಿಶೇಷ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ, ವಾಡಿ, ಶಹಾಬಾದ, ಕಲಬುರಗಿ ಮತ್ತು ಹುಮನಾಬಾದ ನಿಲ್ದಾಣಗಳಲ್ಲಿ ಸ್ಟಾಪ್ ಕೊಡಲಿದೆ.
