ಕಲಬುರಗಿ: ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ಸರ್ಕಾರಿ ಮಹಿಳಾ ವಸತಿ ನಿಲಯವೊಂದರಲ್ಲಿ ನಡೆದಿರುವ ಅನಿಷ್ಟ ಕೃತ್ಯವೊಂದು (Kalaburgi) ಇಡೀ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದೆ. ಬಿ ಸಿ ಎಂ ಗರ್ಲ್ಸ್ ಹಾಸ್ಟೆಲ್ನ ರೂಮ್ ಒಂದರಲ್ಲಿ ವಿದ್ಯಾರ್ಥಿನಿಯರು ಅತ್ಯಂತ ಬಿಂದಾಸ್ ಆಗಿ ಮದ್ಯ ಹಾಗೂ ಬೀಯರ್ ಬಾಟಲಿಗಳನ್ನು ಹಿಡಿದು ಕುಡಿಯುತ್ತಿರುವ ಆಘಾತಕಾರಿ ದೃಶ್ಯಾವಳಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಆತಂಕ ಮೂಡಿಸಿದೆ.
ರಾತ್ರಿಯಿಡೀ ಗರ್ಲ್ಸ್ ಹಾಸ್ಟೆಲ್ ನಲ್ಲಿ ಯುವಕರು
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿರುವ ಬಿ ಸಿ ಎಂ ಮಹಿಳಾ ಹಾಸ್ಟೆಲ್ನಲ್ಲಿ ಈ ಕರಾಳ ಘಟನೆ ಸಂಭವಿಸಿದೆ ಎನ್ನಲಾಗಿದೆ. ಹೆಣ್ಣುಮಕ್ಕಳಿಗೆ ಕಟ್ಟುನಿಟ್ಟಿನ ಸುರಕ್ಷತೆ ಇರಬೇಕಾದ ಜಾಗದಲ್ಲಿ ಕಾವಲುಗಾರರ ಕಣ್ಣು ತಪ್ಪಿಸಿ ಮಧ್ಯರಾತ್ರಿ ಇಬ್ಬರು-ಮೂವರು ಹೊರಗಿನ ಹುಡುಗರು ಒಳಗೆ ನುಗ್ಗಿದ್ದಾರೆ. ಅವರ ಜೊತೆಗೂಡಿ ಯುವತಿಯರು ತಡರಾತ್ರಿಯವರೆಗೆ ಕುಡಿದು ಕುಪ್ಪಳಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರಾತ್ರಿಯಿಡೀ ಗರ್ಲ್ಸ್ ಹಾಸ್ಟೆಲ್ ಕೋಣೆಯಲ್ಲೇ ಹುಡುಗರು ತಂಗಿದ್ದರು ಎಂಬ ವಿಷಯ ಬಯಲಾಗುತ್ತಿದ್ದಂತೆ ಪೋಷಕರು ಬೆಚ್ಚಿಬಿದ್ದಿದ್ದಾರೆ.
ಲಂಚ ನೀಡಲು ಮುಂದಾದ ಯುವತಿಯರು
ಈ ಸೂಕ್ಷ್ಮ ಹಾಗೂ ಗಂಭೀರ ವಿಷಯ ಗೊತ್ತಾಗುತ್ತಿದ್ದಂತೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಶಿಸ್ತುಕ್ರಮ ಜರುಗಿಸಬೇಕಾಗಿದ್ದ ಹಾಸ್ಟೆಲ್ ಮೇಲ್ವಿಚಾರಕಿ (ವಾರ್ಡನ್), ಉಲ್ಟಾ ಈ ಇಡೀ ಕರ್ಮಕಾಂಡವನ್ನು ಮುಚ್ಚಿಹಾಕಲು ವಿದ್ಯಾರ್ಥಿನಿಯರನ್ನೇ ಬ್ಲ್ಯಾಕ್ಮೇಲ್ ಮಾಡಲು ಆರಂಭಿಸಿದ್ದಾರೆ. ಮದ್ಯ ಸೇವನೆಯ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಕ್ಕೆ ಬಿಡುವುದಾಗಿ ಹೆದರಿಸಿ, ಮೌನ ವಹಿಸಲು ದಂಡ ಹಾಗೂ ಲಂಚದ ರೂಪದಲ್ಲಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚಕ್ಕಾಗಿ ವಿದ್ಯಾರ್ಥಿನಿಯರೊಂದಿಗೆ ವಾರ್ಡನ್ ನಡೆಸಿರುವ ಆಡಿಯೋ ಸಂಭಾಷಣೆಯೂ ಲೀಕ್ ಆಗಿದ್ದು, ಇಲಾಖೆಯ ಭ್ರಷ್ಟ ಮುಖವನ್ನು ಅನಾವರಣಗೊಳಿಸಿದೆ.
ಇಷ್ಟೇ ಅಲ್ಲದೆ, ಈ ವ್ಯವಸ್ಥಿತ ಅಕ್ರಮದ ಹಿಂದೆ ಮೂರ್ನಾಲ್ಕು ಜನ ವಾರ್ಡನ್ಗಳ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ನೇರ ಆರೋಪ ಮಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ವಿದ್ಯಾರ್ಥಿನಿಯರನ್ನು ತಪ್ಪು ದಾರಿಗೆ ಎಳೆದು, ಅವರನ್ನು ಅನೈತಿಕ ಚಟುವಟಿಕೆಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭ್ರಷ್ಟಾಚಾರ ಹಾಗೂ ಅನೈತಿಕ ದಂಧೆಯ ವಿರುದ್ಧ ಬಿಸಿಎಂ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳಿಗೆ ಲಿಖಿತವಾಗಿ ದೂರು ಸಲ್ಲಿಸಿದ್ದರೂ ಸಹ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ. ಪೋಷಕರು ನಂಬಿ ಕಳುಹಿಸುವ ಸರ್ಕಾರಿ ವಸತಿ ನಿಲಯಗಳೇ ಇಂತಹ ಕುಖ್ಯಾತ ತಾಣಗಳಾಗಿ ಬದಲಾಗುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥ ಸಿಬ್ಬಂದಿಗಳನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಿ ಜೈಲಿಗಟ್ಟಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಜ್ಯದ ಸರ್ಕಾರಿ ಹಾಸ್ಟೆಲ್ಗಳಲ್ಲಿ ಮೂಲಸೌಕರ್ಯ ಹಾಗೂ ಭದ್ರತಾ ವೈಫಲ್ಯಗಳ ವಿರುದ್ಧ ಈ ಹಿಂದೆಯೂ ದೊಡ್ಡ ಮಟ್ಟದ ಆಕ್ರೋಶಗಳು ವ್ಯಕ್ತವಾಗಿದ್ದು, ಕಲಬುರಗಿ ಪ್ರಾಂತ್ಯದ ಹಾಸ್ಟೆಲ್ ವ್ಯವಸ್ಥೆಯ ದುಸ್ಥಿತಿಯನ್ನು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ನಡೆಸಿದ ಹಳೆಯ ಪ್ರತಿಭಟನೆಯ ವಿಡಿಯೋಗಳಲ್ಲಿ ಇಂದಿಗೂ ಕಾಣಬಹುದಾಗಿದೆ.
