TOP NEWS

DK Shivakumar: ವಾಸ್ತು ಬದಲಾವಣೆಗೆ ಸಿಎಂ ಡಿಕೆಶಿ ಕಸರತ್ತು: ಕುಮಾರಕೃಪಾ ದ್ವಾರ ಉಲ್ಟಾ, ಕೊಠಡಿ ಧ್ವಂಸ

dk shivakumar made vastu changes in cm official house

ಬೆಂಗಳೂರು: ಚುನಾವಣೆ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಪ್ರತಿಯೊಂದು ಶುಭ ಕಾರ್ಯವನ್ನು ಜ್ಯೋತಿಷ್ಯದ ಪ್ರಕಾರವೇ ಮಾಡಿಕೊಂಡು ಬಂದಿರುವ ಸಿಎಂ ಡಿ.ಕೆ. ಶಿವಕುಮಾರ್, (DK Shivakumar) ಈಗ ವಾಸ್ತುಶಾಸ್ತ್ರಕ್ಕೆ ತಕ್ಕಂತೆ ತಮ್ಮ ಅಧಿಕೃತ ಕಚೇರಿ ಹಾಗೂ ನಿವಾಸವನ್ನು ಬದಲಾಯಿಸಲು ಮುಂದಾಗಿದ್ದಾರೆ. ಐತಿಹಾಸಿಕ ಪಾರಂಪರಿಕ ಕಟ್ಟಡವಾದ ಕುಮಾರಕೃಪಾ ಅತಿಥಿ ಗೃಹವನ್ನು (Kumara Krupa Guest House) ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನಾಗಿ ಮಾರ್ಪಡಿಸಲಾಗುತ್ತಿದ್ದು, ವಾಸ್ತು ದೋಷ ನಿವಾರಣೆಗಾಗಿ ದೊಡ್ಡ ಮಟ್ಟದ ನವೀಕರಣ ಕಾಮಗಾರಿಗಳು ಆರಂಭವಾಗಿವೆ.

ವಾಸ್ತು ನಿಯಮಕ್ಕೆ ತಕ್ಕಂತೆ ಕೊಠಡಿ ನೆಲಸಮ, ಬಾಗಿಲು ಚೇಂಜ್

ಸಿಎಂ ಡಿಕೆಶಿ ಅವರ ಇಷ್ಟದಂತೆ ಕುಮಾರಕೃಪಾ ಕಟ್ಟಡದ ಒಳಗಡೆ ಭಾರಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇಲ್ಲಿನ ಕೊಠಡಿ ಸಂಖ್ಯೆ 1 ಅನ್ನು ವಾಸ್ತು ದೋಷದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಕೆಡವಿ ಹಾಕಲಾಗುತ್ತಿದ್ದು, ಶಾಸ್ತ್ರೋಕ್ತವಾಗಿ ಮರುನಿರ್ಮಾಣ ಮಾಡಲಾಗುತ್ತಿದೆ. ಇದರೊಂದಿಗೆ, ಇದುವರೆಗೆ ಪೂರ್ವ ದಿಕ್ಕಿನಲ್ಲಿದ್ದ ಕಚೇರಿಯ ಪ್ರಮುಖ ಪ್ರವೇಶ ದ್ವಾರವನ್ನು ಸಂಪೂರ್ಣವಾಗಿ ಕ್ಲೋಸ್ ಮಾಡಲಾಗುತ್ತಿದ್ದು, ಉತ್ತರಾಭಿಮುಖವಾಗಿ ಹೊಸ ಮೇನ್ ಗೇಟ್ ನಿರ್ಮಿಸಲಾಗುತ್ತಿದೆ. ಇನ್ಮುಂದೆ ಮುಖ್ಯಮಂತ್ರಿಗಳ ಎಂಟ್ರಿ ಮತ್ತು ಎಕ್ಸಿಟ್ ಎಲ್ಲವೂ ಉತ್ತರ ದ್ವಾರದ ಮೂಲಕವೇ ನಡೆಯಲಿದೆ.

ಸ್ಥಳದಲ್ಲೇ ನಿಂತು ಪರಿಶೀಲಿಸಿದ ಆಪ್ತ ಜ್ಯೋತಿಷಿ ಆರಾಧ್ಯ

ಸಿಎಂ ಅವರ ಆಪ್ತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಬಿ.ಪಿ. ಆರಾಧ್ಯ ಅವರ ನೇರ ಮಾರ್ಗದರ್ಶನದಲ್ಲೇ ಈ ಎಲ್ಲಾ ಪ್ಲಾನ್‌ಗಳು ಸಿದ್ಧವಾಗಿವೆ. ಇತ್ತೀಚೆಗೆ ಬಿ.ಪಿ. ಆರಾಧ್ಯ ಅವರು ಕುಮಾರಕೃತಾಗೆ ಖುದ್ದಾಗಿ ಭೇಟಿ ನೀಡಿ, ವಾಸ್ತು ವಿನ್ಯಾಸ ಹಾಗೂ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ್ದಾರೆ. ಈ ನವೀಕರಣ ಪ್ರಕ್ರಿಯೆಯ ಭಾಗವಾಗಿ, ಕಟ್ಟಡದ ಪಕ್ಕದಲ್ಲೇ ಇದ್ದ ಸರ್ಕಾರಿ ವಾಹನಗಳ ಹಳೆಯ ಶೆಡ್‌ಗಳನ್ನು ಸಹ ಜೆಸಿಬಿ ಮೂಲಕ ನೆಲಸಮಗೊಳಿಸಿ ಜಾಗವನ್ನು ಕ್ಲಿಯರ್ ಮಾಡಲಾಗಿದೆ.

1,413 ಕೋಟಿ ಒಡೆಯ ಡಿ.ಕೆ. ಶಿವಕುಮಾರ್ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ!

ಮತ್ತೊಂದೆಡೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ನೂತನ ಕ್ಯಾಬಿನೆಟ್ ಸಚಿವರ ಆಸ್ತಿ ಮತ್ತು ಕ್ರಿಮಿನಲ್ ಹಿನ್ನೆಲೆಯ ಸಂಪೂರ್ಣ ಜಾತಕ ಸಾರ್ವಜನಿಕವಾಗಿ ಬಹಿರಂಗಗೊಂಡಿದೆ. ಚುನಾವಣಾ ಸುಧಾರಣಾ ಸಂಸ್ಥೆಯಾದ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ADR) ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ, ಪ್ರಸ್ತುತ ಸಂಪುಟದಲ್ಲಿರುವ ಎಲ್ಲಾ 14 ಸಚಿವರೂ ಮಲ್ಟಿ ಮಿಲಿಯನೇರ್‌ಗಳಾಗಿದ್ದಾರೆ.

ಸಚಿವರ ಆಸ್ತಿ ಮತ್ತು ಕೇಸ್ ವಿವರ: ಬರೋಬ್ಬರಿ 1,413 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಹಾಗೂ ಚರ ಆಸ್ತಿ ಘೋಷಿಸಿಕೊಳ್ಳುವ ಮೂಲಕ ಡಿ.ಕೆ. ಶಿವಕುಮಾರ್ ಅವರು ಇಡೀ ದೇಶದಲ್ಲೇ ‘ಅತ್ಯಂತ ಶ್ರೀಮಂತ ಮುಖ್ಯಮಂತ್ರಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಇಡೀ ಸಚಿವ ಸಂಪುಟದಲ್ಲೇ ಅತ್ಯಂತ ಕಡಿಮೆ ಆಸ್ತಿ ಹೊಂದಿರುವುದು ಆರೋಗ್ಯ ಸಚಿವ ಯು.ಟಿ. ಖಾದರ್ (6 ಕೋಟಿ ರೂಪಾಯಿ). ಇದೇ ವೇಳೆ ಕ್ರಿಮಿನಲ್ ಪ್ರಕರಣಗಳ ಪಟ್ಟಿಯೂ ಬಿಡುಗಡೆಯಾಗಿದ್ದು, ಸಿಎಂ ಡಿಕೆಶಿ ಅವರ ಮೇಲೊಂದೇ ಒಟ್ಟು 19 ಕ್ರಿಮಿನಲ್ ಕೇಸ್‌ಗಳಿದ್ದು, ಸಂಪುಟದ ಎಲ್ಲಾ 14 ಸಚಿವರ ಮೇಲೆಯೂ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ಎಡಿಆರ್ ವರದಿ ತಿಳಿಸಿದೆ.

ಇದನ್ನೂ ಓದಿ:  ರಾಜ್ಯಾದ್ಯಂತ ಆವರಿಸಿದ ಮುಂಗಾರು: ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಭಾರಿ ಮಳೆಯ ‘ರೆಡ್ ಅಲರ್ಟ್’!

Leave a Reply

Your email address will not be published. Required fields are marked *