ಕೊಪ್ಪಳ: ಕೊಪ್ಪಳ (Koppal) ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿರುವ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಅಭಿಮಾನಿಗಳು ಸೋಮವಾರ ಭೀಕರ ಪ್ರತಿಭಟನೆ ನಡೆಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಈ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕ ರಸ್ತೆಯಲ್ಲೇ ಹಳೆಯ ಬೈಕ್ ಮತ್ತು ಟೈಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ನಡೆದಿದೆ.
ರಸ್ತೆಯಲ್ಲೇ ಹಳೇ ಬೈಕ್‌ಗೆ ಬೆಂಕಿ; ಉದ್ರಿಕ್ತ ಕಾರ್ಯಕರ್ತರ ರಸ್ತೆ ತಡೆ
ನಗರದ ಗೌರಿಶಂಕರ ದೇವಸ್ಥಾನದ ಬಳಿ ಜಮಾಯಿಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಶಾಸಕರ ಬೆಂಬಲಿಗರು ಅಶೋಕ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯು ಕೇಂದ್ರ ಬಸ್ ನಿಲ್ದಾಣದ ಮುಂಭಾಗಕ್ಕೆ ತಲುಪುತ್ತಿದ್ದಂತೆ ಉದ್ರಿಕ್ತಗೊಂಡ ಕಾರ್ಯಕರ್ತರು ಟೈಯರ್‌ಗಳನ್ನು ಸುಟ್ಟು ರಸ್ತೆ ತಡೆ ನಡೆಸಿದರು. ಅಷ್ಟಕ್ಕೇ ನಿಲ್ಲದೆ, ಅಶೋಕ ವೃತ್ತದ ಮಧ್ಯದಲ್ಲೇ ಹಳೆಯ ಬೈಕ್ ಒಂದಕ್ಕೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಮಾರ್ಗದುದ್ದಕ್ಕೂ ಹಿಟ್ನಾಳ್ ಪರವಾಗಿ ಜಯಘೋಷಗಳನ್ನು ಕೂಗುತ್ತಾ, ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಾಯಿತು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಅರೆಬರೆ ಸುಟ್ಟ ಬೈಕ್ ಹಾಗೂ ಟೈಯರ್‌ಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕೊಪ್ಪಳ ಇತಿಹಾಸದಲ್ಲೇ ಸಿಗದ ಸಚಿವ ಸ್ಥಾನ: ಮುಖಂಡರ ಅಸಮಾಧಾನ
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಕೆ.ಎಂ. ಸೈಯದ್, ಗೂಳಪ್ಪ ಹಲಗೇರಿ, ಜ್ಯೋತಿ ಗೊಂಡಬಾಳ ಹಾಗೂ ಕೃಷ್ಣ ಇಟ್ಟಂಗಿ, ಕೊಪ್ಪಳ ಕ್ಷೇತ್ರದ ಇತಿಹಾಸದಲ್ಲಿ ಇಲ್ಲಿಂದ ಗೆದ್ದ ಯಾವೊಬ್ಬ ಶಾಸಕನಿಗೂ ಇದುವರೆಗೆ ಒಮ್ಮೆಯೂ ಸಚಿವ ಸ್ಥಾನ ಲಭಿಸಿಲ್ಲ. ರಾಘವೇಂದ್ರ ಹಿಟ್ನಾಳ್ ಅವರು ಸತತ ಮೂರು ಬಾರಿ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದುಳಿದ ವರ್ಗದ ಪ್ರಭಾವಿ ನಾಯಕರಾಗಿರುವ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಿದರೆ, ಹಿಂದುಳಿದ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಗೆ ಭಾರಿ ಅನುಕೂಲವಾಗುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೂ ದೊಡ್ಡ ಶಕ್ತಿ ಬರಲಿದೆ ಎಂದು ಪ್ರತಿಪಾದಿಸಿದರು.
2023ರ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ರಾಘವೇಂದ್ರ ಹಿಟ್ನಾಳ್ ಅವರು ಈ ಬಾರಿ ಸಚಿವರಾಗುತ್ತಾರೆ ಎನ್ನುವ ಭರವಸೆಯನ್ನು ನಾವು ಮತದಾರರಿಗೆ ನೀಡಿ ವೋಟ್ ಕೇಳಿದ್ದೆವು. ಈ ಹೋರಾಟವೇನೂ ನಮ್ಮದೇ ಸರ್ಕಾರ ಅಥವಾ ಪಕ್ಷದ ವಿರುದ್ಧವಲ್ಲ, ಬದಲಿಗೆ ನಮ್ಮ ಜಿಲ್ಲೆಯ ನ್ಯಾಯಯುತ ಬೇಡಿಕೆಯನ್ನು ಹೈಕಮಾಂಡ್‌ಗೆ ತಲುಪಿಸಲು ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಮುಖಂಡರು ಸ್ಪಷ್ಟಪಡಿಸಿದರು. ಈ ಪ್ರತಿಭಟನೆಯಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಮಾಜಿ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಹಾಗೂ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.
ಇದನ್ನೂ ಓದಿ: ಸಿಎಂ ಸ್ಥಾನ ಕೈತಪ್ಪಿದ ನೋವು ಕೊನೆಗೂ ಬಹಿರಂಗ: ಭಾವುಕರಾಗಿ ಕಣ್ಣೀರಿಟ್ಟ ಡಿಸಿಎಂ ಡಾ. ಜಿ. ಪರಮೇಶ್ವರ್!
