TOP NEWS

G Parameshwar: ಸಿಎಂ ಸ್ಥಾನ ಕೈತಪ್ಪಿದ ನೋವು ಕೊನೆಗೂ ಬಹಿರಂಗ: ಭಾವುಕರಾಗಿ ಕಣ್ಣೀರಿಟ್ಟ ಡಿಸಿಎಂ ಡಾ. ಜಿ. ಪರಮೇಶ್ವರ್!

G parameshwar emotional about missing cm post many times

ತುಮಕೂರು: ಕರ್ನಾಟಕ ಕಾಂಗ್ರೆಸ್‌ನ ಅತ್ಯಂತ ಹಿರಿಯ ಹಾಗೂ ನಿಷ್ಠಾವಂತ ದಲಿತ ನಾಯಕ, ಪ್ರಸ್ತುತ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ (G Parameshwar) ಅವರ ಮನಸ್ಸಿನಲ್ಲಿದ್ದ ಸಿಎಂ ಹುದ್ದೆಯ ನಿರಾಸೆಯ ನೋವು ಕೊನೆಗೂ ಸಾರ್ವಜನಿಕವಾಗಿ ಸ್ಫೋಟಗೊಂಡಿದೆ. ಸತತ ಪ್ರಯತ್ನಗಳ ನಡುವೆಯೂ ತಮಗೆ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ಸಿಗದೇ ಹೋದದ್ದಕ್ಕೆ ತೀವ್ರ ಬೇಸರ ಹೊರಹಾಕಿರುವ ಅವರು, ತಮ್ಮ ಆಪ್ತರು ಹಾಗೂ ಸಿದ್ದಾರ್ಥ ಕಾಲೇಜಿನ ಸಿಬ್ಬಂದಿ ಎದುರು ಮನಬಿಚ್ಚಿ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ. ಅಲ್ಲದೆ, ಸಿಎಂ ಸ್ಥಾನ ಸಿಗದಿದ್ದರೆ ರಾಜಕೀಯ ಜೀವನಕ್ಕೆ ಶಾಶ್ವತವಾಗಿ ವಿದಾಯ ಹೇಳಲು ನಿರ್ಧರಿಸಿದ್ದ ಆಘಾತಕಾರಿ ಸತ್ಯವನ್ನೂ ಅವರು ಈ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ.

ಆಕಸ್ಮಿಕ ರಾಜಕೀಯ ಪಯಣದ 40 ವರ್ಷಗಳ ಹಾದಿ

ತಮ್ಮ ಸುದೀರ್ಘ ರಾಜಕೀಯ ಜೀವನದ ಏರಿಳಿತಗಳ ಕುರಿತು ಭಾವುಕರಾಗಿ ಮಾತನಾಡಿದ ಡಿಸಿಎಂ ಪರಮೇಶ್ವರ್, “ನನಗೆ ರಾಜಕಾರಣಕ್ಕೆ ಬರುವ ಯಾವುದೇ ಉದ್ದೇಶವಿರಲಿಲ್ಲ, ಎಲ್ಲವೂ ಆಕಸ್ಮಿಕವಾಗಿ ಬಿಟ್ಟಿತು. ಅಂದು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ನಮ್ಮ ಕಾಲೇಜು ಕ್ಯಾಂಪಸ್‌ಗೆ ಬಂದಾಗ ಅವರ ಒಡನಾಟ ಸಿಕ್ಕಿ ನಾನು ಕಾಂಗ್ರೆಸ್ ಸೇರಬೇಕಾಯಿತು. ಕಳೆದ 40 ವರ್ಷಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಹೈಕಮಾಂಡ್ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಹಿಡಿದು ದೆಹಲಿಯ ಅತ್ಯುನ್ನತ ಸಿಡಬ್ಲ್ಯೂಸಿ (CWC) ಸದಸ್ಯತ್ವದವರೆಗೂ ದೊಡ್ಡ ಜವಾಬ್ದಾರಿಗಳನ್ನು ನೀಡಿದೆ. ಆದರೆ, ಮುಖ್ಯಮಂತ್ರಿ ಹುದ್ದೆ ಮಾತ್ರ ಲಭಿಸಲಿಲ್ಲ. ಇದು ನನ್ನ ಹಣೆಬರಹವೋ ಅಥವಾ ದುರದೃಷ್ಟವೋ ಗೊತ್ತಿಲ್ಲ” ಎಂದು ಗದ್ಗದಿತರಾದರು.

ಮೂರು ಬಾರಿ ಕೈಜಾರಿದ ಮುಖ್ಯಮಂತ್ರಿ ಕುರ್ಚಿ

ತಮಗೆ ಸಿಎಂ ಸ್ಥಾನ ತಪ್ಪಿದ ಇತಿಹಾಸವನ್ನು ಮೆಲುಕು ಹಾಕಿದ ಅವರು, 2013ರ ವಿಧಾನಸಭಾ ಚುನಾವಣೆಯಲ್ಲಿ ನಾನು ಆಕಸ್ಮಿಕವಾಗಿ ಸೋಲದಿದ್ದರೆ ಅಂದೇ ಮುಖ್ಯಮಂತ್ರಿಯಾಗುತ್ತಿದ್ದೆ. ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಅವರಿಗೆ ಸಿಎಂ ಆಗುವ ಅವಕಾಶ ಸಿಗುತ್ತಿರಲಿಲ್ಲ. ಇನ್ನು 2018ರಲ್ಲಿ ಕಾಂಗ್ರೆಸ್ 80 ಸೀಟು ಗೆದ್ದಾಗ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಆ ಸಂದರ್ಭದಲ್ಲೂ ನನ್ನನ್ನು ಸಿಎಂ ಮಾಡಬಹುದಿತ್ತು, ಆದರೆ ಆ ಅವಕಾಶವನ್ನೂ ನೀಡಲಿಲ್ಲ. ಈಗ 2026ರ ರಾಜಕೀಯ ಬೆಳವಣಿಗೆಗಳ ವೇಳೆಯೂ ನನಗೆ ಸಿಎಂ ಆಗುವ ಭರವಸೆ ಇತ್ತು, ಆದರೆ ರಾಜಕೀಯ ಪರಿಸ್ಥಿತಿಗಳಿಂದಾಗಿ ಈ ಬಾರಿಯೂ ಅದು ಕೈಗೂಡಲಿಲ್ಲ ಎಂದು ತೀವ್ರ ನಿರಾಸೆ ವ್ಯಕ್ತಪಡಿಸಿದರು.

ರಾಜಕೀಯ ಸನ್ಯಾಸತ್ವದ ನಿರ್ಧಾರಕ್ಕೆ ಬಂದಿದ್ದ ಪರಮೇಶ್ವರ್

“ಸಿಎಂ ಸ್ಥಾನ ಸಿಗದಿದ್ದರೆ ರಾಜಕೀಯದಿಂದಲೇ ಶಾಶ್ವತವಾಗಿ ದೂರ ಸರಿಯುತ್ತೇನೆ ಎಂದು ನಾನು ಹೈಕಮಾಂಡ್‌ಗೆ ಖಡಕ್ ಆಗಿ ತಿಳಿಸಿದ್ದೆ. ಮನಸ್ಸಿಗೆ ತೀವ್ರ ಬೇಸರವಾಗಿ ಪಕ್ಷ ಬಿಡುವ ಯೋಚನೆ ಬಂದಿದ್ದೂ ನಿಜ. ಆದರೆ, ಕೊನೆಗೆ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಮುಂದುವರಿಯಲು ತೀರ್ಮಾನಿಸಿದೆ” ಎಂದು ತಮ್ಮ ನಿರ್ಧಾರದ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟರು. ಸದ್ಯ ಪಕ್ಷ ನೀಡಿರುವ ಉಪಮುಖ್ಯಮಂತ್ರಿ ಜವಾಬ್ದಾರಿಯನ್ನು ಸ್ವೀಕರಿಸಿದ್ದೇನೆ ಎಂದ ಅವರು, “ಸಾರ್ವಜನಿಕ ಜೀವನದಲ್ಲಿ ಜನರು ನಮ್ಮನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಇದು ದೊಡ್ಡ ಜವಾಬ್ದಾರಿಯ ಸ್ಥಾನವಾಗಿದ್ದು, ಜನರ ಪರವಾಗಿ ನನ್ನ ಪ್ರಾಮಾಣಿಕ ಸೇವೆಯನ್ನು ಮುಂದುವರಿಸುತ್ತೇನೆ” ಎಂದು ಪರಮೇಶ್ವರ್ ಭಾವುಕರಾಗಿ ನುಡಿದರು.

ಇದನ್ನೂ ಓದಿ: ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ನಿರಾಕರಣೆ:ಬಿಜೆಪಿಯ ದ್ರೋಹದ ರಾಜಕಾರಣದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Leave a Reply

Your email address will not be published. Required fields are marked *