TOP NEWS

Cyber Crime: ಬೆಳಗಾವಿ ಮ್ಯಾಟ್ರಿಮೋನಿ ವಂಚನೆ: ವಿದೇಶಿ ‘ಡೆಂಟಿಸ್ಟ್’ ನಾಟಕವಾಡಿ ಯುವತಿಗೆ ₹3.38 ಲಕ್ಷ ನಾಮ ಹಾಕಿದ ಗಿರಾಕಿ!

Cyber crime Matrimony Scam belagavi lady lost lakhs

ಬೆಳಗಾವಿ: ಮ್ಯಾಟ್ರಿಮೋನಿ ಆ್ಯಪ್‌ಗಳ (Cyber Crime) ಮೂಲಕ ಮದುವೆಗಾಗಿ ವರನ ಹುಡುಕಾಟ ನಡೆಸುವ ಯುವತಿಯರನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಅಂತರರಾಜ್ಯ ಜಾಲವೊಂದು ಬೆಳಗಾವಿಯಲ್ಲಿ ಪತ್ತೆಯಾಗಿದೆ. ವಿದೇಶದಲ್ಲಿ ದಂತ ವೈದ್ಯ (ಡೆಂಟಿಸ್ಟ್) ಎಂದು ನಂಬಿಸಿ ಇಲ್ಲಿನ ಯುವತಿಯೊಬ್ಬಳಿಗೆ ಬರೋಬ್ಬರಿ 3,38,800 ರೂಪಾಯಿ ವಂಚಿಸಿರುವ ಆಘಾತಕಾರಿ ದೂರು ದಾಖಲಾಗಿದೆ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬೆಳಗಾವಿ ನಗರದ ಸಿಇಎನ್ (CEN) ಕ್ರೈಮ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಮಂಗಳವಾರ ಮಾಧ್ಯಮಗಳಿಗೆ ಈ ಸೈಬರ್ ವಂಚನೆಯ ಕರಾಳ ಮುಖವನ್ನು ಅನಾವರಣಗೊಳಿಸಿದ್ದಾರೆ.

ಹೈದರಾಬಾದ್ ಮೂಲದ ನೆದರಲ್ಯಾಂಡ್ ವೈದ್ಯ ಎಂದಿದ್ದ ವಂಚಕ: ಪೊಲೀಸ್ ಆಯುಕ್ತರು ಬಹಿರಂಗಪಡಿಸಿದ ವಿವರಗಳ ಪ್ರಕಾರ, ನೊಂದ ಯುವತಿ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ವರನ ಹುಡುಕಾಟದಲ್ಲಿದ್ದಾಗ ಆಕೆಗೆ ಆರ್ಯನ್‌ಕುಮಾರ್ ಎಂಬ ಪ್ರೊಫೈಲ್ ಪರಿಚಯವಾಗಿತ್ತು. ತಾನು ಮೂಲತಃ ಹೈದರಾಬಾದ್‌ನವನಾಗಿದ್ದು, ಸದ್ಯ ನೆದರಲ್ಯಾಂಡ್‌ನಲ್ಲಿ ಡೆಂಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಆತ ಯುವತಿಯ ಬಳಿ ಸುಳ್ಳು ಹೇಳಿದ್ದ. ಮದುವೆಗೆ ತನ್ನ ಪೋಷಕರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ನಂಬಿಸಿ ಕೆಲವೇ ದಿನಗಳಲ್ಲಿ ಯುವತಿಯ ಅತಿಯಾದ ವಿಶ್ವಾಸ ಗಳಿಸಿದ್ದ. ಮೇ 25ರಂದು ನೆದರಲ್ಯಾಂಡ್‌ನಿಂದ ನೇರವಾಗಿ ಬೆಳಗಾವಿಗೆ ಬಂದು ನಿನ್ನನ್ನು ಭೇಟಿಯಾಗುತ್ತೇನೆ ಎಂದು ನಂಬಿಸಿದ್ದ ಆರ್ಯನ್, ಮರುದಿನ ಅಂದರೆ ಮೇ 26ರಂದು ಕರೆ ಮಾಡಿ ತಾನು ದೆಹಲಿ ಏರ್‌ಪೋರ್ಟ್‌ಗೆ ಬಂದು ಇಳಿದಿದ್ದು, ಕಸ್ಟಮ್ಸ್ ಕಂಟ್ರೋಲ್‌ನಲ್ಲಿ ಸಿಲುಕಿಕೊಂಡಿರುವುದಾಗಿ ಹೊಸ ನಾಟಕವಾಡಿದ್ದಾನೆ.

ಕಸ್ಟಮ್ಸ್, ಜಿಎಸ್‌ಟಿ ಹೆಸರಲ್ಲಿ ಲಕ್ಷ ಲಕ್ಷ ಲೂಟಿ: ಇದಾದ ಕೆಲವೇ ನಿಮಿಷಗಳಲ್ಲಿ ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಯ ಸೋಗಿನಲ್ಲಿ ಅಪರಿಚಿತ ಮಹಿಳೆಯೊಬ್ಬಳು ಯುವತಿಗೆ ಕರೆ ಮಾಡಿದ್ದಾಳೆ. ಆರ್ಯನ್ ಬಳಿ ಮಿತಿಮೀರಿದ ವಿದೇಶಿ ಕರೆನ್ಸಿ (ಡಾಲರ್) ಪತ್ತೆಯಾಗಿದ್ದು, ಅದನ್ನು ಭಾರತೀಯ ರೂಪಾಯಿಗೆ ಬದಲಾಯಿಸಲು 85,800 ರೂಪಾಯಿ ಕಸ್ಟಮ್ಸ್ ಟ್ಯಾಕ್ಸ್ ಕಟ್ಟಬೇಕೆಂದು ಹೆದರಿಸಿದ್ದಾಳೆ. ತನ್ನ ಭಾವಿ ಪತಿ ಸಂಕಷ್ಟದಲ್ಲಿದ್ದಾನೆ ಎಂದು ಭಾವಿಸಿದ ಯುವತಿ, ಆಕೆ ಕೊಟ್ಟ ಬ್ಯಾಂಕ್ ಖಾತೆಗೆ ತಕ್ಷಣ ಹಣ ವರ್ಗಾಯಿಸಿದ್ದಾಳೆ. ಇಷ್ಟಕ್ಕೇ ಸುಮ್ಮನಾಗದ ವಂಚಕರ ಗ್ಯಾಂಗ್, ಸ್ವಲ್ಪ ಸಮಯದ ಬಳಿಕ ಅದೇ ಮಹಿಳೆಯಿಂದ ಮತ್ತೊಂದು ಕರೆ ಮಾಡಿಸಿದೆ. ಈ ಬಾರಿ ಆರ್ಯನ್ ಬಳಿ ಕೋಟ್ಯಂತರ ಮೌಲ್ಯದ ವಜ್ರ ಹಾಗೂ ಚಿನ್ನದ ಒಡವೆಗಳಿದ್ದು, ಅದನ್ನು ಕ್ಲಿಯರ್ ಮಾಡಲು ಜಿಎಸ್‌ಟಿ (GST) ರೂಪದಲ್ಲಿ 2.53 ಲಕ್ಷ ರೂ. ಪಾವತಿಸುವುದು ಕಡ್ಡಾಯ ಎಂದು ನಂಬಿಸಿದೆ. ವಂಚಕರ ಜಾಲವನ್ನು ಗುರುತಿಸಲು ವಿಫಲವಾದ ಯುವತಿ ಒಟ್ಟು 3.38 ಲಕ್ಷಕ್ಕೂ ಅಧಿಕ ಹಣವನ್ನು ವರ್ಗಾಯಿಸಿದ್ದಾಳೆ. ತದನಂತರ ಆರ್ಯನ್ ಮೊಬೈಲ್ ನಂಬರ್ ಸ್ವಿಚ್ ಆಫ್ ಆದಾಗ ತಾನು ಮೋಸ ಹೋಗಿರುವುದು ಯುವತಿಗೆ ಮನವರಿಕೆಯಾಗಿದೆ.

ಈ ಆಘಾತಕಾರಿ ಪ್ರಕರಣದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕಠಿಣ ಜಾಗೃತಿ ಸಂದೇಶ ರವಾನಿಸಿರುವ ಕಮಿಷನರ್ ಭೂಷಣ್ ಬೊರಸೆ ಅವರು, ವೈವಾಹಿಕ ಜಾಲತಾಣಗಳು ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಸಿಗುವ ಅಪರಿಚಿತರ ಪ್ರೊಫೈಲ್‌ಗಳನ್ನು ಕಣ್ಣು ಮುಚ್ಚಿ ನಂಬಬೇಡಿ ಎಂದು ಎಚ್ಚರಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ವಿದೇಶದಿಂದ ಉಡುಗೊರೆ ಕಳುಹಿಸುವುದು, ಏರ್‌ಪೋರ್ಟ್‌ನಲ್ಲಿ ಕರೆನ್ಸಿ ಸಿಕ್ಕಿಬಿದ್ದಿರುವುದು ಅಥವಾ ಕಸ್ಟಮ್ಸ್ ಕ್ಲಿಯರೆನ್ಸ್ ವೆಚ್ಚದ ಹೆಸರಿನಲ್ಲಿ ಆನ್‌ಲೈನ್ ಮೂಲಕ ಹಣ ಬೇಡಿದರೆ ಅದು ನೂರಕ್ಕೆ ನೂರರಷ್ಟು ವಂಚಕರ ಪ್ಲಾನ್ ಆಗಿರುತ್ತದೆ, ಹೀಗಾಗಿ ಯಾರು ಕೂಡ ಹಣ ವರ್ಗಾಯಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಒಂದೂವರೆ ವರ್ಷದ ಕಂದಮ್ಮನ ಭೀಕರ ಕೊಲೆ: ಆಹಾರ ಸಿಲುಕಿ ಸಾವು ಎಂದಿದ್ದ ಪ್ರಕರಣದ ಹಿಂದೆ ಬಯಲಾಯ್ತು ಹೆತ್ತ ತಾಯಿ, ಪ್ರಿಯಕರನ ಕ್ರೌರ್ಯ!

Leave a Reply

Your email address will not be published. Required fields are marked *