TOP NEWS

America-Iran: ಅಮೆರಿಕ-ಇರಾನ್ ಸಂಧಾನಕ್ಕೆ ಪಾಕ್ ಮಧ್ಯಸ್ಥಿಕೆ: ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಯುಎಸ್ ಸೆನೆಟರ್

America-Iran Pakistan As Mediator in can be problematic

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ (America-Iran) ನಡುವೆ ಕದನ ವಿರಾಮ ಏರ್ಪಡಿಸುವ ಮಾತುಕತೆಯಲ್ಲಿ ಪಾಕಿಸ್ತಾನವು ಸಂಧಾನಕಾರನ ಪಾತ್ರ ವಹಿಸುತ್ತಿರುವುದಕ್ಕೆ ಅಮೆರಿಕದ ಪ್ರಭಾವಿ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮಧ್ಯಸ್ಥಿಕೆ ವಹಿಸಲು ಪಾಕಿಸ್ತಾನಕ್ಕೆ ಯಾವುದೇ ಅರ್ಹತೆ ಇಲ್ಲ ಎಂದು ಕಿಡಿಕಾರಿರುವ ಅವರು, ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಸಂಬಂಧ ವೃದ್ಧಿಸುವ ‘ಅಬ್ರಹಾಂ ಒಪ್ಪಂದ’ಕ್ಕೆ (Abraham Accords) ಸೇರುವ ಕುರಿತು ಇಸ್ಲಾಮಾಬಾದ್ ತನ್ನ ನಿಲುವನ್ನು ತಕ್ಷಣವೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಸರಣಿ ಪ್ರಶ್ನೆಗಳನ್ನು ಎಸೆದಿರುವ ಸೆನೆಟರ್ ಗ್ರಹಾಂ, ಇಸ್ರೇಲ್ ವಿರುದ್ಧ ಪಾಕಿಸ್ತಾನ ಹೊಂದಿರುವ ದೀರ್ಘಕಾಲದ ದ್ವೇಷದ ಇತಿಹಾಸವನ್ನು ನೆನಪಿಸಿದ್ದಾರೆ. ಇರಾನ್‌ನ ಮಿಲಿಟರಿ ಯುದ್ಧ ವಿಮಾನಗಳಿಗೆ ಪಾಕಿಸ್ತಾನವು ತನ್ನ ವಾಯುನೆಲೆಗಳಲ್ಲಿ ಆಶ್ರಯ ನೀಡುತ್ತಿರುವುದು ಮತ್ತು ಇಸ್ರೇಲ್ ವಿರುದ್ಧ ಪಾಕಿಸ್ತಾನದ ಉನ್ನತ ನಾಯಕರು ಸರಣಿ ಆತಂಕಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಅತ್ಯಂತ ಸಮಸ್ಯಾತ್ಮಕ ಮತ್ತು ಅಪಾಯಕಾರಿ ಎಂದು ಅವರು ಆರೋಪಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕರೆಯಂತೆ ಪಾಕಿಸ್ತಾನವು ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕುತ್ತದೆಯೇ ಇಲ್ಲವೇ ಎಂಬುದನ್ನು ಈಗಲೇ ಸ್ಪಷ್ಟಪಡಿಸಲಿ ಎಂದು ಅವರು ಒತ್ತಾಯಿಸಿದ್ದಾರೆ. ಇಸ್ರೇಲ್ ಮತ್ತು ಮುಸ್ಲಿಂ ರಾಷ್ಟ್ರಗಳ ನಡುವೆ ಶಾಂತಿ ಮೂಡಿಸಲು ಅಮೆರಿಕದ ಮಧ್ಯಸ್ಥಿಕೆಯಲ್ಲಿ ೨೦೨೦ ರಲ್ಲಿ ಈ ಅಬ್ರಹಾಂ ಒಪ್ಪಂದವನ್ನು ಜಾರಿಗೆ ತರಲಾಗಿತ್ತು.

ಇಸ್ರೇಲ್ ದೇಶವನ್ನು ಮಾನ್ಯ ಮಾಡಲು ಸಾಧ್ಯವೇ ಇಲ್ಲ: ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಖಡಕ್ ನಿಲುವು ಅಮೆರಿಕ ಸೆನೆಟರ್ ಅವರ ಈ ವಾಗ್ದಾಳಿಗೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಅವರು ತಮ್ಮ ದೇಶದ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ. ಇಸ್ರೇಲ್ ಅನ್ನು ಒಂದು ದೇಶವಾಗಿ ಗುರುತಿಸುವ ಅಥವಾ ಅದರೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸುವ ಸಾಧ್ಯತೆಯನ್ನು ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ನಮ್ಮ ರಾಷ್ಟ್ರದ ಮೂಲಭೂತ ಸಿದ್ಧಾಂತಗಳನ್ನು ಬಲಿಗೊಟ್ಟು ಇಂತಹ ಒಪ್ಪಂದಗಳಿಗೆ ನಾವು ಒಪ್ಪಿಗೆ ಸೂಚಿಸುವುದಿಲ್ಲ. ಒಂದೇ ಒಂದು ದಿನವೂ ನಂಬಿಕೆಗೆ ಅರ್ಹವಲ್ಲದ ಇಸ್ರೇಲ್ ಜೊತೆಗೆ ನಾವು ವೇದಿಕೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಆಸಿಫ್ ಹೇಳಿದ್ದಾರೆ.

ಇದೇ ವೇಳೆ ಪಾಕಿಸ್ತಾನದ ಪಾಸ್‌ಪೋರ್ಟ್ ನೀತಿಯನ್ನು ಉಲ್ಲೇಖಿಸಿದ ಅವರು, ಪಾಕಿಸ್ತಾನಿ ಪ್ರಯಾಣ ದಾಖಲೆಗಳ (Passports) ಪ್ರಕಾರ ಇಸ್ರೇಲ್ ದೇಶಕ್ಕೆ ಭೇಟಿ ನೀಡಲು ತಮ್ಮ ನಾಗರಿಕರಿಗೆ ಕಾನೂನಿನಲ್ಲೇ ಅನುಮತಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ೧೯೬೭ ರ ಮುಂಚಿನ ಗಡಿಗಳ ಅನ್ವಯ, ಪೂರ್ವ ಜೆರುಸಲೆಮ್ ಅನ್ನು ರಾಜಧಾನಿಯನ್ನಾಗಿ ಹೊಂದಿದ ಸ್ವತಂತ್ರ ಪ್ಯಾಲೆಸ್ತೀನ್ ದೇಶ ಉದಯವಾಗುವವರೆಗೂ ಇಸ್ರೇಲ್ ಅನ್ನು ಪಾಕಿಸ್ತಾನ ಮಾನ್ಯ ಮಾಡುವುದಿಲ್ಲ ಎಂಬ ತಮ್ಮ ಹಳೆಯ ನಿಲುವಿಗೆ ಬದ್ಧವಾಗಿರುವುದಾಗಿ ಅವರು ಪುನರುಚ್ಚರಿಸಿದ್ದಾರೆ.

ಅಬ್ರಹಾಂ ಒಪ್ಪಂದ ವಿಸ್ತರಣೆಗೆ ಡೊನಾಲ್ಡ್ ಟ್ರಂಪ್ ತೀವ್ರ ಕಸರತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಬ್ರಹಾಂ ಒಪ್ಪಂದದ ವ್ಯಾಪ್ತಿಯನ್ನು ಜಾಗತಿಕವಾಗಿ ವಿಸ್ತರಿಸಲು ಭಾರಿ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಈ ಹೊಸ ವಿವಾದ ಮುಂಚೂಣಿಗೆ ಬಂದಿದೆ. ಇತ್ತೀಚೆಗೆ ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಟ್ರಂಪ್, ಸೌದಿ ಅರೇಬಿಯಾ, ಕತಾರ್, ಪಾಕಿಸ್ತಾನ, ಟರ್ಕಿ, ಈಜಿಪ್ಟ್ ಮತ್ತು ಜೋರ್ಡಾನ್ ಸೇರಿದಂತೆ ಪ್ರಮುಖ ಮುಸ್ಲಿಂ ಬಹುಸಂಖ್ಯಾತ ದೇಶಗಳು ಮುಂದಿನ ದಿನಗಳಲ್ಲಿ ಇಸ್ರೇಲ್ ಜೊತೆಗಿನ ಈ ಶಾಂತಿ ಒಪ್ಪಂದದ ಭಾಗವಾಗಬೇಕು ಎಂದು ಮನವಿ ಮಾಡಿದ್ದರು. ಆದರೆ ಪಾಕಿಸ್ತಾನದ ಈ ತೀವ್ರ ಪ್ರತಿರೋಧದ ನಡೆ ಸದ್ಯ ಅಮೆರಿಕದ ರಾಜತಾಂತ್ರಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಭಿನ್ನ ಸ್ಥಳಗಳಲ್ಲಿ ವಿಮಾನ ತಾಂತ್ರಿಕ ದೋಷ:‌ ಪ್ರಯಾಣಿಕರು ಸೇಫ್

Leave a Reply

Your email address will not be published. Required fields are marked *