TOP NEWS

America: ಇರಾನ್ ಬಿಕ್ಕಟ್ಟು ಇತ್ಯರ್ಥಕ್ಕೆ ರಾಜತಾಂತ್ರಿಕ ಪ್ರಯತ್ನ: ಮುಂದಿನ ಕೆಲವು ಗಂಟೆಗಳಲ್ಲಿ ಜಗತ್ತಿಗೆ ಶುಭ ಸುದ್ದಿ ಎಂದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ

America macro rubio talks about war ending

ನವದೆಹಲಿ: ಇರಾನ್ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ಸೃಷ್ಟಿಯಾಗಿರುವ ಜಾಗತಿಕ ತೈಲ ಬಿಕ್ಕಟ್ಟಿನ ಮಧ್ಯೆಯೇ, ಈ ಉದ್ವಿಗ್ನ ವಾತಾವರಣವನ್ನು ತಿಳಿಗೊಳಿಸಲು ಮಹತ್ವದ ರಾಜತಾಂತ್ರಿಕ ಒಪ್ಪಂದವೊಂದು ಏರ್ಪಡುವ ಮುನ್ಸೂಚನೆಯನ್ನು ಅಮೆರಿಕ (America) ನೀಡಿದೆ. ಇರಾನ್‌ನ ಪರಮಾಣು ಯೋಜನೆ ಹಾಗೂ ಜಲಸಂಧಿಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಇಡೀ ವಿಶ್ವವೇ ಮುಂದಿನ ಕೆಲವು ಗಂಟೆಗಳಲ್ಲಿ ಅತ್ಯಂತ ಸಕಾರಾತ್ಮಕ ಸುದ್ದಿಯೊಂದನ್ನು ಕೇಳುವ ಸಾಧ್ಯತೆಯಿದೆ ಎಂದು ಭಾರತ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಸುಳಿವು ನೀಡಿದ್ದಾರೆ.

ಜೈಶಂಕರ್‌ ಜೊತೆ ರೂಬಿಯೋ ಮಾತುಕತೆ

ನವದೆಹಲಿಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ನಡೆಸಿದ ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಈ ಪ್ರಮುಖ ವಿಷಯವನ್ನು ಹಂಚಿಕೊಂಡಿರುವ ರೂಬಿಯೋ, ಪ್ರಸ್ತುತ ನಡೆಯುತ್ತಿರುವ ಅಂತರರಾಷ್ಟ್ರೀಯ ರಾಜತಾಂತ್ರಿಕ ಮಾತುಕತೆಗಳು ಇರಾನ್‌ನ ಪರಮಾಣು ಅಸ್ತ್ರಗಳ ಭೀತಿಯಿಂದ ಜಗತ್ತನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಲಿವೆ ಎಂದು ಆಶಯ ವ್ಯಕ್ತಪಡಿಸಿದರು. ಆದರೆ, ಈ ಸಂಭವನೀಯ ಒಪ್ಪಂದದ ನಿಖರ ಸ್ವರೂಪ ಹಾಗೂ ವಿವರಗಳನ್ನು ಬಹಿರಂಗಪಡಿಸದ ಅವರ ಹೇಳಿಕೆಗಳು ಈಗ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿವೆ. ಇದೇ ವೇಳೆ ಭಾರತವನ್ನು ಅಮೆರಿಕದ ಅತ್ಯಂತ ಪ್ರಮುಖ ಮತ್ತು ನಂಬಿಕಸ್ಥ ಕಾರ್ಯತಂತ್ರದ ಪಾಲುದಾರ ರಾಷ್ಟ್ರ ಎಂದು ಬಣ್ಣಿಸಿದ ಅವರು, ಈ ಬಾಂಧವ್ಯವು ಕೇವಲ ಸಾಮಾನ್ಯ ಸಹಕಾರಕ್ಕೆ ಸೀಮಿತವಾಗಿಲ್ಲ, ಬದಲಿಗೆ ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು ಹಂಚಿಕೊಂಡಿರುವ ಸಮಾನ ಮೌಲ್ಯಗಳು ಹಾಗೂ ಹಿತಾಸಕ್ತಿಗಳ ಮೇಲೆ ಗಟ್ಟಿಯಾಗಿ ನಿಂತಿದೆ ಎಂದರು.

ಇದೇ ಸಂದರ್ಭದಲ್ಲಿ ಪ್ರಜಾಪ್ರಭುತ್ವ ದೇಶಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸರ್ಕಾರಗಳು ಎದುರಿಸುವ ಆಡಳಿತಾತ್ಮಕ ಸವಾಲುಗಳ ಬಗ್ಗೆಯೂ ರೂಬಿಯೋ ಮುಕ್ತವಾಗಿ ಮಾತನಾಡಿದರು. ಭಾರತ ಮತ್ತು ಅಮೆರಿಕದಂತಹ ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ನಾಯಕರು ತಾವು ತೆಗೆದುಕೊಳ್ಳುವ ಪ್ರತಿಯೊಂದು ಪ್ರಮುಖ ನಿರ್ಧಾರಗಳನ್ನೂ ತಮ್ಮ ದೇಶದ ಮತದಾರರಿಗೆ ಮತ್ತು ಸಾರ್ವಜನಿಕರಿಗೆ ನಿರಂತರವಾಗಿ ಸಮರ್ಥಿಸಿಕೊಳ್ಳಬೇಕಾಗುತ್ತದೆ. ಇಲ್ಲಿ ಪ್ರಬಲ ವಿರೋಧ ಪಕ್ಷಗಳು, ಮುಕ್ತ ಮಾಧ್ಯಮಗಳು ಮತ್ತು ಸಾರ್ವಜನಿಕರ ತೀವ್ರ ನಿಗಾ ಇರುವುದರಿಂದ, ಜನಪ್ರತಿನಿಧಿಗಳು ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಉಭಯ ದೇಶಗಳ ಆಡಳಿತಾತ್ಮಕ ರಚನೆಗಳು ಒಂದೇ ಆಗಿರುವುದರಿಂದ ಜಾಗತಿಕ ವಿಷಯಗಳಲ್ಲಿ ಸಹಜವಾಗಿಯೇ ಅತ್ಯಂತ ಆಪ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದ ರೂಬಿಯೋ ಅವರ ಈ ಮಾತುಗಳು, ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಜಗತ್ತಿಗೆ ಹೊಸ ಭರವಸೆ ನೀಡಿದೆ.

ಇದನ್ನೂ ಓದಿ: ಜಾಗತಿಕ ತೈಲ ಬಿಕ್ಕಟ್ಟಿನ ನಡುವೆಯೂ ದೇಶಿ ಗ್ರಾಹಕರಿಗೆ ನಿರಾಳತೆ ನೀಡಿದ ಭಾರತ: ದರ ಏರಿಕೆಗೆ ಜಾಗತಿಕ ವಿದ್ಯಮಾನಗಳೇ ಕಾರಣ

Leave a Reply

Your email address will not be published. Required fields are marked *