TOP NEWS

CBSE: ಸಿಬಿಎಸ್‌ಇ ಪ್ರೌಢಶಾಲಾ ಭಾಷಾ ನೀತಿ ಪರಿಷ್ಕರಣೆ: ಮುಂಬರುವ ಶೈಕ್ಷಣಿಕ ಸಾಲಿನಿಂದ ಮೂರು ಭಾಷೆಗಳ ಕಲಿಕೆ ಕಡ್ಡಾಯ

CBSE changed makes indian language mandatory

ನವದೆಹಲಿ: ಹೊಸ ನಿಯಮಾವಳಿಗಳ ಪ್ರಕಾರ, ಸಿಬಿಎಸ್‌ಇ (CBSE) ಅಡಿಯ ಪ್ರೌಢಶಾಲಾ ವಿದ್ಯಾರ್ಥಿಗಳು ಇನ್ಮುಂದೆ ಕಡ್ಡಾಯವಾಗಿ ಮೂರು ಭಾಷೆಗಳನ್ನು (R1, R2 ಮತ್ತು R3) ಕಲಿಯಬೇಕಾಗುತ್ತದೆ. ಈ ಮೂರರಲ್ಲಿ ಕನಿಷ್ಠ ಎರಡು ಭಾಷೆಗಳು ಕಡ್ಡಾಯವಾಗಿ ಭಾರತೀಯ ಮೂಲದ ಸ್ಥಳೀಯ ಅಥವಾ ಪ್ರಾದೇಶಿಕ ಭಾಷೆಗಳೇ ಆಗಿರಬೇಕು ಎಂದು ಮಂಡಳಿ ಕಡ್ಡಾಯಗೊಳಿಸಿದೆ. ಮುಂಬರುವ ಜುಲೈ 1 ರಿಂದ ಈ ನಿಯಮ ಜಾರಿಗೆ ಬರಲಿದ್ದು, ಇತ್ತೀಚೆಗೆ ಬಿಡುಗಡೆಯಾದ ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮವನ್ನು ಪರಾಮರ್ಶಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಸಕ್ತ ಸಾಲಿನ ತರಗತಿಗಳು ಈಗಾಗಲೇ ಆರಂಭವಾಗಿರುವುದರಿಂದ, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಹಂತ-ಹಂತವಾಗಿ ಈ ಹೊಸ ನೀತಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ. ಈ ವ್ಯವಸ್ಥೆಯಲ್ಲಿ ವಿದೇಶಿ ಭಾಷೆಯನ್ನು ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಕೆಲವು ನಿಬಂಧನೆಗಳನ್ನು ವಿಧಿಸಲಾಗಿದ್ದು, ಅವರು ಆಯ್ಕೆ ಮಾಡಿಕೊಳ್ಳುವ ಉಳಿದ ಎರಡು ಭಾಷೆಗಳು ಭಾರತೀಯ ಭಾಷೆಗಳಾಗಿದ್ದರೆ ಮಾತ್ರ ವಿದೇಶಿ ಭಾಷೆ ಓದಲು ಅವಕಾಶ ಸಿಗಲಿದೆ. ಇಲ್ಲದಿದ್ದರೆ, ಮೂರು ಕಡ್ಡಾಯ ಭಾಷೆಗಳ ಹೊರತಾಗಿ ನಾಲ್ಕನೇ ಐಚ್ಛಿಕ ವಿಷಯವಾಗಿ ವಿದೇಶಿ ಭಾಷೆಯನ್ನು ಅಭ್ಯಾಸ ಮಾಡಬಹುದು.

ಜೂನ್‌ 1ರಿಂದ ಹೊಸ ನಿಯಮ

ಭಾಷಾ ಕಲಿಕೆಗೆ ಸಂಬಂಧಿಸಿದಂತೆ ಪ್ರೌಢಶಾಲೆ ಮತ್ತು ಮಧ್ಯಮ ಶಾಲಾ ಹಂತಗಳ ನಡುವೆ ವ್ಯಾಕರಣ, ಬರವಣಿಗೆ, ಓದುವಿಕೆ ಹಾಗೂ ಸಂವಹನ ಕೌಶಲ್ಯಗಳಲ್ಲಿ ಸಾಕಷ್ಟು ಸಾಮ್ಯತೆ ಇರುವುದರಿಂದ ಈ ಬದಲಾವಣೆಯನ್ನು ವಿದ್ಯಾರ್ಥಿಗಳು ಸುಲಭವಾಗಿ ಅಳವಡಿಸಿಕೊಳ್ಳಲಿದ್ದಾರೆ ಎಂದು ಸಿಬಿಎಸ್‌ಇ ಆಶಿಸಿದೆ. ಸದ್ಯಕ್ಕೆ ಮೂರನೇ ಭಾಷೆಯ ಕಲಿಕೆಗೆ ಪ್ರತ್ಯೇಕ ಪುಸ್ತಕಗಳು ಲಭ್ಯವಿಲ್ಲದ ಕಾರಣ, ತಾತ್ಕಾಲಿಕ ಕ್ರಮವಾಗಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು 6ನೇ ತರಗತಿಯ ಪಠ್ಯಪುಸ್ತಕಗಳನ್ನು ಬಳಸಿಕೊಂಡು ಅಭ್ಯಾಸ ಮಾಡಬೇಕಾಗುತ್ತದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಸ್ಥಳೀಯ ಸಾಹಿತ್ಯ, ಕವನಗಳು ಹಾಗೂ ಸಣ್ಣ ಕಥೆಗಳನ್ನು ಪೂರಕವಾಗಿ ಬೋಧಿಸುವಂತೆ ಶಾಲೆಗಳಿಗೆ ಸೂಚಿಸಲಾಗಿದೆ. ಈ ಪೂರಕ ಪಠ್ಯಸಾಮಗ್ರಿಗಳ ಆಯ್ಕೆ ಮತ್ತು ಬೋಧನಾ ವಿಧಾನದ ಕುರಿತು ಜೂನ್ 15ರ ಒಳಗಾಗಿ ಸವಿಸ್ತಾರವಾದ ಮಾರ್ಗದರ್ಶನವನ್ನು ಬಿಡುಗಡೆ ಮಾಡಲಾಗುವುದು ಎಂದು ಮಂಡಳಿ ತಿಳಿಸಿದೆ.

ಕೆಲ ವಿನಾಯಿತಿ ನೀಡಿದ ಸಿಬಿಎಸ್‌ಇ

ಹೊಸ ಭಾಷಾ ನೀತಿ ಜಾರಿಗೆ ತರುವಾಗ ಕೆಲವು ಶಾಲೆಗಳಿಗೆ ಎದುರಾಗಬಹುದಾದ ಪ್ರಾದೇಶಿಕ ಭಾಷಾ ಶಿಕ್ಷಕರ ಕೊರತೆಯನ್ನು ನೀಗಿಸಲು ಸಿಬಿಎಸ್‌ಇ ಕೆಲವು ವಿನಾಯಿತಿಗಳನ್ನು ನೀಡಿದೆ. ಸ್ಥಳೀಯ ಭಾರತೀಯ ಭಾಷೆಗಳನ್ನು ಕಲಿಸಲು ಅರ್ಹ ಶಿಕ್ಷಕರು ತಕ್ಷಣಕ್ಕೆ ಲಭ್ಯವಿಲ್ಲದಿದ್ದರೆ, ಶಾಲೆಗಳು ‘ಸಹೋದಯ’ ಕ್ಲಸ್ಟರ್‌ಗಳ ಮೂಲಕ ನೆರೆಯ ಇತರ ಶಾಲೆಗಳೊಂದಿಗೆ ಶಿಕ್ಷಕರ ಸಂಪನ್ಮೂಲವನ್ನು ಹಂಚಿಕೊಳ್ಳಬಹುದು. ಇದರೊಂದಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಸಂಯೋಜನೆಯ ಹೈಬ್ರಿಡ್ ಬೋಧನೆ, ನಿವೃತ್ತ ಭಾಷಾ ಶಿಕ್ಷಕರ ನೇಮಕ ಅಥವಾ ಸೂಕ್ತ ವಿದ್ಯಾರ್ಹತೆ ಹೊಂದಿರುವ ಸ್ನಾತಕೋತ್ತರ ಪದವೀಧರರನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲು ಶಾಲೆಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಜುಲೈ 1 ರೊಳಗೆ ಸಂವಿಧಾನದ ಪರಿಶಿಷ್ಟದಲ್ಲಿರುವ 19 ಅಧಿಕೃತ ಭಾರತೀಯ ಭಾಷೆಗಳ 6ನೇ ತರಗತಿಯ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಪೂರೈಸಲಾಗುವುದು ಎಂದು ಸಿಬಿಎಸ್‌ಇ ಭರವಸೆ ನೀಡಿದೆ.

ಇದನ್ನೂ ಓದಿ: ವಿಜಯ್ ಸಿಎಂ ಆದದ್ದಕ್ಕೆ ಆಂಧ್ರದಲ್ಲಿ ಜನಾಕ್ರೋಶವೇ? ಜನರ ಹೋಲಿಕೆಗೆ ಪವನ್ ಕಲ್ಯಾಣ್ ಕೊಟ್ಟ ಚಾಟಿ ಏಟು!

Leave a Reply

Your email address will not be published. Required fields are marked *