TOP NEWS

Bhojshala: ಹೈಕೋರ್ಟ್ ಮಹತ್ವದ ಆದೇಶ: ಭೋಜಶಾಲಾ ಮಂದಿರಕ್ಕೆ ವಾಗ್ದೇವಿ ವಿಗ್ರಹ ಮರಳುವ ಕಾಲ ಹತ್ತಿರ?

Madhya Pradesh high court declares Bhojshala as hindu temple and orders to protect it

ಮಧ್ಯಪ್ರದೇಶ: ಇಲ್ಲಿನ ಹೈಕೋರ್ಟ್‌ನ ಇಂದೋರ್ ಪೀಠವು ಧಾರ ಜಿಲ್ಲೆಯ ವಿವಾದಿತ ಭೋಜಶಾಲಾ (Bhojshala) ಪ್ರಕರಣದಲ್ಲಿ ಇಂದು ಅತ್ಯಂತ ಮಹತ್ವದ ತೀರ್ಪು ಪ್ರಕಟಿಸಿದೆ. ಭೋಜಶಾಲಾ ಸಂಕೀರ್ಣವು ಮೂಲತಃ ಮಂದಿರವೇ ಎಂದು ಘೋಷಿಸಿರುವ ನ್ಯಾಯಾಲಯವು, ಈ ಐತಿಹಾಸಿಕ ವಿವಾದಕ್ಕೆ ದೊಡ್ಡ ತಿರುವು ನೀಡಿದೆ. ಪರಮಾರ ರಾಜವಂಶದ ರಾಜ ಭೋಜ ಅವರು ಸ್ಥಾಪಿಸಿದ ಈ ಸ್ಥಳವು ಸಂಸ್ಕೃತ ಅಧ್ಯಯನದ ಪ್ರಮುಖ ಕೇಂದ್ರವಾಗಿತ್ತು ಎಂಬ ಅಂಶವನ್ನು ಹೈಕೋರ್ಟ್ ಸ್ಪಷ್ಟವಾಗಿ ಮನ್ನಿಸಿದೆ.

ನ್ಯಾಯಾಪೀಠ ಹೇಳಿದ್ದೇನು?

ಭಾರತೀಯ ಪುರಾತತ್ವ ಇಲಾಖೆ (ASI) ಸಲ್ಲಿಸಿದ್ದ ವೈಜ್ಞಾನಿಕ ಸಮೀಕ್ಷೆಯ ವರದಿ ಮತ್ತು ಲಭ್ಯವಿರುವ ಐತಿಹಾಸಿಕ ಸಾಹಿತ್ಯಗಳನ್ನು ಆಳವಾಗಿ ಪರಿಶೀಲಿಸಿದ ನ್ಯಾಯಪೀಠವು ಈ ತೀರ್ಮಾನಕ್ಕೆ ಬಂದಿದೆ. ಈ ವಿವಾದಿತ ಪ್ರದೇಶದ ಮೂಲ ಸ್ವರೂಪವು ‘ಭೋಜಶಾಲಾ’ ಆಗಿತ್ತು ಎಂಬುದಕ್ಕೆ ಭದ್ರವಾದ ಪುರಾವೆಗಳಿವೆ ಎಂದು ಕೋರ್ಟ್ ತಿಳಿಸಿದೆ. ವಿಶೇಷವೆಂದರೆ, ಈ ಸ್ಥಳದಲ್ಲಿ ಹಿಂದೂಗಳ ಪೂಜಾ ಪರಂಪರೆಯು ಎಂದಿಗೂ ನಿಂತಿರಲಿಲ್ಲ ಮತ್ತು ಅದು ಶತಶತಮಾನಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ ಎಂಬ ಮಹತ್ವದ ಟಿಪ್ಪಣಿಯನ್ನು ನ್ಯಾಯಾಲಯ ಮಾಡಿದೆ.

ಪ್ರಾಚೀನ ಸ್ಮಾರಕಗಳು ಹಾಗೂ ಐತಿಹಾಸಿಕ ಪ್ರಾಮುಖ್ಯತೆಯುಳ್ಳ ದೇವಸ್ಥಾನಗಳ ಗರ್ಭಗುಡಿಗಳನ್ನು ರಕ್ಷಿಸುವುದು ಮತ್ತು ಸಂರಕ್ಷಿಸುವುದು ಪ್ರತಿಯೊಂದು ಸರ್ಕಾರದ ಸಾಂವಿಧಾನಿಕ ಜವಾಬ್ದಾರಿಯಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇದೇ ವೇಳೆ ಮುಸ್ಲಿಂ ಸಮುದಾಯದವರಿಗೆ ನಮಾಜ್ ಮಾಡಲು ಅನುಕೂಲವಾಗುವಂತೆ ಧಾರ ಜಿಲ್ಲೆಯ ಬೇರೆಡೆ ಜಮೀನು ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿದೆ.

ಇನ್ನೊಂದು ವಿಶೇಷವೆಂದರೆ, ಪ್ರಸ್ತುತ ಲಂಡನ್‌ನ ವಸ್ತುಸಂಗ್ರಹಾಲಯದಲ್ಲಿರುವ ವಾಗ್ದೇವಿ (ಸರಸ್ವತಿ) ದೇವಿಯ ಮೂಲ ವಿಗ್ರಹವನ್ನು ಮರಳಿ ಭಾರತಕ್ಕೆ ತಂದು ಭೋಜಶಾಲಾದಲ್ಲಿ ಪ್ರತಿಷ್ಠಾಪಿಸುವ ಕುರಿತು ಸಲ್ಲಿಕೆಯಾಗಿರುವ ಮನವಿಗಳನ್ನು ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ. ಆಯೋಧ್ಯೆ ಪ್ರಕರಣದಂತೆಯೇ ಈ ತೀರ್ಪು ಕೂಡ ಐತಿಹಾಸಿಕ ದಾಖಲೆಗಳು ಮತ್ತು ವೈಜ್ಞಾನಿಕ ಆಧಾರದ ಮೇಲೆ ಹೊರಬಿದ್ದಿದ್ದು, ದೇಶಾದ್ಯಂತ ಭಾರಿ ಕುತೂಹಲ ಮೂಡಿಸಿದೆ. ಮುಂದೆ ಈ ಆಸ್ತಿಯ ರಕ್ಷಣೆ ಮತ್ತು ಸಂರಕ್ಷಣೆಯ ಜವಾಬ್ದಾರಿಯನ್ನು ಪುರಾತತ್ವ ಇಲಾಖೆಯೇ ಮುಂದುವರಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಅಂಕ ಮುಖ್ಯವಲ್ಲ, ಮಗನ ಖುಷಿಯೇ ಮುಖ್ಯ: 55% ಅಂಕಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಮುಂಬೈ ಕುಟುಂಬದ ಮಾದರಿ ನಡೆ!

Leave a Reply

Your email address will not be published. Required fields are marked *