ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಭೀತಿ ಹಾಗೂ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಇಂಧನ ಉಳಿತಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಅತ್ಯಂತ ಸಕ್ರಿಯವಾಗಿ ಸ್ಪಂದಿಸಿದ್ದಾರೆ. ಗುರುವಾರ ಮುಂಬೈನ ತಮ್ಮ ಅಧಿಕೃತ ನಿವಾಸ ‘ವರ್ಷಾ’ದಿಂದ ವಿಧಾನ ಭವನಕ್ಕೆ ಸ್ವತಃ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬರುವ ಮೂಲಕ ಅವರು ಮಿತವ್ಯಯದ ಸಂದೇಶ ಸಾರಿದ್ದಾರೆ.
ಬೆಂಗಾವಲು ಪಡೆ ಕಡಿತ
ಮುಖ್ಯಮಂತ್ರಿಗಳ ಜೊತೆಗೆ ಸಚಿವ ಆಶಿಶ್ ಶೆಲಾರ್ ಅವರು ಕೂಡ ಬೈಕ್‌ನಲ್ಲಿ ಹಿಂಬದಿಯ ಸವಾರರಾಗಿ ಆಗಮಿಸಿದ್ದು ವಿಶೇಷವಾಗಿತ್ತು. ಹೆಲ್ಮೆಟ್ ಧರಿಸಿ, ಬೆಂಗಾವಲು ಪಡೆಗಳ ಸಂಖ್ಯೆಯನ್ನು ಶೇ. 50ಕ್ಕಿಂತ ಹೆಚ್ಚು ಕಡಿತಗೊಳಿಸಿ ಸರಳವಾಗಿ ಆಗಮಿಸಿದ ಫಡ್ನವಿಸ್, ಸರ್ಕಾರದ ಈ ಬದ್ಧತೆಯನ್ನು ಸಾರ್ವಜನಿಕರಿಗೆ ಸಾಂಕೇತಿಕವಾಗಿ ತೋರಿಸಿಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ವಿದೇಶಿ ವಿನಿಮಯ ಮತ್ತು ಇಂಧನ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಚಿವರು ಮತ್ತು ಅಧಿಕಾರಿಗಳು ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಬೇಕು ಎಂದು ತಿಳಿಸಿದರು.
ಈ ಸಾಂಕೇತಿಕ ನಡಯ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರವು ಕಟ್ಟುನಿಟ್ಟಾದ ಮಿತವ್ಯಯ ಕ್ರಮಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸರ್ಕಾರಿ ಕಚೇರಿಗಳಲ್ಲಿ ಎಸಿ ತಾಪಮಾನವನ್ನು 24°C ನಿಂದ 26°C ನಡುವೆ ಇರುವಂತೆ ನೋಡಿಕೊಳ್ಳುವುದು, ಹಗಲಿನಲ್ಲಿ ನೈಸರ್ಗಿಕ ಬೆಳಕನ್ನು ಗರಿಷ್ಠ ಪ್ರಮಾಣದಲ್ಲಿ ಬಳಸುವುದು ಮತ್ತು ಅನಗತ್ಯ ವಿದ್ಯುತ್ ಉಪಕರಣಗಳನ್ನು ಆಫ್ ಮಾಡಲು ಸೂಚಿಸಲಾಗಿದೆ. ಸಚಿವರು ಮತ್ತು ಹಿರಿಯ ಅಧಿಕಾರಿಗಳ ವಿದೇಶಿ ಪ್ರವಾಸಗಳನ್ನು ಮುಂದಿನ ಆರು ತಿಂಗಳ ಕಾಲ ಸ್ಥಗಿತಗೊಳಿಸಲಾಗಿದೆ. ಅಷ್ಟೇ ಅಲ್ಲದೆ, ಅಧಿಕಾರಿಗಳು ವಾರದಲ್ಲಿ ಕನಿಷ್ಠ ಒಂದು ಬಾರಿ ಮೆಟ್ರೋ, ಲೋಕಲ್ ಟ್ರೈನ್ ಅಥವಾ ಬಸ್ ಮೂಲಕ ಸಂಚರಿಸುವಂತೆ ಸಲಹೆ ನೀಡಲಾಗಿದೆ.
ರ್ಯಾಲಿಗಳಿಗೆ ಅನುಮತಿ ನೀಡದಿರಲು ಆದೇಶ
ಬದಲಾದ ನಿಯಮದಂತೆ ಇನ್ನು ಮುಂದೆ ಯಾವುದೇ ರೀತಿಯ ವಾಹನ ರ್ಯಾಲಿಗಳಿಗೆ ಅನುಮತಿ ನೀಡದಿರಲು ಸರ್ಕಾರ ನಿರ್ಧರಿಸಿದೆ. ಸಭೆ ಮತ್ತು ಸೆಮಿನಾರ್‌ಗಳನ್ನು ಸಾಧ್ಯವಾದಷ್ಟು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲು ಸೂಚಿಸಲಾಗಿದ್ದು, ಮುಂದಿನ ಆರು ತಿಂಗಳ ಕಾಲ ಬಾಹ್ಯ ಸಲಹೆಗಾರರನ್ನು ನೇಮಿಸಿಕೊಳ್ಳದಂತೆ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ. ಆಹಾರ ಪದ್ಧತಿಯಲ್ಲೂ ಬದಲಾವಣೆ ತರಲು ಮುಂದಾಗಿರುವ ಸರ್ಕಾರ, ಹೋಟೆಲ್ ಮತ್ತು ಸರ್ಕಾರಿ ಕ್ಯಾಂಟೀನ್‌ಗಳಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಸಲು ಹಾಗೂ ತಾಳೆ ಎಣ್ಣೆಯ ಬದಲಿಗೆ ನೆಲಗಡಲೆ ಅಥವಾ ಸಾಸಿವೆ ಎಣ್ಣೆಯನ್ನು ಬಳಸಲು ಉತ್ತೇಜನ ನೀಡುತ್ತಿದೆ. ಕೃಷಿ ವಲಯದಲ್ಲಿ ರಾಸಾಯನಿಕ ಗೊಬ್ಬರಗಳ ಅವಲಂಬನೆ ತಗ್ಗಿಸಿ ಸಾವಯವ ಕೃಷಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಆಡಳಿತ ಯಂತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಫಡ್ನವಿಸ್ ಸರ್ಕಾರ ನಾಂದಿ ಹಾಡಿದೆ.
ಇದನ್ನೂ ಓದಿ: “ನಮ್ಮದು ಕುದುರೆ ವ್ಯಾಪಾರದ ಸರ್ಕಾರವಲ್ಲ, ಕುದುರೆ ವೇಗದ ಆಡಳಿತ”: ಟೀಕಾಕಾರರಿಗೆ ಸಿಎಂ ವಿಜಯ್ ತಿರುಗೇಟು!
