ನವದೆಹಲಿ: ನೀಟ್ (NEET UG) ಪರೀಕ್ಷೆ ರದ್ದತಿಯಿಂದ ಗೊಂದಲಕ್ಕೊಳಗಾಗಿರುವ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ಸ್ಪಷ್ಟನೆಗಳನ್ನು ನೀಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಹಿನ್ನೆಲೆಯಲ್ಲಿ ಮೇ 3ರಂದು ನಡೆದಿದ್ದ ಪರೀಕ್ಷೆಯನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದ್ದು, ಮರು ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗಿದ್ದ ಹಣಕಾಸು ಮತ್ತು ಪ್ರಕ್ರಿಯೆಯ ಕುರಿತಾದ ಅನುಮಾನಗಳನ್ನು ಎನ್ಟಿಎ ಬಗೆಹರಿಸಿದೆ. ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡದ ತನಿಖೆಯಲ್ಲಿ ಸುಮಾರು 120 ಪ್ರಶ್ನೆಗಳು ಮೊದಲೇ ಸೋರಿಕೆಯಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇಡೀ ಪ್ರಕರಣದ ತನಿಖೆಯನ್ನು ಈಗ ಸಿಬಿಐ ನಡೆಸುತ್ತಿದೆ.
ಹೆಚ್ಚುವರಿ ಶುಲ್ಕದ ಅವಶ್ಯಕತೆ ಇಲ್ಲ
ವಿದ್ಯಾರ್ಥಿಗಳಿಗೆ ಎದುರಾಗಿದ್ದ ಶುಲ್ಕದ ಆತಂಕಕ್ಕೆ ಉತ್ತರ ನೀಡಿರುವ ಎನ್ಟಿಎ, ಮರು ಪರೀಕ್ಷೆಗಾಗಿ ಯಾವುದೇ ಹೆಚ್ಚುವರಿ ಹಣವನ್ನು ಸಂಗ್ರಹಿಸುವುದಿಲ್ಲ ಎಂದು ತಿಳಿಸಿದೆ. ಈ ಹಿಂದೆ ಪಾವತಿಸಲಾಗಿದ್ದ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹಿಂತಿರುಗಿಸಲಾಗುವುದು ಮತ್ತು ಮೊದಲೇ ಸಲ್ಲಿಸಲಾಗಿರುವ ಅರ್ಜಿ ನಮೂನೆಗಳು ಹಾಗೂ ಆಯ್ಕೆ ಮಾಡಲಾದ ಪರೀಕ್ಷಾ ಕೇಂದ್ರಗಳ ವಿವರಗಳೇ ಮರು ಪರೀಕ್ಷೆಗೂ ಚಾಲ್ತಿಯಲ್ಲಿರುತ್ತವೆ. ಹೀಗಾಗಿ ಅಭ್ಯರ್ಥಿಗಳು ಮತ್ತೊಮ್ಮೆ ನೋಂದಣಿ ಪ್ರಕ್ರಿಯೆ ನಡೆಸುವ ಅಥವಾ ಹೊಸ ಅರ್ಜಿಗಳನ್ನು ಭರ್ತಿ ಮಾಡುವ ಅಗತ್ಯವಿರುವುದಿಲ್ಲ. ಆದರೆ, ಹಳೆಯ ಪ್ರವೇಶ ಪತ್ರಗಳು ಇನ್ನು ಮುಂದೆ ಮಾನ್ಯವಾಗುವುದಿಲ್ಲ ಮತ್ತು ಪರೀಕ್ಷೆಯ ಹೊಸ ದಿನಾಂಕ ನಿಗದಿಯಾದ ಕೂಡಲೇ ಹೊಸ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
In continuation of its press release dated 10 May 2026, the National Testing Agency wishes to inform candidates, parents, and members of the public of the following decisions taken in respect of NEET (UG) 2026. NTA had, on 8 May 2026, referred the matters then under consideration…
— National Testing Agency (@NTA_Exams) May 12, 2026
ಪಠ್ಯಕ್ರಮ ಮತ್ತು ಪರೀಕ್ಷಾ ಮಾದರಿಯ ಬಗ್ಗೆಯೂ ಆತಂಕ ಬೇಡ ಎಂದು ಎನ್ಟಿಎ ಹೇಳಿದೆ. ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಈಗಾಗಲೇ ಚಾಲನೆಯಲ್ಲಿರುವುದರಿಂದ ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪರೀಕ್ಷೆಯ ಅವಧಿ, ಅಂಕಗಳ ಹಂಚಿಕೆ ಮತ್ತು ವಿಷಯಗಳೆಲ್ಲವೂ ಮೊದಲಿನಂತೆಯೇ ಇರಲಿವೆ. ಆದರೆ, ಅಕ್ರಮಗಳನ್ನು ತಡೆಯಲು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲು ಉದ್ದೇಶಿಸಲಾಗಿದೆ. ತಪಾಸಣಾ ಪ್ರಕ್ರಿಯೆ, ಬಯೋಮೆಟ್ರಿಕ್ ದೃಢೀಕರಣ ಮತ್ತು ಪರೀಕ್ಷಾ ಕೇಂದ್ರಗಳ ಕಣ್ಗಾವಲಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ಅಧಿಕಾರಿಗಳು ಯೋಜಿಸಿದ್ದಾರೆ.
ಮರು ಪರೀಕ್ಷೆಯ ದಿನಾಂಕವನ್ನು ಎನ್ಟಿಎ ಇನ್ನು ಘೋಷಿಸಿಲ್ಲವಾದರೂ, ಶೀಘ್ರದಲ್ಲೇ ವೇಳಾಪಟ್ಟಿಯನ್ನು ಪ್ರಕಟಿಸುವುದಾಗಿ ಭರವಸೆ ನೀಡಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಪ್ರಸಕ್ತ ವರ್ಷದ ವೈದ್ಯಕೀಯ ಪ್ರವೇಶಾತಿ ಪ್ರಕ್ರಿಯೆ ಮತ್ತು ಕೌನ್ಸೆಲಿಂಗ್ ವಿಳಂಬವಾಗುವುದು ಬಹುತೇಕ ಖಚಿತವಾಗಿದೆ. ಹೊಸದಾಗಿ ಫಲಿತಾಂಶ ಪ್ರಕಟಣೆ ಮತ್ತು ಮೆರಿಟ್ ಪಟ್ಟಿ ಸಿದ್ಧಪಡಿಸಬೇಕಿರುವುದರಿಂದ ಎಂಬಿಬಿಎಸ್, ಬಿಡಿಎಸ್ ಹಾಗೂ ಆಯುಷ್ ಕೋರ್ಸ್ಗಳ ಪ್ರವೇಶಾತಿ ವೇಳಾಪಟ್ಟಿಯಲ್ಲಿ ಏರುಪೇರಾಗಲಿದ್ದು, ವಿದ್ಯಾರ್ಥಿಗಳು ತಾಳ್ಮೆಯಿಂದ ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ.
ಇದನ್ನೂ ಓದಿ: ಗೆಸ್ ಪೇಪರ್ನಿಂದ ಬಯಲಾಯ್ತು ನೀಟ್ ಹಗರಣ, ಆತಂಕದಲ್ಲಿ ವಿದ್ಯಾರ್ಥಿಗಳ ಭವಿಷ್ಯ
