ಚೆನ್ನೈ: ತಮಿಳುನಾಡು ಚುನಾವಣಾ ಫಲಿತಾಂಶವು ರಾಜ್ಯವನ್ನು ಕುತೂಹಲಕಾರಿ ಘಟ್ಟಕ್ಕೆ ತಂದು ನಿಲ್ಲಿಸಿದೆ. ನಟ ವಿಜಯ್ (Vijay) ಸಾರಥ್ಯದ ಟಿವಿಕೆ (TVK) ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಸರ್ಕಾರ ರಚಿಸಲು ಅಗತ್ಯವಿರುವ 118ರ ಗಡಿ ತಲುಪಲು ಇನ್ನೂ 10 ಸ್ಥಾನಗಳ ಅವಶ್ಯಕತೆಯಿದೆ. ಇದೇ ಹೊತ್ತಿನಲ್ಲಿ, ವಿಜಯ್ ಅವರನ್ನು ಅಧಿಕಾರದಿಂದ ದೂರವಿಡಲು ಬದ್ಧವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಕೈಜೋಡಿಸುತ್ತವೆಯೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.
ಮೈತ್ರಿಯ ಲೆಕ್ಕಾಚಾರ: ಸದ್ಯದ ಅಂಕಿಅಂಶಗಳ ಪ್ರಕಾರ, ಡಿಎಂಕೆ ಮೈತ್ರಿಕೂಟವು 68 ಸ್ಥಾನಗಳನ್ನು ಹಾಗೂ ಎಐಎಡಿಎಂಕೆ ಮೈತ್ರಿಕೂಟವು 53 ಸ್ಥಾನಗಳನ್ನು ಹೊಂದಿವೆ. ಪ್ರತ್ಯೇಕವಾಗಿ ಇವೆರಡೂ ಪಕ್ಷಗಳು ಟಿವಿಕೆಗಿಂತ ಹಿಂದೆ ಇವೆಯಾದರೂ, ಒಂದು ವೇಳೆ ಕೈಜೋಡಿಸಿದರೆ ಇವರ ಒಟ್ಟು ಬಲ 121ಕ್ಕೆ ಏರಲಿದೆ. ಇದು ಬಹುಮತ ಸಾಬೀತುಪಡಿಸಲು ಬೇಕಾದ 118ರ ಮ್ಯಾಜಿಕ್ ನಂಬರ್ಗಿಂತ ಹೆಚ್ಚಾಗಿದೆ. ಆದರೆ, ಕಳೆದ ಐದು ದಶಕಗಳಿಂದ ಪರಸ್ಪರ ವಿರೋಧಿಸುತ್ತಲೇ ಬಂದಿರುವ ಈ ಎರಡು ದ್ರಾವಿಡ ಪಕ್ಷಗಳು ಈಗ ಒಂದಾಗುವುದು ಅಷ್ಟು ಸುಲಭದ ಮಾತಲ್ಲ.
ಸೈದ್ಧಾಂತಿಕ ಸಂಘರ್ಷ: ಕೇವಲ ವಿಜಯ್ ಅವರನ್ನು ತಡೆಯಲು ಮೈತ್ರಿ ಮಾಡಿಕೊಂಡರೆ ಅದು ಉಭಯ ಪಕ್ಷಗಳ ಅಸ್ತಿತ್ವಕ್ಕೇ ಧಕ್ಕೆ ತರಬಹುದು ಎಂಬ ಆತಂಕವೂ ನಾಯಕರಿಗಿದೆ. ಅಲ್ಲದೆ, ಎಐಎಡಿಎಂಕೆ ಮೈತ್ರಿಕೂಟದಲ್ಲಿ ಬಿಜೆಪಿ ಇರುವುದು ಡಿಎಂಕೆಗೆ ದೊಡ್ಡ ಮುಜುಗರದ ಸಂಗತಿಯಾಗಿದೆ. ಸಿದ್ಧಾಂತ ಮತ್ತು ಹಗೆತನದ ನಡುವೆ ಈ ಮೈತ್ರಿ ಸಾಧ್ಯವೇ ಎಂಬುದು ಸದ್ಯದ ಪ್ರಶ್ನೆ.
ರಾಜ್ಯಪಾಲರ ಕಟ್ಟುನಿಟ್ಟಿನ ನಿಲುವು: ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಜ್ಜಾಗಿದ್ದ ವಿಜಯ್ ಅವರಿಗೆ ರಾಜ್ಯಪಾಲರು ಮಹತ್ವದ ಸೂಚನೆ ನೀಡಿದ್ದಾರೆ. ಅತಿದೊಡ್ಡ ಪಕ್ಷ ಎಂಬ ಕಾರಣಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ, ಬದಲಿಗೆ 118 ಶಾಸಕರ ಸಹಿ ಇರುವ ಬೆಂಬಲದ ಪತ್ರ ನೀಡುವುದು ಕಡ್ಡಾಯ ಎಂದು ಷರತ್ತು ವಿಧಿಸಿದ್ದಾರೆ. ಇದರಿಂದಾಗಿ ವಿಜಯ್ ಅವರಿಗೆ ಸಣ್ಣ ಪಕ್ಷಗಳು ಅಥವಾ ಪಕ್ಷೇತರ ಶಾಸಕರ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ.
ಒಟ್ಟಾರೆಯಾಗಿ, ತಮಿಳುನಾಡು ರಾಜಕಾರಣದಲ್ಲಿ ಈಗ ‘ದಳಪತಿ’ಯ ಹಾದಿ ಸುಗಮವಾಗಿಲ್ಲ. ಹಳೆಯ ರಾಜಕೀಯ ಶಕ್ತಿಗಳು ಒಂದಾಗಿ ವಿಜಯ್ ಅವರಿಗೆ ಶಾಕ್ ನೀಡುತ್ತವೋ ಅಥವಾ ವಿಜಯ್ ಇತರರ ಬೆಂಬಲದೊಂದಿಗೆ ಗದ್ದುಗೆ ಏರುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ವಿಜಯ್ ಸರ್ಕಾರಕ್ಕೆ ಆರು ತಿಂಗಳ ಕಾಲ ಡಿಎಂಕೆ ತೊಂದರೆ ನೀಡುವುದಿಲ್ಲ ಎಂದ ಸ್ಟಾಲಿನ್!
