ನವದೆಹಲಿ: ಆರೋಗ್ಯ ವೆಚ್ಚದ ಭೀತಿಯಲ್ಲಿದ್ದ ರೋಗಿಗಳಿಗೆ ಕೇಂದ್ರ ಸರ್ಕಾರವು ಭರ್ಜರಿ ಸಮಾಧಾನ ನೀಡಿದೆ. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು (NPPA) ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಬಳಸುವ ಒಟ್ಟು 42 ಅಗತ್ಯ ಔಷಧಗಳ (Good News) ಬೆಲೆಯನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಔಷಧ ಬೆಲೆ ನಿಯಂತ್ರಣ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದ್ದು, ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.
ಯಾವೆಲ್ಲಾ ಮಾತ್ರೆಗಳ ಬೆಲೆ ಕಡಿಮೆ? ದಿನನಿತ್ಯ ಬಳಸುವ ಪ್ರಮುಖ ಕಾಂಬಿನೇಷನ್ ಔಷಧಗಳ ಬೆಲೆಯಲ್ಲಿ ಗಣನೀಯ ಇಳಿಕೆ ಮಾಡಲಾಗಿದೆ. ಮುಖ್ಯವಾಗಿ:
- ಸಕ್ಕರೆ ಕಾಯಿಲೆ (Diabetes): ಮಧುಮೇಹ ನಿಯಂತ್ರಣಕ್ಕೆ ಬಳಸುವ ಗ್ಲಿಕ್ಲಾಜೈಡ್ ಮತ್ತು ಮೆಟ್ಫಾರ್ಮಿನ್ ಮಿಶ್ರಿತ ಮಾತ್ರೆಯ ಬೆಲೆಯನ್ನು ಪ್ರತಿ ಟ್ಯಾಬ್ಲೆಟ್ಗೆ 10.53 ರೂಪಾಯಿಗೆ ಇಳಿಸಲಾಗಿದೆ.
- ಕೊಲೆಸ್ಟ್ರಾಲ್ ಮತ್ತು ಬಿಪಿ: ಹೃದಯದ ಆರೋಗ್ಯಕ್ಕೆ ಪೂರಕವಾದ ಅಟೋರ್ವಾಸ್ಟಾಟಿನ್ ಔಷಧಗಳ ಬೆಲೆಯನ್ನು 21.36 ರೂ. ನಿಂದ 32.46 ರೂ. ನಡುವೆ ಮಿತಿಗೊಳಿಸಲಾಗಿದೆ.
- ಸೋಂಕು ನಿವಾರಕ (Antibiotics): ಸೋಂಕುಗಳ ಚಿಕಿತ್ಸೆಗೆ ಬಳಸುವ ಸೆಫಿಕ್ಸಿಮ್ ಮಾತ್ರೆಯ ಬೆಲೆ ಈಗ ಕೇವಲ 25 ರೂಪಾಯಿ ಮಾತ್ರ.
- ಹಾರ್ಮೋನ್ ಸಮಸ್ಯೆ: ಹಾರ್ಮೋನ್ ಚಿಕಿತ್ಸೆಗೆ ಬಳಸುವ ದುಬಾರಿ ಮಾತ್ರೆಗಳ ಬೆಲೆಯನ್ನೂ ಸಹ 107 ರೂ. ನಿಂದ 120 ರೂ. ಒಳಗೆ ಸೀಮಿತಗೊಳಿಸಲಾಗಿದೆ.
ಹೆಚ್ಚು ದರ ವಸೂಲಿ ಮಾಡಿದರೆ ಕಠಿಣ ಕ್ರಮ: ಸರ್ಕಾರ ನಿಗದಿಪಡಿಸಿರುವ ಈ ಗರಿಷ್ಠ ಮಾರಾಟ ದರಕ್ಕಿಂತ (MRP) ಹೆಚ್ಚಿನ ಹಣವನ್ನು ರೋಗಿಗಳಿಂದ ಪಡೆಯುವಂತಿಲ್ಲ. ಒಂದು ವೇಳೆ ಯಾವುದೇ ಮೆಡಿಕಲ್ ಶಾಪ್ ಅಥವಾ ಕಂಪನಿಗಳು ನಿಗದಿತ ಬೆಲೆಗಿಂತ ಹೆಚ್ಚಿನ ದರ ವಸೂಲಿ ಮಾಡಿದರೆ, ಅಂತಹವರಿಂದ ಹೆಚ್ಚಿನ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡುವುದಾಗಿ ಸರ್ಕಾರ ಎಚ್ಚರಿಸಿದೆ. ಅಲ್ಲದೆ, ಪರಿಷ್ಕೃತ ಬೆಲೆ ಪಟ್ಟಿಯನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ರೋಗಿಗಳ ಪಾಲಿಗೆ ವರದಾನ: ಪ್ರತಿದಿನ ಮಾತ್ರೆಗಳನ್ನು ಅವಲಂಬಿಸಿರುವ ಮಧ್ಯಮ ಮತ್ತು ಕೆಳವರ್ಗದ ಜನರಿಗೆ ಈ ನಿರ್ಧಾರವು ದೊಡ್ಡ ಆಸರೆಯಾಗಲಿದೆ. ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಸಾಮಾನ್ಯ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಔಷಧ ಕಂಪನಿಗಳು ಈ ಕೂಡಲೇ ಮಾರುಕಟ್ಟೆಯಲ್ಲಿ ಹೊಸ ದರವನ್ನು ಜಾರಿಗೆ ತರುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಭವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಐತಿಹಾಸಿಕ ನಿಧಿ ಪತ್ತೆ: ಬಾವಿಯೊಳಗೆ ಸಿಕ್ಕ ಏಳು ಪುರಾತನ ವಿಗ್ರಹಗಳು!
