TOP NEWS

Bird Flu: ತುಮಕೂರಿನಲ್ಲಿ ನವಿಲುಗಳ ಮಾರಣಹೋಮ: ಹಕ್ಕಿಜ್ವರಕ್ಕೆ ಮತ್ತೆರಡು ಬಲಿ

two peacocks lost life due to bird flu

ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಸಾವು ಮುಂದುವರಿದಿದ್ದು, ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಹಕ್ಕಿಜ್ವರದ (Bird Flu) ಬಾಧೆಯಿಂದಾಗಿ ತಾಲೂಕಿನ ಗೂಳರಿವೆ ಗ್ರಾಮದ ‘ಸುಣ್ಣಕಲ್ಲು ಕಟ್ಟೆ’ ಬಳಿ ಮತ್ತೆರಡು ನವಿಲುಗಳು ಮೃತಪಟ್ಟಿವೆ. ಈ ಭಾಗದಲ್ಲಿ ಸತತವಾಗಿ ನವಿಲುಗಳು ಸಾವನ್ನಪ್ಪುತ್ತಿರುವುದು ಪ್ರಕೃತಿ ಪ್ರೇಮಿಗಳ ನಿದ್ರೆ ಗೆಡಿಸಿದೆ.

ಬೀದಿ ನಾಯಿಗಳ ಪಾಲಾದ ಮೃತದೇಹ: ಘಟನಾ ಸ್ಥಳದಲ್ಲಿ ಮೃತ ನವಿಲುಗಳ ದೇಹಗಳು ಅನಾಥವಾಗಿ ಬಿದ್ದಿದ್ದು, ಅವುಗಳನ್ನು ಬೀದಿ ನಾಯಿಗಳು ಕಿತ್ತು ತಿನ್ನುತ್ತಿರುವ ದೃಶ್ಯ ಮನಕಲಕುವಂತಿದೆ. ಇತ್ತೀಚೆಗಷ್ಟೇ ಈ ಭಾಗದಲ್ಲಿ ನವಿಲುಗಳ ಸಾವಿಗೆ ಹಕ್ಕಿಜ್ವರವೇ ಕಾರಣ ಎಂಬುದು ದೃಢಪಟ್ಟಿದ್ದರೂ, ಮೃತದೇಹಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದು ಸೋಂಕು ಮತ್ತಷ್ಟು ಹರಡಲು ದಾರಿಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಗ್ರಾಮಸ್ಥರಲ್ಲಿ ಆವರಿಸಿದ ಸೋಂಕಿನ ಭೀತಿ: ನವಿಲುಗಳ ಮೃತದೇಹಗಳನ್ನು ತಿಂದ ನಾಯಿಗಳ ಮೂಲಕ ಸೋಂಕು ಗ್ರಾಮದ ಜನರಿಗೆ ಅಥವಾ ಸಾಕುಪ್ರಾಣಿಗಳಿಗೆ ಹರಡಬಹುದು ಎಂಬ ಆತಂಕ ಗೂಳರಿವೆ ಗ್ರಾಮಸ್ಥರನ್ನು ಕಾಡುತ್ತಿದೆ. ಹಕ್ಕಿಜ್ವರ ದೃಢಪಟ್ಟ ನಂತರವೂ ಸಂಬಂಧಪಟ್ಟ ಇಲಾಖೆಗಳು ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಹೆಚ್ಚಿದ ಜನಾಗ್ರಹ: ಪಶು ಸಂಗೋಪನಾ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಉದಾಸೀನತೆ ಎದ್ದು ಕಾಣುತ್ತಿದ್ದು, ಈವರೆಗೆ ಘಟನಾ ಸ್ಥಳಕ್ಕೆ ಯಾರೂ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಮೃತ ನವಿಲುಗಳನ್ನು ವಿಲೇವಾರಿ ಮಾಡಬೇಕು ಹಾಗೂ ಪರಿಸರದಲ್ಲಿ ಸೋಂಕು ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅಣುವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ವಿರೋಧಿಸಿ ನಾಳೆ ಪ್ರತಿಭಟನೆ

Leave a Reply

Your email address will not be published. Required fields are marked *