ಬೆಂಗಳೂರು: ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಆಗಮಿಸಿ ನಿಯಮಬಾಹಿರವಾಗಿ ಉದ್ಯಮ ಮತ್ತು ಆಸ್ತಿ ಖರೀದಿ ವ್ಯವಹಾರಗಳಲ್ಲಿ ತೊಡಗಿದ್ದ ಫ್ರಾನ್ಸ್ ಮೂಲದ ವ್ಯಕ್ತಿಗೆ ಕರ್ನಾಟಕ ಹೈಕೋರ್ಟ್ (High Court) ಬಿಸಿ ಮುಟ್ಟಿಸಿದೆ. ವೀಸಾ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ನೀಡಿದ್ದ ‘ದೇಶ ಬಿಟ್ಟು ತೆರಳಿ’ ಎಂಬ ನೋಟಿಸ್ ಅನ್ನು ನ್ಯಾಯಾಲಯ ಎತ್ತಿಹಿಡಿದಿದೆ.
ಟೂರಿಸ್ಟ್ ವೀಸಾದಲ್ಲೇ 15 ವರ್ಷಗಳ ವಾಸ್ತವ್ಯ: ಫ್ರಾನ್ಸ್ ಪ್ರಜೆಯಾದ ಕ್ರಿಸ್ಟೋಫೆ ಸ್ಟೆಫಾನ್ ಕಳೆದ 15 ವರ್ಷಗಳಿಂದ ಪ್ರವಾಸಿ ವೀಸಾದ ಆಧಾರದ ಮೇಲೆ ಭಾರತದಲ್ಲಿದ್ದರು. ಪ್ರತಿ ಬಾರಿ ವೀಸಾ ಅವಧಿ ಮುಗಿಯುವ ಹಂತಕ್ಕೆ ಬಂದಾಗ ವಿದೇಶಕ್ಕೆ ಹೋಗಿ ಮತ್ತೆ ಮರಳಿ ಬರುವ ಮೂಲಕ ಅವಧಿಯನ್ನು ಮರುಹೊಂದಿಸುತ್ತಿದ್ದರು. ಆದರೆ ಈ ಸಮಯದಲ್ಲಿ ಅವರು ಗೋಕರ್ಣದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು ಮತ್ತು ಕಾನೂನಿಗೆ ವಿರುದ್ಧವಾಗಿ ಸ್ಥಿರ ಆಸ್ತಿಗಳನ್ನು ಸಂಪಾದಿಸಿದ್ದರು ಎಂಬುದು ವಿಚಾರಣೆಯ ವೇಳೆ ಪತ್ತೆಯಾಗಿದೆ.
ಕೇವಲ ಭಾರತೀಯರಿಗೆ ಮಾತ್ರ ವ್ಯಾಪಾರ ಮಾಡುವ ಹಕ್ಕು: ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠವು ವಿದೇಶಿ ಪ್ರಜೆಯ ನಡೆಯನ್ನು ತೀವ್ರವಾಗಿ ಖಂಡಿಸಿತು. ಸಂವಿಧಾನದ ಅನ್ವಯ ಭಾರತದಲ್ಲಿ ನೆಲೆಸುವ ಮತ್ತು ಮುಕ್ತವಾಗಿ ವ್ಯಾಪಾರ ನಡೆಸುವ ಹಕ್ಕು ಕೇವಲ ಈ ದೇಶದ ನಾಗರಿಕರಿಗೆ ಮಾತ್ರ ಮೀಸಲಿದೆ. ಪ್ರವಾಸಿ ವೀಸಾದಲ್ಲಿ ಬಂದು ಹೋಟೆಲ್ ಉದ್ಯಮ ನಡೆಸುವುದು ಕಾನೂನಿನ ಸ್ಪಷ್ಟ ಉಲ್ಲಂಘನೆ ಮತ್ತು ಇದು ಸಾರ್ವಜನಿಕ ಸುಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ತಕ್ಷಣವೇ ದೇಶ ಬಿಡಲು ಕಟ್ಟುನಿಟ್ಟಿನ ಸೂಚನೆ: ಯಾವ ವಿದೇಶಿ ಪ್ರಜೆ ವೀಸಾ ನಿಯಮಗಳನ್ನು ಗೌರವಿಸುವುದಿಲ್ಲವೋ ಅವರು ಇಲ್ಲಿ ಒಂದು ಕ್ಷಣವೂ ಇರಲು ಅರ್ಹರಲ್ಲ ಎಂದು ನ್ಯಾಯಾಲಯ ಸಾರಿದೆ. ಎಫ್‌ಆರ್‌ಆರ್‌ಒ ನೋಟಿಸ್‌ನಲ್ಲಿ ಯಾವುದೇ ದೋಷವಿಲ್ಲದ ಕಾರಣ, ಅರ್ಜಿದಾರರು ತಕ್ಷಣವೇ ದೇಶ ಬಿಟ್ಟು ಹೋಗಬೇಕು, ತಪ್ಪಿದಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಬಹುದು ಎಂದು ಎಚ್ಚರಿಕೆ ನೀಡಿದೆ.
ಇದೇ ರೀತಿಯ ಉಲ್ಲಂಘನೆ ಮಾಡಿದ್ದ ಅಮೆರಿಕದ ಪ್ರಜೆಯೊಬ್ಬರ ವಿರುದ್ಧವೂ ಹಿಂದೆ ಹೈಕೋರ್ಟ್ ಇಂತಹದ್ದೇ ಕಠಿಣ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇದನ್ನೂ ಓದಿ: ಕನ್ನಡ ಹೋರಾಟಗಾರರ ಮೇಲಿನ ಪೊಲೀಸ್ ಕೇಸ್ ವಾಪಸ್ ಪಡೆಯಿರಿ: ಗೃಹ ಸಚಿವರಿಗೆ ಟಿ.ಎ. ನಾರಾಯಣಗೌಡ ಆಗ್ರಹ
