ಬೆಂಗಳೂರು: ವಿಶೇಷ ವಿವಾಹ ಕಾಯ್ದೆ 1954ರ ಅಡಿಯಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಲು ಮದುವೆಯ ಅಧಿಕೃತ ನೋಂದಣಿ ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ (High Court) ಮಹತ್ವದ ಸ್ಪಷ್ಟನೆ ನೀಡಿದೆ. ವಿವಾಹ ನೋಂದಣಿಯಾಗಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಏನಿದು ಪ್ರಕರಣ?
ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಯ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಮನ್ಮಥ ರಾವ್ ಅವರ ಪೀಠವು ಈ ಆದೇಶ ನೀಡಿದೆ. ಈ ದಂಪತಿಗಳು 2006ರಲ್ಲಿ ತಮ್ಮ ಸಮುದಾಯದ ಸಂಪ್ರದಾಯದಂತೆ ವಿವಾಹವಾಗಿದ್ದರು. ಆದರೆ, ವೈವಾಹಿಕ ಭಿನ್ನಾಭಿಪ್ರಾಯಗಳಿಂದಾಗಿ 2009ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪತಿಯು ಮೊದಲು ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಕಾಯ್ದೆಯು ಪರಿಶಿಷ್ಟ ಪಂಗಡದವರಿಗೆ ಅನ್ವಯಿಸುವುದಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯ ಆ ಅರ್ಜಿಯನ್ನು ತಿರಸ್ಕರಿಸಿತ್ತು.
ಬಳಿಕ ಪತಿಯು ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 27ರ ಅಡಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪತ್ನಿಯು, “ನಮ್ಮ ಮದುವೆಯು ಈ ಕಾಯ್ದೆಯ ಅಡಿಯಲ್ಲಿ ನೋಂದಣಿಯಾಗಿಲ್ಲ, ಆದ್ದರಿಂದ ಈ ಅರ್ಜಿಯನ್ನು ಮಾನ್ಯ ಮಾಡಬಾರದು” ಎಂದು ವಾದಿಸಿದ್ದರು. ಈ ವಾದವನ್ನು ತಳ್ಳಿಹಾಕಿದ ಹೈಕೋರ್ಟ್, ವಿಶೇಷ ವಿವಾಹ ಕಾಯ್ದೆಯು ವಿವಾಹ ನೋಂದಣಿಗೆ ಅವಕಾಶ ನೀಡುತ್ತದೆಯೇ ಹೊರತು, ವಿಚ್ಛೇದನ ಕೋರಲು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿತು.
ಹಕ್ಕನ್ನ ಕಸಿದುಕೊಳ್ಳಲು ಸಾಧ್ಯವಿಲ್ಲ
ಮದುವೆಯ ನೋಂದಣಿಯು ಕೆಲವು ಕಾನೂನಾತ್ಮಕ ಸೌಲಭ್ಯಗಳನ್ನು ನೀಡಬಹುದು, ಆದರೆ ವಿಚ್ಛೇದನ ಪಡೆಯುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಮೂಲಕ ಪತ್ನಿಯ ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್, ಪತಿಯು ಸಲ್ಲಿಸಿರುವ ವಿಚ್ಛೇದನ ಅರ್ಜಿಯ ವಿಚಾರಣೆಯನ್ನು ಮುಂದುವರಿಸಲು ಅನುಮತಿ ನೀಡಿದೆ. ಮದುವೆ ನೋಂದಣಿಯಾಗದ ಸಾವಿರಾರು ದಂಪತಿಗಳಿಗೆ ಈ ತೀರ್ಪು ಹೊಸ ಆಶಾಕಿರಣವಾಗಿದೆ.
