ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಮತದಾರರು ಹೊಸ ದಾಖಲೆ ಬರೆದಿದ್ದಾರೆ. 2021ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಇದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ 5.98 ಕೋಟಿ ಜನರು ಮತ ಚಲಾಯಿಸಿದ್ದರೆ, ಈ ಬಾರಿ ಆ ಸಂಖ್ಯೆ 6.31 ಕೋಟಿಗೆ ಏರಿಕೆಯಾಗಿದೆ. ಅಂದರೆ ಸುಮಾರು 34 ಲಕ್ಷಕ್ಕೂ ಹೆಚ್ಚು ಹೊಸ ಮತದಾರರು ಈ ಬಾರಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
34 ಲಕ್ಷ ಮತಗಳು ನಿರ್ಧರಿಸಲಿದೆ ಭವಿಷ್ಯ
ವಿಶೇಷವೆಂದರೆ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ (SIR) ಮೂಲಕ ಲಕ್ಷಾಂತರ ನಕಲಿ ಮತದಾರರನ್ನು ಕೈಬಿಟ್ಟ ಹೊರತಾಗಿಯೂ ರಾಜ್ಯದಲ್ಲಿ ಶೇ. 93 ರಷ್ಟು ದಾಖಲೆಯ ಮತದಾನವಾಗಿದೆ. ಕಳೆದ ಬಾರಿ ತೃಣಮೂಲ ಕಾಂಗ್ರೆಸ್ (TMC) ಮತ್ತು ಬಿಜೆಪಿ ನಡುವೆ ಸುಮಾರು 60 ಲಕ್ಷ ಮತಗಳ ಅಂತರವಿತ್ತು. ಈಗ ಚಲಾವಣೆಯಾಗಿರುವ ಈ ಹೆಚ್ಚುವರಿ 34 ಲಕ್ಷ ಮತಗಳು ಯಾರ ಪರವಾಗಿವೆ ಎಂಬುದು ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
ಈ ಹೆಚ್ಚುವರಿ ಮತದಾನದ ಬಗ್ಗೆ ಬಿಜೆಪಿ ಮತ್ತು ಟಿಎಂಸಿ ನಡುವೆ ಬಿರುಸಿನ ಚರ್ಚೆಗಳು ನಡೆಯುತ್ತಿವೆ. “ಕೇಂದ್ರ ಭದ್ರತಾ ಪಡೆಗಳ ಭದ್ರತೆಯಿಂದಾಗಿ ಜನರು ಭಯವಿಲ್ಲದೆ ಬಂದು ಮತ ಹಾಕಿದ್ದಾರೆ. ಇದು ಆಡಳಿತ ವಿರೋಧಿ ಅಲೆಯ ಸಂಕೇತ” ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ನಗರ ಪ್ರದೇಶಗಳ ವಸತಿ ಸಂಕೀರ್ಣಗಳಲ್ಲೇ ಮತಗಟ್ಟೆಗಳನ್ನು ಸ್ಥಾಪಿಸಿದ್ದು ತಮಗೆ ಅನುಕೂಲವಾಗಲಿದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.
ಟಿಎಂಸಿ ಹೇಳೊದೇನು?
ಆದರೆ, ತೃಣಮೂಲ ಕಾಂಗ್ರೆಸ್ ಈ ವಾದವನ್ನು ಅಲ್ಲಗಳೆದಿದೆ. “ಕೇಂದ್ರ ಸರ್ಕಾರದ ಸರ್ (SIR) ಕ್ರಮದ ವಿರುದ್ಧ ಜನರು ನಡೆಸಿದ ಪ್ರತಿಭಟನಾ ಮತ ಇದಾಗಿದೆ. ಭವಿಷ್ಯದಲ್ಲಿ ಮತದಾನದ ಹಕ್ಕು ಕಳೆದುಕೊಳ್ಳಬಹುದು ಎಂಬ ಭೀತಿಯಿಂದ ನಮ್ಮ ಬೆಂಬಲಿಗರು ಒಗ್ಗಟ್ಟಾಗಿ ಬಂದು ಮತ ಹಾಕಿದ್ದಾರೆ” ಎಂದು ಟಿಎಂಸಿ ಪ್ರತಿಪಾದಿಸಿದೆ. ಒಟ್ಟಾರೆಯಾಗಿ, ಈ 34 ಲಕ್ಷ ಮತಗಳ ರಹಸ್ಯವು ಬಂಗಾಳದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸಲಿದೆ. ಬಂಗಾಳದ ರಣರಂಗದಲ್ಲಿ ಈ ‘ಮತ ಧ್ರುವೀಕರಣ’ ಯಾರಿಗೆ ವರದಾನವಾಗಲಿದೆ ಎಂಬುದು ಫಲಿತಾಂಶದ ದಿನ ಸ್ಪಷ್ಟವಾಗಲಿದೆ.
ಇದನ್ನೂ ಓದಿ: ಜಾತಿಗಣತಿ ವಿಳಂಬ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ
