ಬೆಂಗಳೂರು: ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರ (D Sudhakar) ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಭಾನುವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ (KIMS) ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಅವರು ವೈದ್ಯರ ತಂಡ ಮತ್ತು ಸಚಿವರ ಕುಟುಂಬ ಸದಸ್ಯರೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದಾರೆ.
ಹೆಚ್ಚಾಗಿರುವ ಸೋಂಕು
ಸಚಿವ ಡಿ. ಸುಧಾಕರ್ ಅವರಿಗೆ ಇತ್ತೀಚೆಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ ನಡೆದಿತ್ತು. ಈ ಬೆನ್ನಲ್ಲೇ ಅವರಿಗೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿದ್ದು, ಮೊದಲು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆರೋಗ್ಯದಲ್ಲಿ ವ್ಯತ್ಯಯ ಉಂಟಾದ ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ಸ್ಥಳಾಂತರಿಸಲಾಗಿದೆ. ವೈದ್ಯಕೀಯ ಮೂಲಗಳ ಪ್ರಕಾರ ಸೋಂಕು ತೀವ್ರವಾಗಿರುವುದರಿಂದ ಸಚಿವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
ಸಚಿವ ಸುಧಾಕರ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಶನಿವಾರವಷ್ಟೇ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದಿದ್ದರು. ಸಚಿವರ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಅವರು, ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಸಚಿವ ಜಮೀರ್ ಅಹಮ್ಮದ್ ಖಾನ್ ಹಾಗೂ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಸೇರಿದಂತೆ ಹಲವು ನಾಯಕರು ಆಸ್ಪತ್ರೆಯಲ್ಲಿ ಉಪಸ್ಥಿತರಿದ್ದರು. ಮಾರ್ಚ್ 31ರಂದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಚಿವರು, ಇದೀಗ ಸೋಂಕಿನ ತೀವ್ರತೆಯಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಸಚಿವರು ಶೀಘ್ರ ಗುಣಮುಖರಾಗಲಿ ಎಂದು ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಸಿಂಚನ, ಸಿಗಂಧೂರು ಭಾಗದಲ್ಲಿ ವರುಣನ ಆರ್ಭಟ
