ಬೆಂಗಳೂರು:ಬೆಂಗಳೂರಿನಲ್ಲಿ (Bengaluru) ಕೇವಲ ಸಣ್ಣ ಕಾರಣವೊಂದಕ್ಕಾಗಿ ನೆರೆಯ ಮನೆಯ ಮುಗ್ಧ ನಾಯಿಯೊಂದರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಹೇಯ ಘಟನೆ ಬೆಳಕಿಗೆ (Crime) ಬಂದಿದೆ. ತಮ್ಮ ಪತ್ನಿಯ ಮೇಲೆ ನಾಯಿ ಬೊಗಳಿತು ಎಂಬ ಕ್ಷುಲ್ಲಕ ಕಾರಣಕ್ಕಾಗಿ ಗೋಪಿ ಎಂಬಾತ ಮರದ ತುಂಡಿನಿಂದ ನಾಯಿಯನ್ನು ಮನಬಂದಂತೆ ಹೊಡೆದು ಗಾಯಗೊಳಿಸಿದ್ದಾನೆ. ಈ ಘಟನೆಯು ಏಪ್ರಿಲ್ 9ರಂದು ನಡೆದಿದ್ದು, ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಏನಿದು ಘಟನೆ?
ಸಿಸಿಟಿವಿ ದೃಶ್ಯಗಳಲ್ಲಿ ಗೋಪಿ ನೇರವಾಗಿ ನೆರೆಯವರ ಮನೆಗೆ ನುಗ್ಗಿ, ಪ್ರವೇಶದ್ವಾರದಲ್ಲಿದ್ದ ನಾಯಿಯನ್ನು ಮರದ ತುಂಡಿನಿಂದ ಐದು ಬಾರಿ ಬಲವಾಗಿ ಹೊಡೆಯುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ಹಲ್ಲೆಯಿಂದ ನಾಯಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿತ್ತು. ನಾಯಿಯ ಅಸಹಾಯಕ ಆರ್ತನಾದ ಕೇಳಿ ಮನೆಯ ಮಾಲೀಕರು ಹೊರಗೆ ಬಂದು ನೋಡಿದಾಗ, ನಾಯಿ ಗಂಭೀರವಾಗಿ ಗಾಯಗೊಂಡಿರುವುದು ಕಂಡುಬಂದಿದೆ. ತಕ್ಷಣವೇ ಅದನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದ್ದು, ಸದ್ಯ ನಾಯಿ ಅಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದೆ.
ಎರಡೂ ಕುಟುಂಬಗಳ ಜಗಳ
ಪತ್ನಿಯ ಮೇಲೆ ನಾಯಿ ಬೊಗಳಿದ್ದ ವಿಷಯವಾಗಿ ಅಂದು ಎರಡೂ ಕುಟುಂಬಗಳ ನಡುವೆ ವಾಗ್ವಾದ ನಡೆದಿತ್ತು. ಈ ವಿಚಾರದಲ್ಲಿ ಆಕ್ರೋಶಗೊಂಡ ಗೋಪಿ, ನಾಯಿಯ ಮೇಲೆ ಈ ರೀತಿಯ ಕ್ರೌರ್ಯ ಮೆರೆದಿದ್ದಾನೆ. ಈ ಬಗ್ಗೆ ಏಪ್ರಿಲ್ 11ರಂದು ನಾಯಿಯ ಮಾಲೀಕರು ನೀಡಿದ ದೂರಿನ ಮೇರೆಗೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) 2023ರ ಅಡಿ ಪ್ರಾಣಿಗಳ ಮೇಲಿನ ದೌರ್ಜನ್ಯ ಮತ್ತು ಅಕ್ರಮ ಪ್ರವೇಶದ ಅಡಿಯಲ್ಲಿ ಆರೋಪಿಯ ಮೇಲೆ ಪ್ರಕರಣ ದಾಖಲಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಸಮಾಜದಲ್ಲಿ ಇಂತಹ ಪ್ರಾಣಿಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಮರುಕಳಿಸುತ್ತಿರುವುದು ಪ್ರಾಣಿ ಪ್ರಿಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮದುವೆ ಹೆಸರಲ್ಲಿ ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚನೆ, ಆರೋಪಿ ಅಂದರ್
