TOP NEWS

TVK: ಸ್ಟಾಲಿನ್‌ಗೆ ಭಾರಿ ಹಿನ್ನಡೆ, ಮ್ಯಾಜಿಕ್ ನಂಬರ್ ಸನಿಹದಲ್ಲಿ ವಿಜಯ್!

tamil nadu election mk satlin may loss against tvk candidate

ಚೆನ್ನೈ: ತಮಿಳುನಾಡು ರಾಜಕೀಯ ಅಖಾಡದಲ್ಲಿ ದಶಕಗಳ ದ್ರಾವಿಡ ಪಾರುಪತ್ಯಕ್ಕೆ ಬ್ರೇಕ್ ಬೀಳುವ ಲಕ್ಷಣಗಳು ದಟ್ಟವಾಗಿವೆ. ಚೊಚ್ಚಲ ಚುನಾವಣೆಯಲ್ಲೇ ನಟ ವಿಜಯ್ ಸಾರಥ್ಯದ ‘ತಮಿಳಗ ವೆಟ್ರಿ ಕಳಗಂ’ (TVK) ಅಬ್ಬರದ ಮುನ್ನಡೆ ಸಾಧಿಸಿದ್ದು, ರಾಜ್ಯದಲ್ಲಿ ಹೊಸ ಯುಗ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಸದ್ಯದ ಅಂಕಿ-ಅಂಶಗಳ ಪ್ರಕಾರ, ವಿಜಯ್ ಪಡೆ ಸರಳ ಬಹುಮತಕ್ಕೆ ಬೇಕಾದ 118 ಸ್ಥಾನಗಳ ಮ್ಯಾಜಿಕ್ ಸಂಖ್ಯೆಯ ಹತ್ತಿರದಲ್ಲಿದೆ.

ಸ್ವಕ್ಷೇತ್ರದಲ್ಲೇ ಸಿಎಂ ಸ್ಟಾಲಿನ್‌ಗೆ ಶಾಕ್! ಈ ಬಾರಿಯ ಚುನಾವಣೆಯ ಅತ್ಯಂತ ದೊಡ್ಡ ಅಚ್ಚರಿ ಎಂದರೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಹಿನ್ನಡೆ. ಕೊಳತ್ತೂರು ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸ್ಟಾಲಿನ್ ಅವರು ಆರಂಭಿಕ ಹಂತದಿಂದಲೂ ಭಾರಿ ಅಂತರದ ಹಿನ್ನಡೆ ಅನುಭವಿಸುತ್ತಿರುವುದು ಡಿಎಂಕೆ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ. ಮತ್ತೊಂದೆಡೆ, ಟಿವಿಕೆ ನಾಯಕ ವಿಜಯ್ ತಾವು ಸ್ಪರ್ಧಿಸಿರುವ ಪೆರಂಬೂರ್ ಹಾಗೂ ತಿರುಚಿರಾಪಳ್ಳಿ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡು ಜಯದತ್ತ ಮುನ್ನುಗ್ಗುತ್ತಿದ್ದಾರೆ. ಚೇಪಾಕ್ ಕ್ಷೇತ್ರದಲ್ಲಿ ಉದಯನಿಧಿ ಸ್ಟಾಲಿನ್ ಮುನ್ನಡೆಯಲ್ಲಿದ್ದರೂ, ಒಟ್ಟಾರೆ ಡಿಎಂಕೆ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ.

ನೆಲಕಚ್ಚಿದ ದ್ರಾವಿಡ ದಿಗ್ಗಜರು ತಮಿಳುನಾಡಿನ ಗದ್ದುಗೆಯನ್ನು ಹಂಚಿಕೊಂಡಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಈ ಬಾರಿ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಎರಡೂ ಪಕ್ಷಗಳು ತಲಾ 70 ಸ್ಥಾನಗಳ ಗಡಿ ತಲುಪಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೈತ್ರಿಗಳ ಹಂಗಿಲ್ಲದೆ ‘ಒಂಟಿ ಸಲಗ’ನಂತೆ ಕಣಕ್ಕಿಳಿದಿದ್ದ ವಿಜಯ್, ಹಳೆಯ ರಾಜಕೀಯ ಲೆಕ್ಕಾಚಾರಗಳನ್ನು ಧೂಳೀಪಟ ಮಾಡಿದ್ದಾರೆ. ಯುವ ಮತದಾರರು ಮತ್ತು ಬದಲಾವಣೆ ಬಯಸಿದ ಜನರ ಒಲವು ಸಂಪೂರ್ಣವಾಗಿ ಟಿವಿಕೆ ಪರವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

‘ಕೈ’ ಚಾಚಲು ಕಾಂಗ್ರೆಸ್ ಸಿದ್ಧ ಮತ ಎಣಿಕೆ ಇನ್ನೂ ಪ್ರಗತಿಯಲ್ಲಿದ್ದು, ಒಂದು ವೇಳೆ ವಿಜಯ್ ಅವರಿಗೆ ಬಹುಮತಕ್ಕೆ ಕೆಲವೇ ಸೀಟುಗಳ ಕೊರತೆ ಎದುರಾದರೆ ಬೆಂಬಲ ನೀಡಲು ಕಾಂಗ್ರೆಸ್ ಈಗಾಗಲೇ ಇಂಗಿತ ವ್ಯಕ್ತಪಡಿಸಿದೆ. ಸೋಮವಾರ ಬೆಳಿಗ್ಗೆಯಿಂದ ನಡೆಯುತ್ತಿರುವ ಈ ರೋಚಕ ಮತ ಎಣಿಕೆಯು ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿದೆ. ಸದ್ಯದ ಟ್ರೆಂಡ್ ಹೀಗೆಯೇ ಮುಂದುವರಿದರೆ, ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ದಳಪತಿ ವಿಜಯ್ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪಟ್ಟಕ್ಕೇರುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್‌ಗೆ ಮೈತ್ರಿ ಆಫರ್ ನೀಡಿದ ವಿಜಯ್ ತಂದೆ ಎಸ್‌ಎಸಿ!

Leave a Reply

Your email address will not be published. Required fields are marked *