ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮಿಷನ್ ಮತ್ತು ಭ್ರಷ್ಟಾಚಾರದ ಆರೋಪಗಳು ಜೋರಾಗಿದ್ದು, ಈ ಬಾರಿ ಸ್ವಪಕ್ಷೀಯ ಶಾಸಕರೇ ನೀಡಿರುವ ಲಿಖಿತ ದೂರು ಪ್ರತಿಪಕ್ಷಗಳಿಗೆ ಹೊಸ ಅಸ್ತ್ರವಾಗಿ ಸಿಕ್ಕಿದೆ. ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಸ್. ಅಶೋಕ್ ಕುಮಾರ್ ರೈ ಅವರು ಮಂಗಳೂರಿನ ಕೆಆರ್‌ಐಡಿಎಲ್ (KRIDL) ವಿಭಾಗದಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಯ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದನ್ನು ಉಲ್ಲೇಖಿಸಿ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಪ್ರಹಾರ ನಡೆಸಿದ್ದಾರೆ.
ಕಮಿಷನ್ ಸರ್ಕಾರಕ್ಕೆ ಲಂಚದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಉಳಿದಿಲ್ಲ
ವಿಪಕ್ಷಗಳು ಆರೋಪ ಮಾಡಿದಾಗಲೆಲ್ಲ ಅದನ್ನು ‘ರಾಜಕೀಯ ಪ್ರೇರಿತ’ ಎಂದು ತಳ್ಳಿಹಾಕುತ್ತಿದ್ದ ಆಡಳಿತ ಪಕ್ಷಕ್ಕೆ ಈಗ ತಮ್ಮದೇ ಶಾಸಕರು ಸರ್ಕಾರದ ಭ್ರಷ್ಟಾಚಾರದ ಜಾತಕವನ್ನು ಬೀದಿಯಲ್ಲಿಟ್ಟಿದ್ದಾರೆ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ. ಮಂಗಳೂರಿನ ಕೆಆರ್‌ಐಡಿಎಲ್ ಇಲಾಖೆಯ ಎಂಜಿನಿಯರ್‌ಗಳು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಲಾಖಾ ಸಚಿವರ ಹೆಸರನ್ನು ಹೇಳಿಕೊಂಡು ಕಾಮಗಾರಿಗಳ ಮೇಲಿನ ಒಟ್ಟು ಮೊತ್ತದಲ್ಲಿ ಬರೋಬ್ಬರಿ ಶೇಕಡಾ 7 ರಷ್ಟು ‘ಕಟ್ ಮನಿ’ ಅಥವಾ ಕಮಿಷನ್ ವಸೂಲಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕರೇ ಲಿಖಿತವಾಗಿ ದೂರು ನೀಡಿದ್ದಾರೆ. ಗುತ್ತಿಗೆದಾರರಿಗೆ ಬೆದರಿಕೆ ಹಾಕಿ ಮಾಸಿಕ ಕಪ್ಪ ಸಂಗ್ರಹಿಸುತ್ತಿರುವ ಈ ವ್ಯವಸ್ಥೆಯಿಂದಾಗಿ ‘ಕಮಿಷನ್ ಸರ್ಕಾರ’ಕ್ಕೆ ಲಂಚದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಉಳಿದಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಇಲಾಖೆಯ ಅಧಿಕಾರಿಗಳು ನೇರವಾಗಿ ಸಚಿವರ ಹೆಸರನ್ನೇ ಬಳಸಿಕೊಂಡು ಬಹಿರಂಗವಾಗಿ ಶೇ. 7 ರಷ್ಟು ಪರ್ಸಂಟೇಜ್ ವಸೂಲಿ ಮಾಡುತ್ತಿದ್ದಾರೆ ಎಂದರೆ, ಈ ರೀತಿ ಸಂಗ್ರಹವಾಗುತ್ತಿರುವ ಹಣವು ಸರ್ಕಾರದ ಮೇಲ್ಮಟ್ಟದವರೆಗೂ ತಲುಪುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಸಾರ್ವಜನಿಕರ ತೆರಿಗೆ ಹಣದಿಂದ ನಡೆಯಬೇಕಾದ ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ಕಮಿಷನ್ ದಂಧೆಗೆ ಬಲಿಯಾಗುತ್ತಿವೆ. ಇದರಿಂದಾಗಿ ರಾಜ್ಯದಲ್ಲಿ ಕಳಪೆ ಮಟ್ಟದ ಕಾಮಗಾರಿಗಳು ನಡೆಯುತ್ತಿದ್ದು, ಸಾರ್ವಜನಿಕರು ತೀವ್ರ ದುಸ್ಥಿತಿ ಅನುಭವಿಸುವಂತಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿದ್ದು, ಲೂಟಿಯೊಂದೇ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರದ ಲೂಟಿ ವ್ಯವಹಾರ ಬಯಲು!
— R. Ashoka (@RAshokaBJP) August 31, 2026
ಮುಖ್ಯಮಂತ್ರಿ @DKShivakumar ಅವರೇ, ವಿರೋಧ ಪಕ್ಷಗಳು ಆರೋಪ ಮಾಡಿದರೆ "ರಾಜಕೀಯ" ಎನ್ನುತ್ತಿದ್ದೀರಲ್ಲ, ಈಗ ನಿಮ್ಮದೇ ಪಕ್ಷದ ಪುತ್ತೂರು ಶಾಸಕ ಕೆ.ಎಸ್. ಅಶೋಕ್ ಕುಮಾರ್ ರೈ ಅವರು ನಿಮ್ಮ ಸರ್ಕಾರದ ಭ್ರಷ್ಟಾಚಾರದ ಜಾತಕವನ್ನು ಬೀದಿಯಲ್ಲಿಟ್ಟಿದ್ದಾರೆ. ಇದಕ್ಕೇನು ಉತ್ತರ ನೀಡುತ್ತೀರಿ?… pic.twitter.com/QcEpIxZ9Fm
ಮುಖ್ಯಮಂತ್ರಿ ಮೌನಕ್ಕೆ ಶರಣಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ
ತಮ್ಮದೇ ಪಕ್ಷದ ಶಾಸಕರು ಸಚಿವರ ಮೇಲಿನ ಲೂಟಿಯನ್ನು ಎತ್ತಿ ತೋರಿಸಿ ಪತ್ರ ಬರೆದಿದ್ದರೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕೂಡಲೇ ಕಮಿಷನ್ ದಂಧೆಯಲ್ಲಿ ನೇರವಾಗಿ ಭಾಗಿಯಾಗಿರುವ ಕೆಆರ್‌ಐಡಿಎಲ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಜೊತೆಗೆ ಸಚಿವರ ಹೆಸರಿನಲ್ಲಿ ಕಪ್ಪ ವಸೂಲಿ ನಡೆಯುತ್ತಿರುವುದರಿಂದ, ಸಂಬಂಧಪಟ್ಟ ಇಲಾಖಾ ಸಚಿವರು ಹಾಗೂ ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವರ ಪಾತ್ರದ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ: ಕಾರಂತ ಬಡಾವಣೆ ಭೂ ಸಂತ್ರಸ್ತರಿಗೆ ಪರಿಹಾರ ಹಂಚಿಕೆ ಪ್ರಕ್ರಿಯೆ ಆರಂಭ
