TOP NEWS

Yellapur: ಮಂಚಿಕೇರಿಯಲ್ಲಿ ‘ನಾಟ್ಯಾಂಕುರ’ ನೃತ್ಯ ಸಂಸ್ಥೆ ಉದ್ಘಾಟನೆ

Promoting Classical Art in Yellapur Natyankura Dance Academy Inaugurated in Manchikeri

ಯಲ್ಲಾಪುರ: ​ಈಗಿನ ಮಕ್ಕಳನ್ನ ಯಾವುದಾದರೊಂದು (Yellapura) ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳಲು ಪಾಲಕರು ಪ್ರೇರೆಪಿಸಬೇಕು, ಕಲೆಯಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ವಿದುಷಿ ಸೀಮಾ ಭಾಗ್ವತ್ ನುಡಿದರು.

ಭರತನಾಟ್ಯ ತರಬೇತಿ ಕೇಂದ್ರ ಉದ್ಘಾಟನೆ

ಇತ್ತೀಚೆಗೆ ಮಂಚಿಕೇರಿಯಲ್ಲಿ ನಾಟ್ಯಾಂಕುರ ಭರತನಾಟ್ಯ ಕಲಿಕಾ ಹಾಗೂ ತರಬೇತಿ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದರು.

ನಾಟ್ಯಾಂಕರ ಪ್ರಾರಂಭ ಮಾಡುತ್ತಿರುವ ವಿದುಷಿ ಸಿಂಧು ಹೆಗಡೆ ಭರತನಾಟ್ಯದ ಶಿಕ್ಷಣವನ್ನ ಉಣಬಡಿಸಲು ಪ್ರಭುದ್ದರಾಗಿದ್ದಾರೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

​ಉತ್ತಮ ಕಲಾವಿದನಾಗಲು ಗುರುವಿಗಾಗಿ, ಅವಕಾಶಕ್ಕಾಗಿ ಕಾಯಬೇಕು, ಹದವಾಗಿ ಬೆಂದಿರುವ ಅಗುಳಿನಂತೆ ಕಲಾವಿದ ಬೇಯಬೇಕು, ಶ್ರೀಗಂಧವನ್ನ ತೀಡಿದಾಗ ಹೊರಸೂಸುವ ಪರಿಮಳದಂತೆ ಮಾಗಿದ ಕಲೆಯ ಸೊಗಡನ್ನ ಪ್ರೇಕ್ಷರಿಗೆ ಉಣಬಡಿಸಬೇಕು ಎಂದು ಕಾರ್ಯಕ್ರಮದ ಮುಖ್ಯ ಅಥಿತಿ ವಿದುಷಿ ಡಾ. ವಿಜಯಲಕ್ಷ್ಮಿ ಹೆಗಡೆ, ಕಂಪ್ಲಿ ಮಾತನಾಡಿದರು.

ಈ ಮಣ್ಣು, ನೆಲ, ಈ ಸಂಸ್ಕೃತಿ ನಮ್ಮದು ಎನ್ನುವ ಭಾವ ಬಂದಾಗ ಮಾತ್ರ ತನ್ನೂರೇ ತನಗೆ ಪ್ರಿಯವಾಗುತ್ತದೆ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಭರತನಾಟ್ಯದಲ್ಲಿ ವಿದ್ವತ್ ಅನ್ನು ಪಡೆಯುವುದರ ಜೊತೆಗೆ ಸಮರ್ಥ ಗುರು ಆಗುವ ಸಾಮರ್ಥ್ಯವನ್ನ ಹೊಂದಿರುವ ವಿದುಷಿ ಸಿಂಧು ಹೆಗಡೆ ನಗರಕ್ಕೆ ವಲಸೆ ಹೋಗುವ ಬದಲು ತನ್ನೂರಿನಲ್ಲೆ ಉಜ್ವಲಿಸುವ ನಾಟ್ಯಾಂಕುರ ಸಂಸ್ಥೆಯನ್ನ ಪ್ರಾರಂಭಿಸುತ್ತಿರುವುದು ಸಂತೋಷವಾತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗಣ್ಯರು ಭಾಗಿ

​ಹರಿಪ್ರಕಾಶ್ ಕೋಣೆಮನೆ ಮಾತನಾಡಿ ನಮ್ಮ ಸಂಸ್ಕೃತಿಯ ಮೂಲಕ ವಿಶ್ವಕ್ಕೆ ಜಗದ್ಗುರುವಾಗಿ ಭಾರತ ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ ಮಂಚಿಕೇರಿಯ ಈ ನೆಲದಲ್ಲಿ ನಾಟ್ಯಾಂಕುರ ಕಲೆಯ ಕಂಪನ್ನ ಪಸರಿಸಲು ಹುಟ್ಟಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹಾರೈಸಿದರು.

​ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಪಂಡಿತ್ ಗಣಪತಿ ಭಟ್ಟ ಹಾಸಣಗಿವರು ಕಲಾ ಪ್ರಕಾರಗಳನ್ನ ಕಲಿಯಲಾಗದಿದ್ದರೂ ಕೇಳುವ, ನೋಡುವ ಹವ್ಯಾಸ ಬೆಳೆಸಿಕೊಂಡರೆ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ, ಕಲೆ ಮನಸ್ಸನ್ನ ಸಂಸ್ಕರಿಸುವ ಮಾಧ್ಯಮ ಎಂದರು.

ತಾಳ್ಮೆ, ಛಲ, ಸಮಯ, ಲಯಗಳನ್ನ ಹದವಾಗಿಸಿಕೊಳ್ಳುವ ಶಿಷ್ಯನಿಗೆ ಗುರು ಕೂಡ ವಿದ್ಯೆಯನ್ನು ಸಮರ್ಪಿಸುವ ಕ್ರಮವನ್ನ ತುಂಬ ಮಾರ್ಮಿಕವಾಗಿ ತಿಳಿಸಿದರು. ಜೀವನವನ್ನ ನೋಡುವ, ಅಭ್ಯಸಿಸುವ, ಅರ್ಥೈಸುವ ಹಾಗೂ ತೀರ್ಮಾನಿಸುವ ಸಂಗತಿಗಳು ಕಲಾವಿದನಾಗಿ ರೂಪುಗೊಳ್ಳುವ ಮಾಧ್ಯಮಗಳಾಗಿವೆ ಎಂದು ಹೇಳುತ್ತಾ ಶಾಸ್ತ್ರಗಳನ್ನ ಕಲಿಯುವುದಕ್ಕೂ ಕಲಾವಿದನಾಗುವುದಕ್ಕೂ ಇರುವ ವ್ಯತ್ಯಾಸಗಳನ್ನು ತಿಳಿಸಿದರು. ನಾಟ್ಯಂಕುರದ ಉನ್ನತಿಗೆ ತುಂಬು ಹೃದಯದ ಸಹಕಾರವನ್ನ ಬಯಸಿದರು.

​ವಿದುಷಿ ಸಿಂಧು ಹೆಗಡೆ ಮತ್ತು ಸಿರಿ ಹೆಗಡೆ ಅವರ ನೃತ್ಯ ಪ್ರೇಕ್ಷಕರನ್ನ ನಾಟ್ಯ ಲೋಕಕ್ಕೆ ಕರೆದುಕೊಂಡು ಹೋಯಿತು.ದಿವ್ಯಶ್ರೀ ಹೆಗಡೆ ದಂಟಕಲ್ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಆರ್ ಎನ್ ಹೆಗಡೆ ಗೋರ್ಸಗದ್ದೆ, ಆರ್ ಎನ್ ಭಟ್ಟ ದುಂಢಿ, ಎಂ ಆರ್ ಹೆಗಡೆ, ರಾಘು ಭಟ್ಟ ಹಾಸಣಗಿ ಉಪಸ್ಥಿತರಿದ್ದರು.

ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ: ಜಂಬೂಸವಾರಿ ಅಂತಿಮ ರಿಹರ್ಸಲ್

Leave a Reply

Your email address will not be published. Required fields are marked *