ಮುಂಬೈ: ಬಾಲಿವುಡ್ನ ಪ್ರಸಿದ್ಧ ಸಾಹಸ ನಟ ಟೈಗರ್ ಶ್ರಾಫ್ (Tiger Shroff) ಅವರ ಮೇಲೆ ಭಾನುವಾರ ರಾತ್ರಿ ನಡೆದ ಭೀಕರ ಗುಂಡಿನ ದಾಳಿ ಪ್ರಕರಣದ ತನಿಖೆ ತೀವ್ರಗೊಂಡಿದೆ. ಮುಂಬೈನ ಜುಹು ಪ್ರದೇಶದಲ್ಲಿರುವ ಫುಟ್ಬಾಲ್ ಕ್ಲಬ್ನಿಂದ ಹೊರಬರುತ್ತಿದ್ದ ವೇಳೆ ನಟನ ಕಾರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಶೂಟೌಟ್ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಕರಾರುವಾಕ್ ಕಾರ್ಯಾಚರಣೆ ನಡೆಸಿ, ರ್ಯಾಪಿಡೋ ಬೈಕ್ ಚಾಲಕ, ಓರ್ವ ಕೂಲಿ ಕಾರ್ಮಿಕ ಹಾಗೂ ಒಬ್ಬ ಅಪ್ರಾಪ್ತ ಬಾಲಕ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ರಾಜಸ್ಥಾನದ ಕೋಟಾ ಬಳಿ ವಶಕ್ಕೆ ಪಡೆದಿದ್ದಾರೆ.
ರೂ. 50,000 ಸುಪಾರಿ ಹಾಗೂ ನೇಪಾಳಕ್ಕೆ ಪರಾರಿಯಾಗಲು ಮಾಸ್ಟರ್ ಪ್ಲಾನ್!
ಪೊಲೀಸ್ ಮೂಲಗಳ ಪ್ರಕಾರ, ನಟ ಟೈಗರ್ ಶ್ರಾಫ್ ಕಾರಿನ ಮೇಲೆ ದಾಳಿ ನಡೆಸಲು ಈ ಆರೋಪಿಗಳು ಮುಂಗಡವಾಗಿ ಒಟ್ಟು 50,000 ರೂಪಾಯಿ ಹಣ ಪಡೆದುಕೊಂಡಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕೃತ್ಯ ಎಸಗಿದ ತಕ್ಷಣ ಆರೋಪಿಗಳು ಮುಂಬೈನಿಂದ ಎಸ್ಕೇಪ್ ಆಗಿ, ರೈಲಿನಲ್ಲಿ ದೆಹಲಿ ಕಡೆಗೆ ಪ್ರಯಾಣಿಸುತ್ತಿದ್ದರು. ಅಲ್ಲಿಂದ ಗಡಿ ದಾಟಿ ನೇಪಾಳಕ್ಕೆ ಪರಾರಿಯಾಗಲು ಸ್ಕೆಚ್ ಹಾಕಿದ್ದರು. ಆದರೆ, ರಾಜಸ್ಥಾನದ ಕೋಟಾ ಬಳಿ ಜಾಗರೂಕರಾದ ಪೊಲೀಸರು ಅವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂವರೂ ನೇರವಾಗಿ ಫೈರಿಂಗ್ನಲ್ಲಿ ಭಾಗಿಯಾಗಿದ್ದಾರೆಯೇ ಮತ್ತು ಕೃತ್ಯದಲ್ಲಿ ಯಾರ್ಯಾರ ಪಾತ್ರವೇನಿದೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ವೈರಲ್ ವೀಡಿಯೋದಲ್ಲಿ ದಾಖಲಾಯ್ತು ಶೂಟೌಟ್ ದೃಶ್ಯ!
ಘಟನೆ ನಡೆದಾಗ 36 ವರ್ಷದ ನಟ ಟೈಗರ್ ಶ್ರಾಫ್ ತಮ್ಮ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತು, ಮುಚ್ಚಿದ ಗ್ಲಾಸ್ ಮೂಲಕವೇ ರಸ್ತೆಯಲ್ಲಿದ್ದ ಅಭಿಮಾನಿಗಳಿಗೆ ಕೈಬೀಸುತ್ತಿದ್ದರು. ಈ ವೇಳೆ ಏಕಾಏಕಿ ಫೈರಿಂಗ್ ಸದ್ದು ಕೇಳಿಬಂದಿದೆ. ವೀಡಿಯೋದಲ್ಲಿ ದಾಖಲಾಗಿರುವ ದೃಶ್ಯಾವಳಿಗಳ ಪ್ರಕಾರ, ಒಬ್ಬ ವ್ಯಕ್ತಿ ಎರಡೂ ಕೈಗಳಿಂದ ಬಂದೂಕು ಹಿಡಿದು ಕಾರಿನತ್ತ ಸತತವಾಗಿ ಗುಂಡು ಹಾರಿಸಿದ್ದರೆ, ಕ್ಯಾಪ್ ಧರಿಸಿದ್ದ ಮತ್ತೊಬ್ಬ ಪಕ್ಕದಿಂದಲೇ ಫೈರಿಂಗ್ ಮಾಡಿದ್ದಾನೆ. ಕೃತ್ಯ ಎಸಗಿದ ತಕ್ಷಣ, ಸಮೀಪದಲ್ಲೇ ಬೈಕ್ನಲ್ಲಿ ಕಾಯುತ್ತಿದ್ದ ಮೂರನೇ ವ್ಯಕ್ತಿಯೊಂದಿಗೆ ಮೂವರೂ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯ ಹಂತ-ಹಂತದ ಕಾಲಾವಧಿ (Timeline of Events)
- ಸಂಜೆ 05.00: ನಟ ಟೈಗರ್ ಶ್ರಾಫ್ ಫುಟ್ಬಾಲ್ ಪಂದ್ಯ ಆಡಲು ಜುಹು ಮೈದಾನಕ್ಕೆ ಆಗಮಿಸಿದರು.
- ಸಂಜೆ 07:00: ಆಟ ಮುಗಿಸಿ ಕಾರಿನಲ್ಲಿ ಕುಳಿತ ಟೈಗರ್, ನೆರೆದಿದ್ದ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡರು.
- ಸಂಜೆ 07:05: ಕಾರು ಮೈದಾನದ ಗೇಟ್ನಿಂದ ಹೊರಬರುತ್ತಿದ್ದಂತೆಯೇ ಇಬ್ಬರು ದುಷ್ಕರ್ಮಿಗಳು ದಿಢೀರ್ ದಾಳಿ ನಡೆಸಿ, 5 ರಿಂದ 7 ಸುತ್ತು ಗುಂಡು ಹಾರಿಸಿದರು. ಬಳಿಕ ಬೈಕ್ನಲ್ಲಿ ಕಾಯುತ್ತಿದ್ದ 3ನೇ ವ್ಯಕ್ತಿಯೊಂದಿಗೆ ಪರಾರಿಯಾದರು.
- ಘಟನೆಯ ತೀವ್ರತೆ: ದಾಳಿಯಲ್ಲಿ ಟೈಗರ್ ಅವರ ಚಾಲಕ ಫಿರ್ದೋಸ್, ಸ್ವತಃ ಟೈಗರ್ ಶ್ರಾಫ್ ಅವರ ಕೈಗೆ ಗಾಯಗಳಾದವು ಹಾಗೂ ಸ್ಥಳದಲ್ಲಿದ್ದ ಓರ್ವ ಅಭಿಮಾನಿಗೂ ಗಾಯವಾಯಿತು.
- ಸಾಹಸಿಕ ಚಾಲನೆ: ಚಾಲಕ ಗಾಯಗೊಂಡ ತಕ್ಷಣ ಸ್ವತಃ ನಟ ಟೈಗರ್ ಶ್ರಾಫ್ ಅವರೇ ಡ್ರೈವಿಂಗ್ ಸೀಟಿಗೆ ಬಂದು ಕಾರು ಚಲಾಯಿಸಿದರು. ಸ್ಥಳದಲ್ಲಿದ್ದ ಜನರ ನೆರವಿನಿಂದ ಚಾಲಕನನ್ನು ಹಿಂಭಾಗದ ಸೀಟಿನಲ್ಲಿ ಕುಳ್ಳಿರಿಸಲಾಯಿತು. ಗಾಯಗೊಂಡ ಅಭಿಮಾನಿಯನ್ನು ಕೂಪರ್ ಆಸ್ಪತ್ರೆಗೆ ರವಾನಿಸಲಾಯಿತು.
- ರಾತ್ರಿ 07:30: ಗಾಯಗೊಂಡಿದ್ದ ಚಾಲಕನೊಂದಿಗೆ ನಟ ಟೈಗರ್ ಶ್ರಾಫ್ ನಾನಾವತಿ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆದರು.
- ರಾತ್ರಿ 10:00: ಸಾಮಾಜಿಕ ಜಾಲತಾಣದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಅನಿಲ್ ಪಂಡಿತ್ ಎಂಬಾತ ಈ ದಾಳಿಯ ಹೊಣೆ ಹೊತ್ತುಕೊಂಡ ಪೋಸ್ಟ್ ವೈರಲ್ ಆಯಿತು.
- ರಾತ್ರಿ 11:30: ಮುಂಬೈ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಟೈಗರ್ ಶ್ರಾಫ್ ನಿವಾಸಕ್ಕೆ ಭದ್ರತೆಯನ್ನು ಹೆಚ್ಚಿಸಿದರು.
- ರಾತ್ರಿ 11:40: ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ತಪಾಸಣೆ ಮುಗಿದ ಬಳಿಕ ಪೊಲೀಸರು ಟೈಗರ್ ಶ್ರಾಫ್ ಅವರನ್ನು ಸುರಕ್ಷಿತವಾಗಿ ಅವರ ಮನೆಗೆ ಕರೆತಂದರು.
ಇದನ್ನೂ ಓದಿ: ಟೈಗರ್ ಶ್ರಾಫ್ ಕಾರು ಶೂಟೌಟ್ ಕೇಸ್: ಆರೋಪಿಗಳ ಹಿನ್ನಲೆ ಏನು?
