ನವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಕರೆ ನೀಡಿರುವ ‘ಲೆಹರಾ ದೋ ತಿರಂಗಾ’ ಮೆರವಣಿಗೆಯ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಧರಣಿ ಸ್ಥಳ ಎಂದು ರದ್ದುಗೊಳಿಸಲಾದ ಜಂತರ್ ಮಂತರ್ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಸೌರವ್ ದಾಸ್ ಹಾಗೂ ಆಶುತೋಷ್ ರಂಕಾ ಅವರ ತಕ್ಷಣದ ಬಿಡುಗಡೆಗೆ ಆಗ್ರಹಿಸಿ ಈ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಇಬ್ಬರು ನಾಯಕರ ಬಂಧನವನ್ನು ವಿರೋಧಿಸಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಸಿಜೆಪಿ ಈ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದೆ.
ಕೇಂದ್ರದ ವಿರುದ್ದ ದೀಪ್ಕೆ ವಾಗ್ದಾಳಿ
ದೇಶವ್ಯಾಪಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಅಭಿಯಾನದ ನಡುವೆ, ಕೇಂದ್ರ ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಕೇಂದ್ರ ಸರ್ಕಾರ ಬೆಂಬಲಿಸುತ್ತಿದೆ ಹಾಗೂ ರಕ್ಷಿಸುತ್ತಿದೆ ಎಂದು ಈ ಸಾಮಾಜಿಕ ಮಾಧ್ಯಮ ಮೂಲದ ಸಂಘಟನೆ ಗಂಭೀರ ಆರೋಪ ಮಾಡಿದೆ. ಈ ವಿವಾದದ ಬೆನ್ನಲ್ಲೇ ಸಂಘಟನೆಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ರಾಷ್ಟ್ರಧ್ವಜವನ್ನು ಹಿಡಿದು ಕನ್ನಾಟ್ ಪ್ಲೇಸ್ ಹಾಗೂ ಸೆಂಟ್ರಲ್ ಪಾರ್ಕ್ ಕಡೆಗೆ ಬೃಹತ್ ಸಂಖ್ಯೆಯಲ್ಲಿ ಆಗಮಿಸುವಂತೆ ಸಾರ್ವಜನಿಕರಲ್ಲಿ ಮತ್ತು ವಿವಿಧ ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಿದ್ದಾರೆ. “ಪ್ರಜಾಪ್ರಭುತ್ವ ಹಾಗೂ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜದ ಗುಂಪುಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಬೇಕು. ಮತದಾನದ ಹಕ್ಕು ಉಳಿಯದಿದ್ದರೆ, ದೇಶದಲ್ಲಿ ಪ್ರಜಾಪ್ರಭುತ್ವವೂ ಉಳಿಯುವುದಿಲ್ಲ” ಎಂದು ಮಹಾರಾಷ್ಟ್ರ ಮೂಲದ ದೀಪ್ಕೆ ಕರೆ ನೀಡಿದ್ದಾರೆ.
ಈ ಪ್ರತಿಭಟನಾ ಮೆರವಣಿಗೆಯ ಹಿನ್ನೆಲೆಯಲ್ಲಿ ನವದೆಹಲಿ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ದೆಹಲಿ ಪೊಲೀಸರು ಭಾರೀ ಬಂದೋಬಸ್ತ್ ಕೈಗೊಂಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿಭಟನಾ ಸ್ಥಳವೆಂದು ಗುರುತಿಸಲಾದ ಸೆಂಟ್ರಲ್ ಪಾರ್ಕ್ ಅನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆದರೆ, ಸಾರ್ವಜನಿಕರ ಆಕ್ರೋಶವನ್ನು ಶಮನಗೊಳಿಸಲು ಸೂಕ್ತವಾದ ಸ್ಥಳವೊಂದರಲ್ಲಿ ಆಯ್ದ ಕೆಲವು ಜನರಿಗೆ ಮಾತ್ರ ರಾಷ್ಟ್ರಧ್ವಜ ಹಾರಿಸಲು ಹಾಗೂ ರಾಷ್ಟ್ರಗೀತೆ ಹಾಡಲು ಅನುಮತಿ ನೀಡುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದೆಡೆ, ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ದೆಹಲಿ ಪೊಲೀಸರು ಎಚ್ಚರಿಸಿದ್ದಾರೆ. ಸಾರ್ವಜನಿಕರು ಹಾಗೂ ಪ್ರತಿಭಟನಾಕಾರರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಈ ಮಧ್ಯೆ ಮಧ್ಯ ದೆಹಲಿ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ, ಪ್ರಯಾಣಿಕರು ಸೂಕ್ತ ಸಮಯವನ್ನು ಕಾಯ್ದಿರಿಸಿಕೊಂಡು ಪ್ರಯಾಣ ಬೆಳೆಸುವಂತೆ ಪೊಲೀಸರು ಸಂಚಾರ ಸಲಹೆಯನ್ನು (ಟ್ರ್ಯಾಫಿಕ್ ಅಡ್ವೈಸರಿ) ಬಿಡುಗಡೆ ಮಾಡಿದ್ದಾರೆ.
ಪೊಲೀಸರ ಖಡಕ್ ಎಚ್ಚರಿಕೆ
ನಿಯಮಗಳನ್ನು ಮೀರಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಪೊಲೀಸ್ ಮಾಧ್ಯಮ ಪ್ರತಿನಿಧಿ, ಡಿಸಿಪಿ ನೇಹಾ ಯಾದವ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಹಾಗೂ ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಶಾಂತಿಗೆ ಧಕ್ಕೆ ತರಬಾರದು. ಸ್ಥಳೀಯ ವ್ಯಾಪಾರಿಗಳು ಮತ್ತು ಅಂಗಡಿಕಾರರ ದೈನಂದಿನ ವ್ಯವಹಾರಗಳಿಗೆ ಅಡ್ಡಿಪಡಿಸುವ ವಾತಾವರಣವನ್ನು ನಿರ್ಮಿಸಬಾರದು ಎಂದು ಅವರು ಕೋರಿದ್ದಾರೆ. ದೆಹಲಿ ಪೊಲೀಸರ ಬಿಗಿ ಭದ್ರತೆಯ ಮಧ್ಯೆ ಸಿಜೆಪಿ ಹಮ್ಮಿಕೊಂಡಿರುವ ಈ ಮೆರವಣಿಗೆ ರಾಜಧಾನಿಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್ – ರಾಹುಲ್ ಗಾಂಧಿ ಪ್ರತಿಭಟನಾ ವೈಖರಿಗೆ ತೀವ್ರ ಅಸಮಾಧಾನ
