TOP NEWS

KPSC: ಕೆಪಿಎಸ್‌ಸಿ ಅಕ್ರಮ ಹಣದಲ್ಲಿ ಹೈಫೈ ಫ್ಲೈಟ್ ಜರ್ನಿ: ಶಿವಶಂಕರಪ್ಪ, ಗೀತಾಗೆ ಟಿಕೆಟ್ ಬುಕ್ ಮಾಡಿದ್ದ ಪಿಎ!

KPSC Scam Money Used for Luxury Flight Travel PA Booked Tickets for Accused

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ತನಿಖೆ ತೀವ್ರಗೊಂಡಿದ್ದು, ತನಿಖೆಯ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ. ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣದ ವಹಿವಾಟನ್ನು ಬಳಸಿ ಪ್ರಮುಖ ಆರೋಪಿಗಳಾದ ಶಿವಶಂಕರಪ್ಪ ಸಾಹುಕಾರ್ ಹಾಗೂ ಬಿ.ವಿ. ಗೀತಾ ಅವರಿಗೆ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಲಾಗಿತ್ತು ಎಂಬ ಶಾಕಿಂಗ್ ಸತ್ಯ ಈಗ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಹೊಸ ತಿರುವು ಕೊಟ್ಟ ಪಿಎ ಹೇಳಿಕೆ

ಇಡಿ ಅಧಿಕಾರಿಗಳ ತೀವ್ರ ವಿಚಾರಣೆಯ ಸಂದರ್ಭದಲ್ಲಿ ಶಿವಶಂಕರಪ್ಪ ಸಾಹುಕಾರ್ ಅವರ ಆಪ್ತ ಸಹಾಯಕ (PA) ನೀಡಿದ ಹೇಳಿಕೆಯು ಈ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ‘ಮೈ ಟ್ರಾವೆಲ್ ಏರ್’ ಸಂಸ್ಥೆ ಹಾಗೂ ಖಾಸಗಿ ಏಜೆಂಟ್‌ಗಳ ಮೂಲಕ ಈ ಫ್ಲೈಟ್ ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿತ್ತು ಎಂದು ಪಿಎ ಸ್ಪಷ್ಟಪಡಿಸಿದ್ದಾರೆ. ನೇಮಕಾತಿ ಅಕ್ರಮದ ಮೂಲಕ ಬಂದಿದ್ದ ಅಕ್ರಮ ಹಣವನ್ನೇ ಈ ಪ್ರಯಾಣದ ವೆಚ್ಚಕ್ಕಾಗಿ ಬಳಸಿಕೊಳ್ಳಲಾಗಿತ್ತು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.

ಈ ಇಡೀ ಹಗರಣದ ಸುಳಿವು ತನಿಖಾ ಸಂಸ್ಥೆಗಳಿಗೆ ಸಿಕ್ಕಿದ್ದೇ ಅಭ್ಯರ್ಥಿಗಳ ಅಂಕಪಟ್ಟಿಗಳ ಪರಿಶೀಲನೆಯಿಂದ ಎಂಬುದು ವಿಶೇಷ. ಶಿವಶಂಕರಪ್ಪ ಮತ್ತು ಗೀತಾ ಅವರೊಂದಿಗೆ ಈ ಪ್ರಕರಣದ ಇತರೆ ಪ್ರಮುಖ ಆರೋಪಿಗಳಾದ ನಂದೀಶ್ ಹಾಗೂ ವಿನುತಾ ನಿರಂತರವಾಗಿ ಸಂಪರ್ಕದಲ್ಲಿದ್ದರು. ತನಿಖಾಧಿಕಾರಿಗಳು ಆರೋಪಿಗಳ ಕಾಲ್ ಡಿಟೇಲ್ ರೆಕಾರ್ಡ್ಸ್ (CDR), ಸಿಸಿಟಿವಿ ದೃಶ್ಯಾವಳಿಗಳು ಹಾಗೂ ವಾಟ್ಸ್‌ಆ್ಯಪ್‌ ಸಂಭಾಷಣೆಗಳನ್ನು ಕಲೆಹಾಕಿ ಪರಿಶೀಲಿಸಿದಾಗ ಇವರ ನಡುವಿನ ಅಕ್ರಮ ವ್ಯವಹಾರದ ಕೊಂಡಿ ಪತ್ತೆಯಾಗಿತ್ತು.

ತನಿಖೆ ಚುರುಕುಗೊಳಿಸಿದ ಇಡಿ

ಇದನ್ನೇ ಆಧಾರವಾಗಿಟ್ಟುಕೊಂಡು ವಿನುತಾ ಹಾಗೂ ನಂದೀಶ್ ಅವರ ಮಾರ್ಕ್ಸ್ ಕಾರ್ಡ್‌ಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ, ನೇಮಕಾತಿಯಲ್ಲಿ ನಡೆದಿದ್ದ ಬೃಹತ್ ಅಕ್ರಮ ಹಾಗೂ ಕಳ್ಳಾಟ ಸಂಪೂರ್ಣವಾಗಿ ಬಯಲಾಗಿದೆ. ಸದ್ಯ ಈ ಜಾಲದ ಮೂಲ ಬೇರನ್ನು ಪತ್ತೆಹಚ್ಚಲು ಇಡಿ ಅಧಿಕಾರಿಗಳು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಪ್ರಭಾವಿಗಳ ಹೆಸರುಗಳು ಹೊರಬರುವ ಸಾಧ್ಯತೆಯಿದೆ.

ಇದನ್ನೂ ಓದಿ:ನಕಲಿ ಆಂಟಿಬಯೋಟಿಕ್ ಪ್ರಕರಣ: ಏಳು ಮಂದಿ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದ ಎಸ್‌ಐಟಿ

Leave a Reply

Your email address will not be published. Required fields are marked *