ಹೋಶಿಯಾರ್ಪುರ: 99 ವರ್ಷದ ವೃದ್ಧೆಯೊಬ್ಬಳನ್ನು ದರೋಡೆಕೋರನೊಬ್ಬ ಕೊಲೆ (Horror) ಮಾಡಿ, ಆಕೆಯ ದೇಹವನ್ನು ಕಬ್ಬಿಣದ ಟ್ರಂಕಿನೊಳಗೆ ತುಂಬಿಸಿರುವ ಘಟನೆ ಹೋಶಿಯಾರ್ಪುರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂಟಿಯಾಗಿ ವಾಸ ಮಾಡುತ್ತಿದ್ದ ಮಹಿಳೆ
ಪೊಲೀಸರ ಮಾಹಿತಿ ಪ್ರಕಾರ, ಮೃತ ವೃದ್ಧೆಯನ್ನ ಜೋಗಿಂದರ್ ಕೌರ್ ಎಂದು ಗುರುತಿಸಲಾಗಿದೆ. ಇನ್ನು ಚಬ್ಬೇವಾಲ್ ಪ್ರದೇಶದ ಭಾಮ್ ಹಳ್ಳಿಯಲ್ಲಿರುವ ತನ್ನ ಮನೆಯಲ್ಲಿ ವೃದ್ಧೆ ಒಂಟಿಯಾಗಿ ವಾಸ ಮಾಡುತ್ತಿದ್ದರು ಎನ್ನಲಾಗಿದ್ದು, ಹಿಂದಿನ ಬುಧವಾರ ಸಂಜೆ ಆಕೆಯ ಶವ ಪತ್ತೆಯಾಗಿದ್ದು, ತಲೆಯ ಮೇಲೆ ಗಾಯದ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಅದೇ ಗ್ರಾಮದ ವ್ಯಕ್ತಿಯ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ಪೊಲೀಸರ ಪ್ರಕಾರ, ಪ್ರತಿದಿನ ಸಂಜೆ ವೃದ್ಧ ಮಹಿಳೆಯ ಮನೆಗೆ ಹಾಲು ಕೊಡುವ ವ್ಯಕ್ತಿಯೊಬ್ಬರು ಹಿಂದಿನ ಸಂಜೆ ಆಕೆಯ ಬಾಗಿಲಲ್ಲಿ ಇಟ್ಟಿದ್ದ ಹಾಲಿನ ಬಾಟಲಿಯನ್ನು ಮುಟ್ಟದೆ ಹಾಗೆ ಬಿದ್ದಿರುವುದನ್ನು ಗಮನಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಇಷ್ಟು ವರ್ಷಗಳಲ್ಲಿ ಈ ರೀತಿಯ ಘಟನೆ ನಡೆಯದ ಕಾರಣ ತಕ್ಷಣವೇ ಅವರು ಸುತ್ತ-ಮುತ್ತಲಿನ ಜನರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದ ಸ್ಥಳೀಯರು ವೃದ್ಧ ಮಹಿಳೆಗಾಗಿ ಹುಡುಕಾಟ ನಡೆಸಿದರು. ಅವರು ಆಕೆಯ ಮನೆಗೆ ಪ್ರವೇಶಿಸಿ ಪರಿಶೀಲಿಸಿದಾಗ ಕಬ್ಬಿಣದ ಟ್ರಂಕಿನೊಳಗೆ ಆಕೆಯ ಶವ ಪತ್ತೆಯಾಗಿದೆ.
ಪೊಲೀಸರು ಅದೇ ಗ್ರಾಮದ ನಿವಾಸಿ ಡೇನಿಯಲ್ ಎನ್ನುವ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಸದ್ಯ ಆತ ಪರಾರಿ ಆಗಿದ್ದಾನೆ.
ಕಳ್ಳತನಕ್ಕೆ ಪ್ರಯತ್ನ, ಶಂಕೆ ವ್ಯಕ್ತಪಡಿಸಿದ ಪೊಲೀಸರು
ಕಳ್ಳತನದ ಉದ್ದೇಶದಿಂದ ಆರೋಪಿ ಮಹಿಳೆಯ ಮನೆಗೆ ನುಗ್ಗಿ ದರೋಡೆ ಪ್ರಯತ್ನದ ಸಮಯದಲ್ಲಿ ಆಕೆಯನ್ನು ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ̤
ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103 (ಕೊಲೆಗೆ ಶಿಕ್ಷೆ) ಮತ್ತು 331(3) (ಮನೆಯೊಳಗೆ ನುಗ್ಗುವುದು ಅಥವಾ ಅಪರಾಧ ಮಾಡಲು ಮನೆಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೈರತಿ ಬಸವರಾಜು ವಿರುದ್ಧ ಪೊಲೀಸರು ಕಾನೂನು ಕ್ರಮ: ಜಿ ಪರಮೇಶ್ವರ್
