TOP NEWS

DK Shivakumar: ಹೈಕೋರ್ಟ್ ಆವರಣದಲ್ಲಿದ್ದ ಬೃಹತ್ ಕಟೌಟ್‌ಗಳನ್ನು ಕಿತ್ತೆಸೆದ ಪೊಲೀಸರು!

High Court ordered to Remove DK Shivakumar Cut Outs

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಅಧಿಕಾರ ಸ್ವೀಕರಿಸುವ ಐತಿಹಾಸಿಕ ಕ್ಷಣಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಬೆಂಗಳೂರಿನ ಹೈಕೋರ್ಟ್ ಅನಧಿಕೃತ ಫ್ಲೆಕ್ಸ್ ಹಾವಳಿ ವಿರುದ್ಧ ತೀವ್ರ ಕೆಂಗಣ್ಣು ಬೀರಿದೆ. ಜೂನ್ 3ರಂದು ನಡೆಯಲಿರುವ ಈ ಪಟ್ಟಾಭಿಷೇಕದ ಸಡಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೈಕೋರ್ಟ್ ಮತ್ತು ವಿಧಾನಸೌಧದ ಸುತ್ತಮುತ್ತ ಅಳವಡಿಸಿದ್ದ ಸಾಲು ಸಾಲು ದೈತ್ಯ ಕಟೌಟ್‌ಗಳು ಹಾಗೂ ಬ್ಯಾನರ್‌ಗಳನ್ನು ನ್ಯಾಯಾಧೀಶರ ಖಡಕ್ ಆದೇಶದ ಮೇರೆಗೆ ಅಧಿಕಾರಿಗಳು ಜಾಗದಲ್ಲೇ ತೆರವುಗೊಳಿಸಿದ್ದಾರೆ.

ಕೊನೆಗೂ ಪಟ್ಟ ಗಿಟ್ಟಿಸಿಕೊಂಡ ಡಿಕೆಶಿ

ಕಳೆದ ಕೆಲವು ವಾರಗಳಿಂದ ಕಾಂಗ್ರೆಸ್ ಪಾಳಯದಲ್ಲಿ ನಡೆದಿದ್ದ ಸುದೀರ್ಘ ರಾಜಕೀಯ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಿದ್ದು, ಹಾಲಿ ಸಿಎಂ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಿ ಡಿ.ಕೆ. ಶಿವಕುಮಾರ್ ರಾಜ್ಯದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಈ ನಾಯಕತ್ವ ಬದಲಾವಣೆಯ ಅತಿಯಾದ ಉತ್ಸಾಹದಲ್ಲಿದ್ದ ಬೆಂಬಲಿಗರು ವಿಧಾನಸೌಧದ ಮುಂಭಾಗದಲ್ಲೇ ಆಕಾಶದೆತ್ತರದ ಬೃಹತ್ ಕಟೌಟ್‌ಗಳನ್ನು ನಿಲ್ಲಿಸಿದ್ದರು. ಆದರೆ, ಅಭಿನಂದನಾ ಸಂದೇಶಗಳಿದ್ದ ಈ ಬ್ಯಾನರ್‌ಗಳು ಹೈಕೋರ್ಟ್‌ನ ಮುಖ್ಯ ಕಟ್ಟಡದ ಮುಂಭಾಗದ ನೋಟಕ್ಕೆ ಸಂಪೂರ್ಣ ಅಡ್ಡಿಪಡಿಸುತ್ತಿದ್ದವು. ಇದು ನ್ಯಾಯಾಲಯದ ಆವರಣದಲ್ಲಿದ್ದ ಜಡ್ಜ್‌ಗಳ ಗಮನಕ್ಕೆ ಬರುತ್ತಿದ್ದಂತೆ, ಹೈಕೋರ್ಟ್ ಕಡೆಯಿಂದ ಕಠಿಣ ಕಾನೂನು ನಿರ್ದೇಶನಗಳು ಹೊರಬಿದ್ದಿವೆ.

ಆದೇಶ ನೀಡಿದ ಹೈಕೋರ್ಟ್

ನ್ಯಾಯಾಧೀಶರು ಗಂಭೀರವಾಗಿ ಸೂಚನೆ ನೀಡುತ್ತಿದ್ದಂತೆ ಅಲರ್ಟ್ ಆದ ಹೈಕೋರ್ಟ್ ಉನ್ನತಾಧಿಕಾರಿಗಳು, ತಕ್ಷಣವೇ ಇವುಗಳನ್ನು ತೆರವುಗೊಳಿಸುವಂತೆ ಪೊಲೀಸ್ ಇಲಾಖೆಗೆ ಕಡಕ್ ಆರ್ಡರ್ ಮಾಡಿದರು. ಆದೇಶ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜಿಬಿಎ ಮತ್ತು ಪೊಲೀಸ್ ಸಿಬ್ಬಂದಿ, ನ್ಯಾಯಾಲಯದ ಘನತೆಗೆ ಧಕ್ಕೆ ತರುತ್ತಿದ್ದ ಹಾಗೂ ನಗರದ ಸೌಂದರ್ಯ ಹಾಳುಗೆಡವುತ್ತಿದ್ದ ಎಲ್ಲಾ ಫ್ಲೆಕ್ಸ್ ಬೋರ್ಡ್‌ಗಳನ್ನು ಮರದ ಚೌಕಟ್ಟುಗಳ ಸಮೇತ ಕಿತ್ತೆಸೆದಿದ್ದಾರೆ. ಹೈಟೆಕ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ನಡೆದ ಈ ದಿಢೀರ್ ಕಾರ್ಯಾಚರಣೆ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣವಚನ ಸಡಗರ: ಸ್ವಪಕ್ಷದವರಿಂದಲೇ ನಿಯಮಗಳ ಉಲ್ಲಂಘನೆ, ಇಡೀ ಸಿಟಿ ಫ್ಲೆಕ್ಸ್‌ಮಯ!

ನಗರದ ಸೌಂದರ್ಯ ಹಾಳುಗೆಡವಿ ಎಲ್ಲಾದರೂ ಅನಧಿಕೃತ ಬ್ಯಾನರ್ ಅಥವಾ ಫ್ಲೆಕ್ಸ್ ಹಾಕಿದರೆ ನಾನೇ ಖುದ್ದಾಗಿ ಕೇಸ್ ದಾಖಲಿಸಲು ಸೂಚಿಸುತ್ತೇನೆ” ಎಂದು ಹಿಂದೆ ಉಪಮುಖ್ಯಮಂತ್ರಿಯಾಗಿದ್ದ, ಪ್ರಸ್ತುತ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಅವರು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ನೀಡಿದ್ದರು. ಆದರೆ, ಜೂನ್ 3ರಂದು ನೆರವೇರಲಿರುವ ಅವರದೇ ಐತಿಹಾಸಿಕ ಪ್ರಮಾಣವಚನ ಸ್ವೀಕಾರ ಸಮಾರಂಭದ ಜೋಶ್‌ನಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ತಮ್ಮದೇ ನಾಯಕನ ಆದೇಶಕ್ಕೆ ಕವಡೆ ಕಾಸಿನ ಕೀಮ್ಮತ್ತು ನೀಡಿಲ್ಲ. ವರಿಷ್ಠರ ಸೂಚನೆ ಹಾಗೂ ಡಿಕೆಶಿಯವರ ಕಡಕ್ ಆದೇಶಗಳನ್ನು ಸಂಪೂರ್ಣವಾಗಿ ಮರೆತಿರುವ ಅಭಿಮಾನಿ ಬಳಗ, ರಾಜಧಾನಿಯ (Bengaluru) ತುಂಬಾ ಬ್ಯಾನರ್ ಹಾವಳಿ ಸೃಷ್ಟಿಸಿ ನಾಯಕರಿಗೇ ಮುಜುಗರ ತಂದಿಟ್ಟಿದೆ.

ಬೇಸರ ವ್ಯಕ್ತಪಡಿಸಿದ ಸಾರ್ವಜನಿಕರು

ಹಿಂದೆ ತಮ್ಮ ಜನ್ಮದಿನದ ಸಂದರ್ಭದಲ್ಲೂ ಬೆಂಗಳೂರಿನ ಅಂದ ಕೆಡಿಸುವ ಯಾವುದೇ ಫ್ಲೆಕ್ಸ್ ಅಳವಡಿಸದಂತೆ ಡಿ.ಕೆ. ಶಿವಕುಮಾರ್ ಸಾರ್ವಜನಿಕವಾಗಿ ಮನವಿ ಮಾಡಿದ್ದರು. ಆದರೆ, ಈ ಮಹತ್ವದ ಸುಮುಹೂರ್ತದ ನೆಪದಲ್ಲಿ ಇಡೀ ಬೆಂಗಳೂರು ಈಗ ಫ್ಲೆಕ್ಸ್‌ಗಳ ಸಾಮ್ರಾಜ್ಯವಾಗಿ ಮಾರ್ಪಟ್ಟಿದೆ. ನಗರದ ಪ್ರಮುಖ ಜಂಕ್ಷನ್‌ಗಳು, ಸಿಗ್ನಲ್‌ಗಳು, ರಾಜಭವನದ ಆಸುಪಾಸು ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯುದ್ದಕ್ಕೂ ಬೃಹತ್ ಕಟೌಟ್‌ಗಳು ರಾರಾಜಿಸುತ್ತಿವೆ. ಫುಟ್‌ಪಾತ್ ಹಾಗೂ ರಸ್ತೆಗಳ ಅಂಚನ್ನು ಒತ್ತುವರಿ ಮಾಡಿಕೊಂಡು ಅಳವಡಿಸಲಾಗಿರುವ ಈ ಬ್ಯಾನರ್‌ಗಳು ವಾಹನ ಸವಾರರ ಗಮನ ಬೇರೆಡೆ ಸೆಳೆಯುತ್ತಿದ್ದು, ಅಪಘಾತಗಳಿಗೆ ಮುನ್ನುಡಿ ಬರೆಯುವಂತಿವೆ ಎಂದು ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ನಾಗರಿಕರ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲೂ ಸ್ಫೋಟಗೊಂಡಿದ್ದು, ಅಕ್ರಮ ಫ್ಲೆಕ್ಸ್‌ಗಳ ಚಿತ್ರ ಹಾಗೂ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ಹಂಚಿಕೊಳ್ಳುವ ಮೂಲಕ ಸರ್ಕಾರದ ಧೋರಣೆಯನ್ನು ಪ್ರಶ್ನಿಸುತ್ತಿದ್ದಾರೆ. “ನಿಯಮ ಮತ್ತು ಕಾಯ್ದೆಗಳು ಏನಿದ್ದರೂ ಕೇವಲ ಜನಸಾಮಾನ್ಯರಿಗೆ ಮಾತ್ರವೇ? ರಾಜಕೀಯ ಶಕ್ತಿಗಳಿಗೂ ಮತ್ತು ಅವರ ಚೇಲಾಗಳಿಗೂ ಕಾನೂನು ಅನ್ವಯಿಸುವುದಿಲ್ಲವೇ?” ಎಂದು ನೆಟ್ಟಿಗರು ಆಡಳಿತ ಮಂಡಳಿಯನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹೊಸ ಸರ್ಕಾರದ ಆಡಳಿತದ ಆರಂಭದ ಸಡಗರ ಒಂದೆಡೆಯಾದರೆ, ಸಾರ್ವಜನಿಕ ನಿಯಮಗಳ ಈ ಬಹಿರಂಗ ಉಲ್ಲಂಘನೆ ಸದ್ಯ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬರಹಗಾರ ರಾಜೀವ ಹೆಗಡೆ, “ಇದರಲ್ಲಿ ಭಾವಿ ಸಿಎಂ ಡಿ.ಕೆ.ಶಿವಕುಮಾರ್ ಅವರ ತಪ್ಪೇನೂ ಇಲ್ಲ. ಆದರೆ ಚೇಲಾಗಳು ಮಾಡುವ ಇಂತಹ ಮೂರ್ಖತನದ ಕೆಲಸಗಳಿಂದ ಅವರ ನಾಯಕರಿಗೇ ಸಾರ್ವಜನಿಕವಾಗಿ ಮುಜುಗರ ಎದುರಾಗುತ್ತದೆ ಎನ್ನುವ ಕನಿಷ್ಠ ಜ್ಞಾನವೂ ಇವರಿಗಿಲ್ಲ. ಡಿಕೆಶಿ ಹಲವು ಬಾರಿ ಈ ಫ್ಲೆಕ್ಸ್ ಸಂಸ್ಕೃತಿಯ ವಿರುದ್ಧ ಧ್ವನಿ ಎತ್ತಿದ್ದನ್ನು ನಾನು ನೋಡಿದ್ದೇನೆ. ಆದರೆ ಪಕ್ಷಾತೀತವಾಗಿ ಬೆಳೆದುಬಂದಿರುವ ಈ ಬ್ಯಾನರ್ ಹಾವಳಿ ದಿನನಿತ್ಯ ಸವಾರರಿಗೆ ನರಕ ದರ್ಶನ ಮಾಡಿಸುತ್ತಿದೆ” ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಲೇವಡಿ

ಇದೇ ವಿಷಯವಾಗಿ ಎ.ಎನ್‌.ಸಚ್ಚಿದಾನಂದ ಎಂಬುವವರು ಫೇಸ್‌ಬುಕ್ ಪೋಸ್ಟ್ ಮೂಲಕ ಲೇವಡಿ ಮಾಡಿದ್ದು, “ಸಾಹಸ ಮತ್ತು ಥ್ರಿಲ್ ಅನುಭವಿಸಬೇಕಾದವರು ತಡಮಾಡದೆ ಎಂ.ಜಿ. ರೋಡ್‌ಗೆ ಬನ್ನಿ! ಬೆಂಗಳೂರಿನ ಹೃದಯಭಾಗದಲ್ಲಿ ಜಿಬಿಎ ಹಾಗೂ ರಾಜಕಾರಣಿಗಳ ಜಂಟಿ ಆಶ್ರಯದಲ್ಲಿ ಉಚಿತವಾಗಿ ‘ಸಮ್ಮರ್ ಅಡ್ವೆಂಚರ್ ಕ್ಯಾಂಪ್’ ಆಯೋಜಿಸಲಾಗಿದೆ. ಇಲ್ಲಿ ನಿಮಗೆ ದಿಢೀರನೆ ಎದುರಾಗುವ ಮಹಾನ್ ನಾಯಕರ ಕಟೌಟ್‌ಗಳು, ಕಣ್ಣಿಗೆ ಚುಚ್ಚುವ ಕೋಲುಗಳ ಹರ್ಡಲ್ ರೇಸ್ ಮತ್ತು ಫುಟ್‌ಪಾತ್ ಮೇಲೆ ಫ್ಲೆಕ್ಸ್‌ಗಳ ನಡುವೆ ಸಾಗುವ ಸರ್ವೈವಲ್ ಗೇಮ್‌ಗಳ ಅನುಭವ ಸಿಗಲಿದೆ. ಇಷ್ಟೆಲ್ಲಾ ಫ್ರೀಯಾಗಿ ಸಿಗುವಾಗ ವಂಡರ್‌ಲಾ ರೇಂಜ್‌ಗೆ ಖರ್ಚು ಮಾಡುವುದು ಯಾಕೆ? ಜಿಬಿಎ ಅಧಿಕಾರಿಗಳು ನಿದ್ದೆಯಿಂದ ಎಚ್ಚರಗೊಳ್ಳುವವರೆಗೆ ಮಾತ್ರ ಈ ಆಫರ್ ಇರಲಿದೆ” ಎಂದು ಜಿಬಿಎ ಆಡಳಿತದ ನಿಷ್ಕ್ರಿಯತೆಯನ್ನು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ: ಧರ್ಮಗುರುಗಳ ಸಮ್ಮುಖದಲ್ಲಿ ಪೂರ್ವಾಭಿಮುಖವಾಗಿ ಸಿಎಂ ಆಗಿ ಡಿಕೆಶಿ ಪ್ರಮಾಣವಚನ: ಗಾಜಿನಮನೆಯಲ್ಲಿ ಸೌಹಾರ್ದತೆಯ ಸಂದೇಶ!

Leave a Reply

Your email address will not be published. Required fields are marked *