TOP NEWS

Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಗ್ಯ ತಪಾಸಣೆ ಯಶಸ್ವಿ: ತೂಗಾಡುವ ವಿಡಿಯೋ ವದಂತಿಗಳಿಗೆ ತೆರೆ ಎಳೆದ ವೈದ್ಯಕೀಯ ವರದಿ

Donald Trump health updated gave clarification to rumours

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರಕ್ಕೆ ಭೇಟಿ ನೀಡಿ ಮತ್ತೊಮ್ಮೆ ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ.

ಆತಂಕ ಮೂಡಿಸಿದ್ದ ವೈರಲ್‌ ವಿಡಿಯೋ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋವೊಂದರಲ್ಲಿ ಟ್ರಂಪ್ ಅವರು ಸರಿಯಾಗಿ ನಿಲ್ಲಲಾಗದೆ ತೂಗಾಡುತ್ತಿರುವಂತೆ ಕಂಡುಬಂದಿದ್ದು, ಜಾಗತಿಕ ಮಟ್ಟದಲ್ಲಿ ಅವರ ಆರೋಗ್ಯದ ಕುರಿತು ಭಾರಿ ಆತಂಕ ಮೂಡಿಸಿತ್ತು. ಈ ವಿಡಿಯೋ ಸೃಷ್ಟಿಸಿದ ಗದ್ದಲದ ಕೆಲವೇ ಗಂಟೆಗಳಲ್ಲಿ ಅವರು ಆಸ್ಪತ್ರೆಗೆ ಭೇಟಿ ನೀಡಿರುವುದು ಭಾರಿ ಚರ್ಚೆಗೆ ಕಾರಣವಾಗಿತ್ತು. ಕಳೆದ ೧೩ ತಿಂಗಳಲ್ಲಿ ಟ್ರಂಪ್ ಅವರು ವೈದ್ಯರನ್ನು ಭೇಟಿ ಮಾಡುತ್ತಿರುವ ಮೂರನೇ ಸಂದರ್ಭ ಇದಾಗಿದ್ದು, ಇದಕ್ಕೂ ಮುನ್ನ ೨೦೨೫ರ ಏಪ್ರಿಲ್‌ನಲ್ಲಿ ವಾರ್ಷಿಕ ದೈಹಿಕ ತಪಾಸಣೆ ಹಾಗೂ ಅಕ್ಟೋಬರ್‌ನಲ್ಲಿ ಫಾಲೋ-ಅಪ್ ತಪಾಸಣೆ ಮಾಡಿಸಿಕೊಂಡಿದ್ದರು. ಜೊತೆಗೆ ಮೇ ೨ ರಂದು ಫ್ಲೋರಿಡಾದಲ್ಲಿ ದಂತ ವೈದ್ಯರ ಬಳಿಗೂ ಹೋಗಿದ್ದರು.

ತಮ್ಮ ದೈಹಿಕ ಸ್ಥಿತಿಯ ಬಗ್ಗೆ ಹರಡುತ್ತಿರುವ ಗಾಳಿಸುದ್ದಿಗಳಿಗೆ ಸ್ವತಃ ಡೊನಾಲ್ಡ್ ಟ್ರಂಪ್ ಅವರೇ ತಮ್ಮ ‘ಟ್ರುತ್ ಸೋಶಿಯಲ್’ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಆಸ್ಪತ್ರೆಯ ವೈದ್ಯಕೀಯ ಪ್ರಕ್ರಿಯೆಗಳು ಮುಗಿದ ತಕ್ಷಣವೇ ಪೋಸ್ಟ್ ಹಂಚಿಕೊಂಡಿರುವ ಅವರು, ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಯಲ್ಲಿ ತಮ್ಮ ೬ ತಿಂಗಳ ವಾಡಿಕೆಯ ದೈಹಿಕ ತಪಾಸಣೆ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಪ್ರಕಟಿಸಿದ್ದಾರೆ. ಎಲ್ಲಾ ವೈದ್ಯಕೀಯ ವರದಿಗಳು ಸಂಪೂರ್ಣವಾಗಿ ಉತ್ತಮವಾಗಿ ಬಂದಿದ್ದು, ತಮಗೆ ಚಿಕಿತ್ಸೆ ನೀಡಿದ ದಕ್ಷ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿರುವ ಟ್ರಂಪ್, ತಾವು ಮರಳಿ ಶ್ವೇತಭವನದತ್ತ (ವೈಟ್ ಹೌಸ್) ಹೊರಡುತ್ತಿರುವುದಾಗಿ ತಿಳಿಸಿದ್ದಾರೆ. ಮುಂದಿನ ತಿಂಗಳು ಟ್ರಂಪ್ ಅವರು ತಮ್ಮ ೮೦ನೇ ವಯಸ್ಸಿಗೆ ಪಾದಾರ್ಪಣೆ ಮಾಡುತ್ತಿರುವುದರಿಂದ ಅವರ ದೈಹಿಕ ಸಾಮರ್ಥ್ಯದ ಮೇಲೆ ಎಲ್ಲರ ನಿಗಾ ನೆಟ್ಟಿದೆ.

ಟ್ರಂಪ್‌ಗಿದೆ ಈ ಸಮಸ್ಯೆ

ಇದೇ ವೇಳೆ ಟ್ರಂಪ್ ಅವರ ವೈಯಕ್ತಿಕ ವೈದ್ಯರು ಅಧ್ಯಕ್ಷರ ಆರೋಗ್ಯದ ಸ್ಥಿತಿಗತಿಯ ಅಧಿಕೃತ ವರದಿಯನ್ನು ಹಂಚಿಕೊಂಡಿದ್ದು, ವಯೋಸಹಜವಾಗಿ ಕಾಡುವ ಒಂದು ದೀರ್ಘಕಾಲದ ಸಮಸ್ಯೆಯನ್ನು ಹೊರತುಪಡಿಸಿದರೆ ಅಧ್ಯಕ್ಷರು ಮತ್ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೈದ್ಯಕೀಯ ಭಾಷೆಯಲ್ಲಿ ಅವರಿಗೆ ‘ಕ್ರಾನಿಕ್ ವೆನಸ್ ಇನ್ಸಫಿಷಿಯನ್ಸಿ’ (Chronic Venous Insufficiency) ಎಂಬ ರಕ್ತನಾಳದ ದೋಷವಿರುವುದು ದೃಢಪಟ್ಟಿದೆ. ಸಾಮಾನ್ಯವಾಗಿ ಕಾಲುಗಳು ಸೇರಿದಂತೆ ದೇಹದ ವಿವಿಧ ಭಾಗಗಳಿಂದ ರಕ್ತವನ್ನು ಮರಳಿ ಹೃದಯಕ್ಕೆ ಪಂಪ್ ಮಾಡಲು ರಕ್ತನಾಳಗಳಲ್ಲಿನ ಕವಾಟಗಳು ಸಹಾಯ ಮಾಡುತ್ತವೆ. ಆದರೆ ಈ ದೋಷ ಕಾಣಿಸಿಕೊಂಡಾಗ ರಕ್ತ ಪರಿಚಲನೆ ಸುಗಮವಾಗಿ ನಡೆಯದೆ, ರಕ್ತವು ಮರಳಿ ಹೃದಯಕ್ಕೆ ಹೋಗುವ ಬದಲು ಕೆಳಭಾಗದ ಕಾಲುಗಳಲ್ಲೇ ಶೇಖರಣೆಯಾಗಲು ಶುರುವಾಗುತ್ತದೆ. ೫೦ ವರ್ಷ ದಾಟಿದ ಪ್ರತಿ ೨೦ ಜನರಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಡುವುದು ಸಾಮಾನ್ಯವಾಗಿದ್ದು, ಇದು ಜೀವಕ್ಕೆ ಯಾವುದೇ ಅಪಾಯ ತರದೆ ಇದ್ದರೂ ತೀವ್ರ ಕಾಲು ನೋವು ಮತ್ತು ಅಸ್ವಸ್ಥತೆಗೆ ಕಾರಣವಾಗುತ್ತದೆ.

ವೈದ್ಯರ ಪ್ರಕಾರ, ಈ ರಕ್ತನಾಳದ ದೋಷಕ್ಕೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಕಾಲುಗಳಲ್ಲಿ ಅತಿಯಾದ ಊತ, ಮಸಲ್ಸ್ ಸೆಳೆತ, ಚರ್ಮವು ಕೆಂಪು-ಕಂದು ಬಣ್ಣಕ್ಕೆ ತಿರುಗುವುದು, ಅತಿಯಾದ ತುರಿಕೆ ಹಾಗೂ ಕಾಲುಗಳ ಮೇಲೆ ಹುಣ್ಣುಗಳು (ಅಲ್ಸರ್) ಮೂಡುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಅತಿಯಾದ ತೂಕ ಹೊಂದಿರುವವರಲ್ಲಿ ಮತ್ತು ದೀರ್ಘಕಾಲ ನಿಂತುಕೊಂಡು ಕೆಲಸ ಮಾಡುವವರಲ್ಲಿ ಈ ದೋಷದ ಪ್ರಭಾವ ಹೆಚ್ಚಾಗಿರುತ್ತದೆ. ಆದರೆ ಟ್ರಂಪ್ ಅವರ ಮುಖ್ಯ ವೈದ್ಯರಾದ ಸೀನ್ ಬಾರ್ಬಬೆಲ್ಲಾ ಅವರು, ಅಧ್ಯಕ್ಷರ ಈ ರಕ್ತನಾಳದ ಸಮಸ್ಯೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಡಲಾಗಿದೆ ಮತ್ತು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸುವ ಮೂಲಕ ವದಂತಿಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.

ಇದನ್ನೂ ಓದಿ: ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆ ಅಂಗೀಕಾರ

Leave a Reply

Your email address will not be published. Required fields are marked *