ಬೆಂಗಳೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು 13 ಸಚಿವರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ, ಸಚಿವರುಗಳ ಆಡಳಿತ ಕಚೇರಿಗಳಿಗೆ ಜಾಗ ನಿಗದಿಪಡಿಸಲಾಗಿದೆ. ಸಚಿವರು ತಮ್ಮ ಕಚೇರಿ ಕೆಲಸಗಳನ್ನು ಆರಂಭಿಸಲು ಅನುಕೂಲವಾಗುವಂತೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಅಧಿಕೃತ ಆದೇಶ ಹೊರಡಿಸಿದೆ. ಈ ಪ್ರಕ್ರಿಯೆಯಲ್ಲಿ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ದೊಡ್ಡ ಕೊಡುಗೆಯೇ ಸಿಕ್ಕಿದೆ.
ರೆಡ್ಡಿ ಮುನಿಸು ಶಮನ: ವಿಧಾನಸೌಧದ ರಾಜ ಗದ್ದುಗೆಯಂತಹ ಆಫೀಸ್ ಹಸ್ತಾಂತರ
ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ರಾಮಲಿಂಗಾರೆಡ್ಡಿ ಅವರ ಅಸಮಾಧಾನವನ್ನು ತಣಿಸಲು ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ಯಶಸ್ವಿಯಾಗಿದೆ. ಇದರ ಮುಂದುವರಿದ ಭಾಗವಾಗಿ, ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಬರೋಬ್ಬರಿ ನಾಲ್ಕು ಪ್ರಮುಖ ಕೊಠಡಿಗಳನ್ನು (335, 336, 337 ಮತ್ತು 337A) ರಾಮಲಿಂಗಾರೆಡ್ಡಿ ಅವರ ಕಚೇರಿಗೆ ಮೀಸಲಿಡಲಾಗಿದೆ. ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿಎಂ ಕಚೇರಿ ಮಾದರಿಯಲ್ಲೇ ಕೋಟಿಗಟ್ಟಲೆ ವೆಚ್ಚದಲ್ಲಿ ಅತ್ಯಾಧುನಿಕವಾಗಿ ನವೀಕರಿಸಿದ್ದ ಸುಸಜ್ಜಿತ ಕಚೇರಿಯನ್ನೇ ಈಗ ರಾಮಲಿಂಗಾರೆಡ್ಡಿ ಅವರಿಗೆ ಬಿಟ್ಟುಕೊಟ್ಟಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಕುಮಾರಕೃಪಾ ಸಿಎಂ ಗೃಹ ಕಚೇರಿ ಫಿಕ್ಸ್; ವಾಸ್ತು ಬದಲಾವಣೆಗಾಗಿ ದ್ವಾರ ಬಂದ್?
ಮತ್ತೊಂದೆಡೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಗೃಹ ಕಚೇರಿ ಕಾರ್ಯಾಚರಣೆಯಲ್ಲೂ ಮಹತ್ವದ ಬದಲಾವಣೆಯಾಗಿದೆ. ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹವೇ ಇನ್ಮುಂದೆ ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿಯಾಗಿ ಕಾರ್ಯನಿರ್ವಹಿಸಲಿದೆ. ಈ ಮುಂಚೆ ಈ ಕಟ್ಟಡದ ಮುಖ್ಯ ಪ್ರವೇಶ ದ್ವಾರವು ಪೂರ್ವ ಭಾಗದಲ್ಲಿತ್ತು ಹಾಗೂ ಸಾರ್ವಜನಿಕರು ಅಲ್ಲಿಂದಲೇ ಓಡಾಡುತ್ತಿದ್ದರು. ಆದರೆ, ಈಗ ಸಿಎಂ ಸೂಚನೆ ಮೇರೆಗೆ ಪೂರ್ವದ ಮುಖ್ಯ ದ್ವಾರವನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಉತ್ತರ ದಿಕ್ಕಿನ ಬಾಗಿಲನ್ನು ನೂತನ ಪ್ರವೇಶ ದ್ವಾರವನ್ನಾಗಿ ಬದಲಾಯಿಸಲಾಗಿದೆ. ಇನ್ಮುಂದೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಆಗಮನ, ನಿರ್ಗಮನವೆಲ್ಲವೂ ಉತ್ತರ ದ್ವಾರದ ಮೂಲಕವೇ ನಡೆಯಲಿದೆ.
ಸದ್ಯ ಕುಮಾರಕೃಪಾ ಅತಿಥಿ ಗೃಹವನ್ನು ಪೂರ್ಣ ಪ್ರಮಾಣದ ಸಿಎಂ ಗೃಹ ಕಚೇರಿಯನ್ನಾಗಿ ಪರಿವರ್ತಿಸುವ ನವೀಕರಣ ಕಾಮಗಾರಿಗಳು ಕೊನೆಯ ಹಂತಕ್ಕೆ ತಲುಪಿವೆ. ಕಚೇರಿಗೆ ಸೆಂಟ್ರಲೈಸ್ಡ್ ಎಸಿ ವ್ಯವಸ್ಥೆ, ಅತ್ಯಾಧುನಿಕ ಎಲ್ಇಡಿ ಟಿವಿಗಳು ಹಾಗೂ ಹೊಸ ವಿನ್ಯಾಸದ ಪೀಠೋಪಕರಣಗಳನ್ನು ಅಳವಡಿಸಿ ಕಾರ್ಪೊರೇಟ್ ಲುಕ್ ನೀಡಲಾಗುತ್ತಿದೆ. ಕೊಠಡಿ ಹಂಚಿಕೆ ಪ್ರಕ್ರಿಯೆ ಮುಗಿದಿರುವುದರಿಂದ ನೂತನ ಸಚಿವರುಗಳು ಇಂದಿನಿಂದಲೇ ಕಚೇರಿ ಪೂಜೆ ನೆರವೇರಿಸಿ ಅಧಿಕೃತವಾಗಿ ಆಡಳಿತ ಚುರುಕುಗೊಳಿಸಲು ಸಜ್ಜಾಗಿದ್ದಾರೆ.
ಯಾರ್ಯಾರಿಗೆ ಯಾವ ಕೊಠಡಿ?
ಪರಮೇಶ್ವರ್, ಉಪ ಮುಖ್ಯಮಂತ್ರಿ (ಕಂದಾಯ ಮತ್ತು ಯುವಸಬಲೀಕರಣ) – ವಿಧಾನಸೌಧ 327/327a
ಕೆ.ಎಚ್ ಮುನಿಯಪ್ಪ, (ಆಹಾರ ಸಚಿವ)- ವಿಧಾನಸೌಧ – 340a/341/341a
ಕೆಜೆ ಜಾರ್ಜ್ (ಇಂಧನ ಮತ್ತು ಪ್ರವಾಸೋದ್ಯುಮ) – ವಿಧಾನಸೌಧ, 317/317a
ಎಂಬಿ ಪಾಟೀಲ್, (ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ) – ವಿಧಾನಸೌಧ – 344/344a
ರಾಮಲಿಂಗಾರೆಡ್ಡಿ, (ಜಲಸಂಪನ್ಮೂಲ ಸಚಿವ) – ವಿಧಾನಸೌಧ, 335/336/337/337a
ಸತೀಶ್ ಜಾರಕಿಹೊಳಿ, (ಲೋಕೋಪಯೋಗಿ ಸಚಿವ) – ವಿಕಾಸಸೌಧ, 444/445
ಕೃಷ್ಣ ಬೈರೇಗೌಡ, ಸಚಿವ -(ಬೆಂಗಳೂರು ನಗರಾಭಿವೃದ್ಧಿ ಸಚಿವ) ವಿಕಾಸಸೌಧ, 244/245
ಪ್ರಿಯಾಂಕ್ ಖರ್ಗೆ, (ಗೃಹ ಇಲಾಖೆ ಮತ್ತು ಐಟಿಬಿಟಿ) – ವಿಕಾಸ ಸೌಧ, 242, 243
ಯುಟಿ ಖಾದರ್, (ಆರೋಗ್ಯ ಸಚಿವ) – ವಿಧಾನಸೌಧ, 315/315a
ಈಶ್ವರ್ ಖಂಡ್ರೆ, (ಗ್ರಾಮೀಣಾಭಿವೃದ್ಧಿ ಸಚಿವ) – ವಿಕಾಸಸೌಧ, 36/37
ಯತೀಂದ್ರ ಸಿದ್ದರಾಮಯ್ಯ, (ನಗರಾಭಿವೃದ್ಧಿ ಸಚಿವ) – ವಿಧಾನಸೌಧ, 314/314a
ಶರಣಪ್ರಕಾಶ್ ಪಾಟೀಲ್, (ವೈದ್ಯಕೀಯ ಶಿಕ್ಷಣ ಸಚಿವ) – ವಿಕಾಸಸೌಧ. 344/345
ಬೈರತಿ ಸುರೇಶ್, (ಸಾರಿಗೆ ಸಚಿವ) – ವಿಧಾನಸೌಧ, 316/316a
