TOP NEWS

CM Siddaramaiah: ವಿಧಾನಸೌಧದಲ್ಲಿ ಅಧಿಕಾರಿಗಳ ಬೆವರಿಳಿಸಿದ ಸಿಎಂ ಸಿದ್ದರಾಮಯ್ಯ: ಬಜೆಟ್ ಘೋಷಣೆ ಜಾರಿಗೆ ಕಟ್ಟುನಿಟ್ಟಿನ ಗಡುವು

CM Siddaramaiah meetings with senior officers

ಬೆಂಗಳೂರು: ರಾಜ್ಯದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇಂದು ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಮಹತ್ವದ ಸಭೆ ನಡೆಸಿದರು. ಸರ್ಕಾರದ ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದ ಸಿಎಂ, ಬಜೆಟ್ ಘೋಷಣೆಗಳ ಅನುಷ್ಠಾನದಲ್ಲಿ ವಿಳಂಬ ಮಾಡುತ್ತಿರುವ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳು ಕೇವಲ ಕಾಗದದ ಮೇಲೆ ಉಳಿಯಬಾರದು, ಅವು ನಿಗದಿತ ಅವಧಿಯೊಳಗೆ ಜನರಿಗೆ ತಲುಪಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಸಿಎಂ ಕೊಟ್ಟ ಸೂಚನೆಗಳಿದು

ಸಭೆಯಲ್ಲಿ ಸಂವಿಧಾನದ ಆಶಯಗಳನ್ನು ನೆನಪಿಸಿದ ಮುಖ್ಯಮಂತ್ರಿಗಳು, ಅಧಿಕಾರಿಗಳು ಯಾವುದೇ ರಾಜಕಾರಣಿಗಳ ಓಲೈಕೆಗೆ ಮುಂದಾಗದೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಮಾತುಗಳನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ಮಂತ್ರಿಗಳಿಗೆ ಅಸಮಾಧಾನವಾಗುತ್ತದೆ ಎಂದು ಸತ್ಯ ಹೇಳುವುದರಿಂದ ಅಧಿಕಾರಿಗಳು ಹಿಂದೆ ಸರಿಯಬಾರದು. ನಿರ್ಭಯವಾಗಿ ಮತ್ತು ಸ್ವತಂತ್ರವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಬೇಕು ಎಂದು ಕಿವಿಮಾತು ಹೇಳಿದರು. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಹಾದಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದರು.

ಬಜೆಟ್ ಅನುಷ್ಠಾನದ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, 2026-27ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾದ 565 ಯೋಜನೆಗಳ ಪೈಕಿ ಈವರೆಗೆ ಕೇವಲ 5 ಯೋಜನೆಗಳಿಗೆ ಮಾತ್ರ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಇದು ಆಡಳಿತದ ವಿಳಂಬ ಧೋರಣೆಯನ್ನು ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಬರುವ ಮೇ ತಿಂಗಳ ಒಳಗಾಗಿ ಎಲ್ಲಾ ಘೋಷಣೆಗಳಿಗೂ ಸರ್ಕಾರಿ ಆದೇಶ ಹೊರಡಿಸಿ ಜಾರಿಗೆ ತರಬೇಕು, ಇಲ್ಲದಿದ್ದರೆ ಸಂಬಂಧಪಟ್ಟ ಕಾರ್ಯದರ್ಶಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಖಡಕ್ ಗಡುವು ನೀಡಿದರು. ಅಲ್ಲದೆ, ಕಳೆದ ವರ್ಷದ ಬಜೆಟ್‌ನ 15 ಘೋಷಣೆಗಳು ಇನ್ನೂ ಬಾಕಿ ಇರುವುದಕ್ಕೆ ಉತ್ತರದಾಯಿತ್ವ ನಿಗದಿಪಡಿಸುವಂತೆ ಸೂಚಿಸಿದರು.

ಇನ್ನು ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸಭೆಯಲ್ಲಿ ಸಿಹಿಸುದ್ದಿ ಸಿಕ್ಕಿದ್ದು, ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಿಎಂ ಚಾಲನೆ ನೀಡಿದ್ದಾರೆ. ಆರ್ಥಿಕ ಇಲಾಖೆಯಿಂದ ಮಂಜೂರಾತಿ ಸಿಕ್ಕಿರುವ 24,300 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಬೇಕು ಎಂದು ಆದೇಶಿಸಿದರು. ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಾಕಿ ಇರುವ ಸುಮಾರು 32,132 ಹುದ್ದೆಗಳ ನೇಮಕಾತಿಗೆ ಇರುವ ಅಡೆತಡೆಗಳನ್ನು ನಿವಾರಿಸಿ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ ನೆಪದಲ್ಲಿ ವಿಳಂಬ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಾಗುವ ಸಾಧ್ಯತೆ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಜವಾಬ್ದಾರಿ ನೀಡಲಾಯಿತು. ತಮ್ಮ ವ್ಯಾಪ್ತಿಯ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು. ಹಾಗೆಯೇ ಎಸ್‌ಸಿ-ಎಸ್‌ಟಿ ಗುತ್ತಿಗೆದಾರರಿಗೆ ನೀಡಲಾಗಿರುವ 2 ಕೋಟಿ ರೂ.ವರೆಗಿನ ಮೀಸಲಾತಿಯನ್ನು ಪ್ಯಾಕೇಜ್ ಮಾಡುವ ಮೂಲಕ ತಪ್ಪಿಸಲು ಪ್ರಯತ್ನಿಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದ ಸಿಎಂ, ಜನಸ್ಪಂದನ ಮತ್ತು ಸಕಾಲದ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಿ ಜನರ ವಿಶ್ವಾಸ ಗಳಿಸುವಂತೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು.

ಇದನ್ನೂ ಓದಿ: ಬಿಪಿಎಲ್ ಕಾರ್ಡ್‌ಗಾಗಿ 3 ವರ್ಷಗಳಿಂದ ಕಾಯುತ್ತಿರುವ ಬಡವರು: ಸರ್ಕಾರಿ ಸೌಲಭ್ಯಗಳಿಂದ ಲಕ್ಷಾಂತರ ಕುಟುಂಬಗಳು ವಂಚಿತ!

Leave a Reply

Your email address will not be published. Required fields are marked *