ಬೆಂಗಳೂರು: ರಾಜ್ಯದ ಪೆಟ್ರೋಲ್ ಬಂಕ್ಗಳಲ್ಲಿ (Petrol) ಇಂಧನ ವಿತರಣೆಗೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಬದಲಾವಣೆ ತಂದಿದೆ. ಇಂಧನ ದಾಸ್ತಾನು ನಿರ್ವಹಣೆ ಮತ್ತು ಸಾರ್ವಜನಿಕರ ರಕ್ಷಣೆಯ ಹಿತದೃಷ್ಟಿಯಿಂದ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು, ನಿಯಮ ಮೀರುವ ಮಾಲೀಕರಿಗೆ ಭಾರೀ ದಂಡ ಹಾಗೂ ಪರವಾನಗಿ ರದ್ದತಿಯ ಎಚ್ಚರಿಕೆ ನೀಡಲಾಗಿದೆ.
ವಾಹನಗಳ ಟ್ಯಾಂಕ್ಗಷ್ಟೇ ಇಂಧನ ಸೀಮಿತ
ಸಾಮಾನ್ಯವಾಗಿ ತುರ್ತು ಅಗತ್ಯಕ್ಕೆ ಅಥವಾ ಗಾಡಿ ರಿಪೇರಿ ಎಂಬ ಕಾರಣ ನೀಡಿ ಬಾಟಲಿ ಹಾಗೂ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಪೆಟ್ರೋಲ್ ಪಡೆಯುವ ಪದ್ಧತಿಗೆ ಈಗ ಸರ್ಕಾರ ಕಡಿವಾಣ ಹಾಕಿದೆ. 2002ರ ಪೆಟ್ರೋಲಿಯಂ ನಿಯಮಾವಳಿಗಳ ಪ್ರಕಾರ, ಇಂಧನವನ್ನು ಕೇವಲ ವಾಹನಗಳ ಇಂಧನ ಟ್ಯಾಂಕ್ ಅಥವಾ ಮಾನ್ಯತೆ ಪಡೆದ ಕಂಟೇನರ್ಗಳಿಗೆ ಮಾತ್ರ ತುಂಬಿಸಬೇಕು. ಅನಧಿಕೃತ ಬಾಟಲಿ ಅಥವಾ ಕ್ಯಾನ್ಗಳಲ್ಲಿ ಇಂಧನ ಸಂಗ್ರಹಿಸುವುದು ಮತ್ತು ಸಾಗಿಸುವುದು ಇನ್ನುಮುಂದೆ ಶಿಕ್ಷಾರ್ಹ ಅಪರಾಧವಾಗಲಿದೆ.
ಸಗಟು (Bulk) ಮಾರಾಟಕ್ಕೆ ಕಡಿವಾಣ
ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುವುದಕ್ಕೂ ಮಿತಿ ಹೇರಲಾಗಿದೆ. ಯಾವುದೇ ವಾಹನ ಅಥವಾ ಅಧಿಕೃತ ಕಂಟೇನರ್ಗಳಿಗೆ ಗರಿಷ್ಠ 200 ಲೀಟರ್ಗಳವರೆಗೆ ಮಾತ್ರ ಇಂಧನ ಪೂರೈಸಲು ಅವಕಾಶ ನೀಡಲಾಗಿದೆ. ಒಂದು ವೇಳೆ ಭಾರೀ ಪ್ರಮಾಣದ ಇಂಧನದ ಅಗತ್ಯವಿದ್ದರೆ, ಅಂತಹ ವಹಿವಾಟುಗಳನ್ನು ಕೇವಲ ‘ನೇರ ಮಾರಾಟ ವ್ಯವಸ್ಥೆ’ಯ ಮೂಲಕವೇ ನಡೆಸಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ಕೃಷಿ ಚಟುವಟಿಕೆಗಳಿಗೆ ರಿಯಾಯಿತಿ
ಇಂಧನ ಪೂರೈಕೆಯಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದ್ದರೂ, ರೈತರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಗಮನಹರಿಸಿದೆ. ಕೃಷಿ ಯಂತ್ರೋಪಕರಣಗಳು ಹಾಗೂ ಮೀನುಗಾರಿಕೆ ಅಥವಾ ಜಲಚರ ಸಾಕಣೆಯ ಉದ್ದೇಶಕ್ಕೆ ಅಗತ್ಯವಿರುವ ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರ ಬೇಡಿಕೆಯನ್ನು ಪರಿಶೀಲಿಸಿ ನಿರಂತರ ಇಂಧನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಆದೇಶಿಸಲಾಗಿದೆ.
ಕಠಿಣ ನಿಗಾ ಮತ್ತು ತಪಾಸಣೆ
ಬಲ್ಕ್ ಕಾರ್ಯಾಚರಣೆಗಳಲ್ಲಿ ಅಥವಾ ವಿತರಣೆಯಲ್ಲಿ ಯಾವುದೇ ಲೋಪದೋಷಗಳು ಕಂಡುಬಂದರೆ ಅದನ್ನು ಲೈಸೆನ್ಸ್ ನಿಯಮಗಳ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಈ ಮಾರ್ಗಸೂಚಿಯನ್ನು ಜಾರಿಗೊಳಿಸಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಇಂಧನ ದುರುಪಯೋಗ ಮತ್ತು ಅನಾಹುತಗಳನ್ನು ತಪ್ಪಿಸಲು ಈ ನಿರ್ಧಾರ ಪೂರಕವಾಗಲಿದೆ. ಬಂಕ್ ಮಾಲೀಕರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಾಕೀತು ಮಾಡಲಾಗಿದೆ.
ಇದನ್ನೂ ಓದಿ: ಅಂಜನಾದ್ರಿಯಲ್ಲಿ ‘ಬಂಗಾರ’ದ ಗದ್ದಲ: ಕೋಟಿ ಮೌಲ್ಯದ ದೇಣಿಗೆ ಅಸಲಿಗೆ ‘ಗೋಲ್ಡ್ ಪ್ಲೇಟೆಡ್’!?
