TOP NEWS

Iran: ಹಿಜಾಬ್ ಧರಿಸದೆ ಹಾಡಿದ್ದಕ್ಕೆ ಇರಾನ್ ಗಾಯಕಿ ಪರಸ್ತೂ ಅಹ್ಮದಿಗೆ 74 ಚಾಟಿ ಏಟಿನ ಶಿಕ್ಷೆ ಜಾರಿ!

Iran Singer Parastoo Ahmadi and Band Members Flogged 74 Times for Performing Without Hijab on YouTube

ಟೆಹ್ರಾನ್: ಕಡ್ಡಾಯ ಹಿಜಾಬ್ ನಿಯಮವನ್ನು ಉಲ್ಲಂಘಿಸಿ ಸಾರ್ವಜನಿಕವಾಗಿ ಸಂಗೀತ ಕಾರ್ಯಕ್ರಮ ನೀಡಿದ ಆರೋಪದ ಮೇಲೆ ಇರಾನ್‌ನ (Iran) ಖ್ಯಾತ ಗಾಯಕಿ ಪರಸ್ತೂ ಅಹ್ಮದಿ ಅವರಿಗೆ 74 ಚಾಟಿ ಏಟಿನ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. 2024ರಲ್ಲಿ ಯೂಟ್ಯೂಬ್‌ನಲ್ಲಿ ನೇರಪ್ರಸಾರವಾಗಿದ್ದ ಸಂಗೀತ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಕಠಿಣ ಶಿಕ್ಷೆ ವಿಧಿಸಿದ್ದು, ನವೆಂಬರ್ 23ರಂದು ಶಿಕ್ಷೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದು ವರದಿಯಾಗಿದೆ. ಗಾಯಕಿಯೊಂದಿಗೆ ಸಂಗೀತ ತಂಡದಲ್ಲಿದ್ದ ನಾಲ್ವರು ಸದಸ್ಯರಿಗೂ ತಲಾ 74 ಚಾಟಿ ಏಟು ನೀಡಲಾಗಿದೆ. ಈ ಬೆಳವಣಿಗೆಯು ಇರಾನ್‌ನಲ್ಲಿ ಮಹಿಳೆಯರ ಹಕ್ಕುಗಳು, ಕಲಾತ್ಮಕ ಸ್ವಾತಂತ್ರ್ಯ ಮತ್ತು ಕಟ್ಟುನಿಟ್ಟಿನ ಹಿಜಾಬ್ ಕಾನೂನುಗಳ ಕುರಿತು ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವೈರಲ್ ಯೂಟ್ಯೂಬ್ ಸಂಗೀತ ಕಾರ್ಯಕ್ರಮವೇ ಮುಳುವಾಯಿತು 2024ರ ಡಿಸೆಂಬರ್ ತಿಂಗಳಿನಲ್ಲಿ 29 ವರ್ಷದ ಪರಸ್ತೂ ಅಹ್ಮದಿ ಅವರು ಇರಾನ್‌ನ ಖೋಮ್ ಪ್ರಾಂತ್ಯದ ಐತಿಹಾಸಿಕ ‘ದೇಯರ್ ಗಚಿನ್ ಕಾರವಾನ್‌ಸರಾಯ್’ ತಾಣದಲ್ಲಿ ವಿಶೇಷ ಸಂಗೀತ ಕಛೇರಿ ನಡೆಸಿಕೊಟ್ಟಿದ್ದರು. ಹಿಜಾಬ್ ಧರಿಸದೆ ಪುರುಷ ವಾದ್ಯಗಾರರೊಂದಿಗೆ ಹಾಡಿದ್ದ ಈ ಕಾರ್ಯಕ್ರಮವನ್ನು ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಲಾಗಿತ್ತು. ‘ಇಮ್ಯಾಜಿನರಿ ಕನ್ಸರ್ಟ್’ ಹೆಸರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೇರ ಪ್ರೇಕ್ಷಕರು ಇರದಿದ್ದರೂ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿತ್ತು. ಇದರಲ್ಲಿ ಅವರು ‘ತಾಯ್ನಾಡಿನ ಯುವಕರ ರಕ್ತದಿಂದ’ ಎಂಬ ಅರ್ಥ ನೀಡುವ ‘Az Khoone Javanane Vatan’ ದೇಶಭಕ್ತಿಗೀತೆಯನ್ನು ಹಾಡಿದ್ದರು.

ನ್ಯಾಯಾಲಯದ ಕಠಿಣ ತೀರ್ಪು ಮತ್ತು ಶಿಕ್ಷೆ ಜಾರಿ ಈ ವಿಡಿಯೋ ಪ್ರಸಾರವಾದ ಬೆನ್ನಲ್ಲೇ ಇರಾನ್ ಅಧಿಕಾರಿಗಳು ಗಾಯಕಿ ಮತ್ತು ಅವರ ತಂಡದ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಅಂತರ್ಜಾಲದಲ್ಲಿ ಅಸಭ್ಯ ಹಾಗೂ ಅನೈತಿಕ ವಿಚಾರಗಳನ್ನು ಪ್ರಕಟಿಸುವ ಮೂಲಕ ಸಾರ್ವಜನಿಕ ಸಭ್ಯತೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪವನ್ನು ಹೊರಿಸಲಾಗಿತ್ತು. ವಿಚಾರಣೆ ನಡೆಸಿದ ಖೋಮ್ ಪ್ರಾಂತ್ಯದ ಕ್ರಿಮಿನಲ್ ನ್ಯಾಯಾಲಯವು, ಪರಸ್ತೂ ಅಹ್ಮದಿ ಸೇರಿದಂತೆ ತಂಡದ ಒಂಬತ್ತು ಸದಸ್ಯರಿಗೆ ತಲಾ 74 ಚಾಟಿ ಏಟು, ಎರಡು ವರ್ಷಗಳ ಕಾಲ ವಿದೇಶ ಪ್ರಯಾಣಕ್ಕೆ ನಿರ್ಬಂಧ ಹಾಗೂ ಎರಡು ವರ್ಷಗಳ ಕಾಲ ಯಾವುದೇ ಕಲಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿ ತೀರ್ಪು ನೀಡಿತ್ತು. ನವೆಂಬರ್ 23ರಂದು ಪರಸ್ತೂ ಅಹ್ಮದಿ ಮತ್ತು ನಾಲ್ವರು ಸದಸ್ಯರಿಗೆ ಚಾಟಿ ಏಟಿನ ಶಿಕ್ಷೆ ಜಾರಿಯಾಗಿರುವುದನ್ನು ಅವರ ವಕೀಲ ಮೊಸ್ತಫಾ ನಿಲಿ ದೃಢಪಡಿಸಿದ್ದು, ಉಳಿದ ನಾಲ್ವರ ಶಿಕ್ಷೆಯ ಕುರಿತು ಸ್ಪಷ್ಟತೆ ಸಿಕ್ಕಿಲ್ಲ.

ಮಹಿಳಾ ಸ್ವಾತಂತ್ರ್ಯದ ಚರ್ಚೆ ಮತ್ತು ಮಾನವ ಹಕ್ಕುಗಳ ಸಂಘಟನೆಗಳ ಆಕ್ರೋಶ ಇರಾನ್‌ನಲ್ಲಿ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸುವುದು ಕಡ್ಡಾಯವಾಗಿದ್ದು, 2022ರಲ್ಲಿ ಇದೇ ನಿಯಮದಡಿ ಬಂಧನಕ್ಕೊಳಗಾಗಿದ್ದ ಯುವತಿ ಮಹ್ಸಾ ಅಮಿನಿ ಪೊಲೀಸ್ ವಶದಲ್ಲಿ ಮೃತಪಟ್ಟ ಬಳಿಕ ದೇಶಾದ್ಯಂತ ‘ವುಮನ್, ಲೈಫ್, ಫ್ರೀಡಂ’ ಹೆಸರಿನಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಇದೀಗ ಪರಸ್ತೂ ಅಹ್ಮದಿ ಅವರಿಗೆ ನೀಡಿರುವ ಶಿಕ್ಷೆಯನ್ನು ಮಾನವ ಹಕ್ಕುಗಳ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು, ಚಾಟಿ ಏಟಿನ ಶಿಕ್ಷೆಯು ಅಮಾನವೀಯ ಮತ್ತು ಮಾನವ ಘನತೆಗೆ ವಿರುದ್ಧವಾಗಿದೆ ಎಂದು ಕಿಡಿಕಾರಿವೆ. ಮಹಿಳೆಯರು ಹಾಡುವುದನ್ನು ಅಥವಾ ಸಂಗೀತ ರಚಿಸುವುದನ್ನು ಅಪರಾಧವೆಂದು ಪರಿಗಣಿಸುವ ಕಾನೂನಿನ ಆಧಾರವೇ ಪ್ರಶ್ನಾರ್ಹವಾಗಿದೆ ಎಂದು ಇರಾನ್‌ನ ಹಲವು ಕಾನೂನು ತಜ್ಞರು ಕೂಡ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನಾಲ್ಕು ವರ್ಷಗಳಲ್ಲಿ 1,389 ಭಾರತೀಯ ಅಪ್ರಾಪ್ತರು ಅಮೆರಿಕಾ ವಶಕ್ಕೆ; ‘ಗ್ರೀನ್ ಕಾರ್ಡ್’ ತಂತ್ರಕ್ಕೆ ಬ್ರೇಕ್

Leave a Reply

Your email address will not be published. Required fields are marked *