ಬೆಂಗಳೂರು: ರಾಜ್ಯದ ಪ್ರಮುಖ ಮತ್ತು ಪ್ರತಿಷ್ಠಿತ ಸರ್ಕಾರಿ ಹೆರಿಗೆ ಆಸ್ಪತ್ರೆಗಳಲ್ಲಿ ಒಂದಾದ ಬೆಂಗಳೂರಿನ (Bengaluru) ವಾಣಿವಿಲಾಸ ಆಸ್ಪತ್ರೆ (Vaani Vilas Hospital) ಈಗ ಮತ್ತೊಮ್ಮೆ ತೀವ್ರ ವಿವಾದಕ್ಕೆ ಸಿಲುಕಿದೆ. ಇತ್ತೀಚೆಗಷ್ಟೇ ವೈದ್ಯರ ನಿರ್ಲಕ್ಷ್ಯದಿಂದಾಗಿ ಎಂಟು ತಿಂಗಳ ಗರ್ಭಿಣಿಯ ಗರ್ಭದಲ್ಲಿದ್ದ ಮೂರು ಶಿಶುಗಳ ಪೈಕಿ ಎರಡು ಮಕ್ಕಳು ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ, ಆಸ್ಪತ್ರೆಯ ಒಳಗಿನ ಅವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ.
ಹೈ-ರಿಸ್ಕ್ ವಾರ್ಡ್‌ನಲ್ಲಿ ಗರ್ಭಿಣಿಯರ ನರಕಯಾತನೆ ವಾಣಿವಿಲಾಸ ಆಸ್ಪತ್ರೆಯ ‘ಹೈ-ರಿಸ್ಕ್ ಪ್ರೆಗ್ನೆನ್ಸಿ’ (HRP) ವಿಭಾಗದಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಗಂಭೀರ ಆರೋಗ್ಯ ಸ್ಥಿತಿಯಲ್ಲಿರುವ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಈ ವಿಭಾಗದಲ್ಲಿ ಹಾಸಿಗೆಗಳ ತೀವ್ರ ಕೊರತೆ ಎದುರಾಗಿದ್ದು, ಗರ್ಭಿಣಿಯರನ್ನು ಅನಿವಾರ್ಯವಾಗಿ ನೆಲದ ಮೇಲೆಯೇ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಒಂದೇ ಹಾಸಿಗೆಯಲ್ಲಿ ಇಬ್ಬಿಬ್ಬರು ಗರ್ಭಿಣಿಯರು ಮಲಗಿರುವ ದೃಶ್ಯಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನೈರ್ಮಲ್ಯದ ಕೊರತೆ ಮತ್ತು ಸೋಂಕಿನ ಭೀತಿ ವೈದ್ಯಕೀಯ ನಿಯಮಗಳ ಪ್ರಕಾರ, ಸೋಂಕು ತಗುಲುವ ಅಪಾಯ ಹೆಚ್ಚಿರುವುದರಿಂದ ಹೈ-ರಿಸ್ಕ್ ವಿಭಾಗದ ಗರ್ಭಿಣಿಯರನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಮಲಗಿಸುವಂತಿಲ್ಲ. ಆದರೂ, ವಾರ್ಡ್‌ನಲ್ಲಿ ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ವಾರ್ಡ್‌ನೊಳಗೆ ಕಸದ ಬುಟ್ಟಿಗಳ ವ್ಯವಸ್ಥೆಯೂ ಸಮರ್ಪಕವಾಗಿಲ್ಲದಿರುವುದು ಮತ್ತು ವಿಪರೀತ ಸೊಳ್ಳೆಗಳ ಕಾಟದಿಂದ ಬಾಣಂತಿಯರು ಹಾಗೂ ಗರ್ಭಿಣಿಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. “ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಭರಿಸಲಾಗದ ಬಡವರಿಗೆ ಸರ್ಕಾರ ನೀಡುವ ಗುಣಮಟ್ಟದ ಚಿಕಿತ್ಸೆ ಇದೇನಾ?” ಎಂದು ರೋಗಿಗಳ ಕುಟುಂಬಸ್ಥರು ಸರ್ಕಾರ ಮತ್ತು ಆಸ್ಪತ್ರೆ ಆಡಳಿತ ಮಂಡಳಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಶಿಶುಗಳ ಸಾವಿನ ಆರೋಪಕ್ಕೆ ವೈದ್ಯಕೀಯ ಅಧೀಕ್ಷಕಿ ಸ್ಪಷ್ಟನೆ ಮತ್ತೊಂದೆಡೆ, ಮೂರು ಶಿಶುಗಳ ಪೈಕಿ ಎರಡು ಮಕ್ಕಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಅವರು ಸ್ಪಷ್ಟನೆ ನೀಡಿದ್ದಾರೆ. ವೈದ್ಯರ ನಿರ್ಲಕ್ಷ್ಯದ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅವರು, “ಆ ಗರ್ಭಿಣಿ ನಮ್ಮಲ್ಲಿ ನಿಯಮಿತ ತಪಾಸಣೆಗೆ ಬರುತ್ತಿರಲಿಲ್ಲ. ತೀವ್ರ ರಕ್ತಸ್ರಾವದೊಂದಿಗೆ ಆಸ್ಪತ್ರೆಗೆ ದಾಖಲಾದಾಗ ಪರೀಕ್ಷೆ ನಡೆಸಿದಾಗಲೇ ಒಂದು ಮಗು ಗರ್ಭದಲ್ಲೇ ಮೃತಪಟ್ಟಿತ್ತು. ಅವರ ಲಿವರ್ ಕಾರ್ಯಕ್ಷಮತೆಯೂ ಏರುಪೇರಾಗಿತ್ತು,” ಎಂದು ತಿಳಿಸಿದ್ದಾರೆ.
ತಾಯಿಯ ಜೀವ ಉಳಿಸುವುದೇ ನಮ್ಮ ಮೊದಲ ಆದ್ಯತೆ ಘಟನೆಯ ಕುರಿತು ವಿವರಣೆ ಮುಂದುವರಿಸಿದ ಡಾ. ಸವಿತಾ, “ಗರ್ಭದಲ್ಲಿ ಮಕ್ಕಳು ಒಂದೇ ಪ್ಲಾಸೆಂಟಾ (ಜರಾಯು) ಹಂಚಿಕೊಂಡಿದ್ದರಿಂದ ಒಂದು ಮಗುವಿನ ಸಮಸ್ಯೆ ಮತ್ತೊಂದರ ಮೇಲೆ ಪರಿಣಾಮ ಬೀರಿತ್ತು. ಅಗತ್ಯ ಚುಚ್ಚುಮದ್ದು ಮತ್ತು ರಕ್ತದ ವ್ಯವಸ್ಥೆ ಮಾಡಿಕೊಂಡು ತುರ್ತು ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇಂತಹ ಕ್ಲಿಷ್ಟಕರ ಸಂದರ್ಭಗಳಲ್ಲಿ ತಾಯಿಯ ಜೀವ ಉಳಿಸುವುದು ನಮಗೆ ಮೊದಲ ಆದ್ಯತೆಯಾಗಿರುತ್ತದೆ. ಆಸ್ಪತ್ರೆಗೆ ಶೇ. 60ರಷ್ಟು ಹೈ-ರಿಸ್ಕ್ ಪ್ರಕರಣಗಳೇ ಬರುವುದರಿಂದ ಹಾಸಿಗೆಗಳ ಕೊರತೆ ಸಹಜವಾಗಿದೆ. ಮಗು ಕಳೆದುಕೊಂಡ ನೋವಿನಲ್ಲಿ ಕುಟುಂಬಸ್ಥರು ನಿರ್ಲಕ್ಷ್ಯದ ಆರೋಪ ಮಾಡಿರಬಹುದು, ಆದರೆ ಇಲ್ಲಿ ವೈದ್ಯರ ಯಾವುದೇ ತಪ್ಪಿಲ್ಲ,” ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಾಜಕೀಯ ಕಾರ್ಯದರ್ಶಿ ಹುದ್ದೆಗೆ ತನ್ವೀರ್ ಸೇಠ್ ಅಸಮ್ಮತಿ: ನಿರ್ಧಾರ ಕೈಗೊಳ್ಳುವ ಹುದ್ದೆಯಲ್ಲ ಎಂದು ಆಕ್ಷೇಪ
