ಬಳ್ಳಾರಿ: ರೈಲು ಮಾರ್ಗದ ಮೂಲಕ ನಡೆಯುವ ಮಾದಕ (Crime) ವಸ್ತುಗಳ ಅಕ್ರಮ ಸಾಗಾಟವನ್ನು ತಡೆಯಲು ಅಧಿಕಾರಿಗಳು ಚುರುಕಿನ ಕಾರ್ಯಾಚರಣೆ ನಡೆಸಿದ್ದು, ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಸುಮಾರು 8.25 ಲಕ್ಷ ರೂಪಾಯಿ ಮೌಲ್ಯದ 8 ಕೆಜಿ 500 ಗ್ರಾಂ ಒಣ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ವಿಜಯನಗರ ಜಿಲ್ಲೆಯ ಅಬಕಾರಿ ಇಲಾಖೆ ಸಿಬ್ಬಂದಿ, ಸ್ಥಳೀಯ ಪೊಲೀಸರು ಹಾಗೂ ರೈಲ್ವೆ ರಕ್ಷಣಾ ದಳದ (RPF) ಅಧಿಕಾರಿಗಳು ಒಟ್ಟಾಗಿ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಪ್ಲಾಟ್ಫಾರಂ ನಂಬರ್ (Crime) 1ರಲ್ಲಿ ವಾರಸುದಾರರಿಲ್ಲದ ಬ್ಯಾಗ್ ಪತ್ತೆ
ರೈಲ್ವೆ ನಿಲ್ದಾಣಗಳ ಮೂಲಕ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಿಸುವ ಜಾಲದ ಮೇಲೆ ಕಣ್ಣಿಟ್ಟಿರುವ ಅಧಿಕಾರಿಗಳ ತಂಡ, ನಿಲ್ದಾಣದ ಆವರಣದಲ್ಲಿ ವಿಶೇಷ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ತಪಾಸಣೆಯ ವೇಳೆ ಹೊಸಪೇಟೆ ರೈಲ್ವೆ ನಿಲ್ದಾಣದ ಪ್ಲಾಟ್ಫಾರಂ ನಂಬರ್ 01ರಲ್ಲಿ ಕೆಂಪು ಬಣ್ಣದ ಬ್ಯಾಗ್ ಒಂದು ಯಾರೂ ಇಲ್ಲದೆ ಅನುಮಾನಾಸ್ಪದ ರೀತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಸುತ್ತಮುತ್ತ ವಿಚಾರಿಸಿದರೂ ಬ್ಯಾಗ್ಗೆ ಯಾರೂ ಹಕ್ಕು ಮುಂದಿಡದ ಕಾರಣ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ಶ್ವಾನದಳ ತಪಾಸಣೆಯಲ್ಲಿ ಗಾಂಜಾ ಪತ್ತೆ
ವಾರಸುದಾರರಿಲ್ಲದ ಕೆಂಪು ಬ್ಯಾಗ್ ಕಂಡು ಸಂಶಯಗೊಂಡ ಅಧಿಕಾರಿಗಳು, ತಕ್ಷಣವೇ ಪೊಲೀಸ್ ಶ್ವಾನದಳವನ್ನು (Dog Squad) ಕರೆಸಿ ಬ್ಯಾಗ್ ತಪಾಸಣೆ ಮಾಡಿಸಿದ್ದಾರೆ. ನಂತರ ಅಧಿಕಾರಿಗಳ ಸಮ್ಮುಖದಲ್ಲಿ ಬ್ಯಾಗ್ ಬಿಚ್ಚಿ ಪರಿಶೀಲಿಸಿದಾಗ, ಅದರೊಳಗೆ 5 ಬೇರೆಬೇರೆ ಪ್ಯಾಕೆಟ್ಗಳಲ್ಲಿ ಅಡಗಿಸಿಟ್ಟಿದ್ದ ಒಟ್ಟು 8 ಕೆಜಿ 500 ಗ್ರಾಂ ಒಣ ಗಾಂಜಾ ಪತ್ತೆಯಾಗಿದೆ. ವಶಪಡಿಸಿಕೊಂಡ ಗಾಂಜಾದ ಮೌಲ್ಯ ಸುಮಾರು 8.25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಸಿಸಿಟಿವಿ ಆಧರಿಸಿ ಆರೋಪಿಗಳ ಪತ್ತೆಗೆ ತನಿಖೆ
ಸದ್ಯ ಪತ್ತೆಯಾದ ಗಾಂಜಾ ತುಂಬಿದ ಬ್ಯಾಗ್ ಯಾರಿಗೆ ಸೇರಿದ್ದು, ಇದನ್ನು ಎಲ್ಲಿಂದ ತರಲಾಗಿತ್ತು ಮತ್ತು ಎಲ್ಲಿಗೆ ಸಾಗಾಟ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ಬಗ್ಗೆ ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ. ಈ ಸಂಬಂಧ ಅಬಕಾರಿ ಇಲಾಖೆಯ ಅಧಿಕಾರಿಗಳು ಎನ್ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೈಲ್ವೆ ನಿಲ್ದಾಣ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು, ಬ್ಯಾಗ್ ಬಿಟ್ಟು ಪರಾರಿಯಾದ ಕಿಡಿಗೇಡಿಗಳ ಪತ್ತೆಗಾಗಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ: ದಂಪತಿ ದುರಂತ ಅಂತ್ಯ: ಕೌಟುಂಬಿಕ ಜಗಳಕ್ಕೆ ಬೇಸತ್ತು ಪತಿ-ಪತ್ನಿ ಆತ್ಮ*ಹತ್ಯೆ
