TOP NEWS

Keerthy Suresh: ‘ಸತ್ಯವಾನ್ ಸಾವಿತ್ರಿ’ ಸುದ್ದಿಗೋಷ್ಠಿಯ ವಿಡಿಯೋ ವಿವಾದ: ಟ್ರೋಲಿಗರಿಗೆ ಖಡಕ್ ಪಾಠ ಕಲಿಸಿದ ನಟಿ ಕೀರ್ತಿ ಸುರೇಶ್

Sathyavan Savithiri Press Meet Video Row Keerthy Suresh Slams Trolls With Sharp Reply

ಚೆನ್ನೈ: ನವೆಂಬರ್ 20ರಂದು ತೆರೆಗೆ ಬರುತ್ತಿರುವ ಕೋರ್ಟ್‌ರೂಮ್ (Keerthy Suresh) ಡ್ರಾಮಾ ಸಿನಿಮಾ ‘ಸತ್ಯವಾನ್ ಸಾವಿತ್ರಿ’ಯ ಪ್ರಚಾರ ಸುದ್ದಿಗೋಷ್ಠಿಯಲ್ಲಿ ನಡೆದ ಘಟನೆಯೊಂದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಟೀಕೆಗಳಿಗೆ ನಟಿ ಕೀರ್ತಿ ಸುರೇಶ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಚೆನ್ನೈನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಹಾಗೂ ನಟ ಮಿಸ್ಕಿನ್ ಅವರು ಮಾತನಾಡುವ ಭರದಲ್ಲಿ ಕೀರ್ತಿ ಸುರೇಶ್ ಅವರ ಮೊಣಕಾಲನ್ನು ಮುಟ್ಟಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಕೆಲವು ನೆಟ್ಟಿಗರು ಕೀರ್ತಿ ಸುರೇಶ್ ಮುಜುಗರಕ್ಕೆ ಒಳಗಾದಂತೆ ಕಾಣುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದರು.

ಟ್ರೋಲ್ ಮಾಡಿದವರಿಗೆ ಖಡಕ್ ತಿರುಗೇಟು ನೀಡಿದ ಕೀರ್ತಿ ಸುರೇಶ್

ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ‘ಎಕ್ಸ್’ (ಹಿಂದಿನ ಟ್ವಿಟರ್) ಖಾತೆಯಲ್ಲಿ ಬಳಕೆದಾರರೊಬ್ಬರು, ಸಿನಿಮಾಗಳಲ್ಲಿ ಸಹನಟರು ಮುಟ್ಟುವುದಕ್ಕೆ ಅವಕಾಶ ನೀಡುವಾಗ ಸಾರ್ವಜನಿಕವಾಗಿ ಮುಟ್ಟಿದರೆ ಯಾಕೆ ಬೇಸರ ಮಾಡಿಕೊಳ್ಳಬೇಕು ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೀರ್ತಿ ಸುರೇಶ್, ಮೊದಲನೆಯದಾಗಿ ನನ್ನ ಮುಖದಲ್ಲಿ ಎಲ್ಲಿ ಅಸಹಜತೆ ಅಥವಾ ಮುಜುಗರ ಕಾಣುತ್ತಿದೆ ಎಂದು ಪ್ರಶ್ನಿಸಿದ್ದಾರೆ. ನಾವಿಬ್ಬರೂ ತಂದೆ ಮತ್ತು ಮಗಳಂತಹ ಬಾಂಧವ್ಯ ಹೊಂದಿದ್ದೇವೆ ಎಂದು ನಾನು ಮತ್ತು ಮಿಸ್ಕಿನ್ ಹೇಳಿದ್ದನ್ನು ನೀವು ಕೇಳಿಸಿಕೊಂಡಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಒಂದು ವೇಳೆ ನನಗೆ ಮುಜುಗರವಾಗಿದ್ದರೂ ಸಿನಿಮಾಗಳಲ್ಲಿ ಮುಟ್ಟುತ್ತಾರೆ ಎಂಬ ಕಾರಣಕ್ಕೆ ಸಾರ್ವಜನಿಕವಾಗಿಯೂ ಅದನ್ನು ಸಹಿಸಿಕೊಳ್ಳಬೇಕು ಎಂದು ಹೇಳುತ್ತಿದ್ದೀರಾ, ಮೊದಲು ನಿಮ್ಮ ಆಲೋಚನೆಯನ್ನು ಸರಿಪಡಿಸಿಕೊಳ್ಳಿ ಸಹೋದರ ಎಂದು ಖಡಕ್ ಉತ್ತರ ನೀಡಿದ್ದಾರೆ. ಕೀರ್ತಿ ಸುರೇಶ್ ಅವರ ಈ ಖಾರವಾದ ಪ್ರತಿಕ್ರಿಯೆಯ ಬೆನ್ನಲ್ಲೇ ಆ ಬಳಕೆದಾರ ಕಾಮೆಂಟ್ ಮೂಲಕ ಕ್ಷಮೆಯಾಚಿಸಿ ತಮ್ಮ ಪೋಸ್ಟ್ ಅಳಿಸಿಹಾಕಿದ್ದಾರೆ.

ತಂದೆ-ಮಗಳ ಬಾಂಧವ್ಯ ಹಾಗೂ ಚಿನ್ನದ ಉಂಗುರದ ಉಡುಗೊರೆ

‘ಸತ್ಯವಾನ್ ಸಾವಿತ್ರಿ’ ಚಿತ್ರದಲ್ಲಿ ಮಿಸ್ಕಿನ್ ಮತ್ತು ಕೀರ್ತಿ ಸುರೇಶ್ ಒಟ್ಟಿಗೆ ನಟಿಸಿದ್ದು, ಸುದ್ದಿಗೋಷ್ಠಿಯಲ್ಲಿ ಇಬ್ಬರೂ ತಮ್ಮ ನಡುವಿನ ಆತ್ಮೀಯ ಬಾಂಧವ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಚಿತ್ರೀಕರಣದ ಎರಡನೇ ದಿನದಂದೇ ಮಿಸ್ಕಿನ್ ಅವರು ತಮ್ಮ ಮಗಳ ಫೋಟೋ ತೋರಿಸಿ, ನನ್ನ ಮಗಳು ಅಚ್ಚು ನಿಮ್ಮಂತೆಯೇ ಕಾಣುತ್ತಾಳೆ ಎಂದು ಹೇಳಿದ್ದಾಗಿ ಕೀರ್ತಿ ಸ್ಮರಿಸಿಕೊಂಡಿದ್ದರು. ಇತ್ತ ಕೀರ್ತಿ ಸುರೇಶ್ ಪಕ್ಕದಲ್ಲೇ ಕುಳಿತಿದ್ದ ಮಿಸ್ಕಿನ್, ಅವರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿ, ಕೀರ್ತಿ ಅವರಿಗೆ ‘ನಡಿಗೈಯರ್ ತಿಲಗಂ’ (ನಟಿಯರ ಕಿರೀಟ) ಎಂಬ ಬಿರುದು ನೀಡುತ್ತಿರುವುದಾಗಿ ಹೆಮ್ಮೆಯಿಂದ ಘೋಷಿಸಿದ್ದರು. ಮುಂದಿನ ಎಲ್ಲಾ ಸಿನಿಮಾಗಳಲ್ಲೂ ಅವರ ಹೆಸರಿನ ಮುಂದೆ ಈ ಬಿರುದು ಬಳಸುವಂತೆ ಚಿತ್ರತಂಡಗಳಿಗೆ ಮನವಿ ಮಾಡಿದ್ದರು.

ಇದೇ ವೇಳೆ ಕಾರ್ತಿಕ್ ಸುಬ್ಬರಾಜ್ ಅವರ ‘ಡೊರೊಥಿ’ ಚಿತ್ರದಲ್ಲಿನ ಕೀರ್ತಿ ಸುರೇಶ್ ಅವರ ಅದ್ಭುತ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಿಸ್ಕಿನ್, ಅವರಿಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದರು. ಈ ಹಿಂದೆ ‘ಡೊರೊಥಿ’ ಚಿತ್ರದಲ್ಲಿ ನಟಿಸಿದ್ದ ಸನತ್ ಮತ್ತು ರಿಷಿಕಾಂತ್ ಅವರಿಗೆ ಚಿನ್ನದ ಉಂಗುರ ನೀಡಿದ್ದೆ, ಆದರೆ ಕೀರ್ತಿಗೆ ನೀಡಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ ಮಿಸ್ಕಿನ್, ಇನ್ನೂ ಇಪ್ಪತ್ತು ವರ್ಷಗಳ ಕಾಲ ಹೀಗೆಯೇ ನಟಿಸುತ್ತಿರಿ ಎಂದು ಶುಭ ಹಾರೈಸಿದರು.

ಇದನ್ನೂ ಓದಿ:  ಗೌರಿಪುತ್ರ’ ಕಥೆಯಲ್ಲಿ ಮೂಡಿದ ರೋಚಕ ತಿರುವು: ಪುನೀತ್ ರಾಜ್‌ಕುಮಾರ್ ಚಿತ್ರದ ದೃಶ್ಯ ನೆನಪಿಸಿದ ಧಾರಾವಾಹಿ

Leave a Reply

Your email address will not be published. Required fields are marked *