ಶಿವಮೊಗ್ಗ: ನಾನು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರ ಮನೆಯ ಕೆಲಸದಾಳುವಾಗಿರಲಿಲ್ಲ, ಬದಲಾಗಿ ಅವರ ಅಪ್ಪಟ ಅಭಿಮಾನಿಯಾಗಿ ಅವರೊಂದಿಗೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಹೆಗಲು ಕೊಟ್ಟು ಕೆಲಸ ಮಾಡಿದವನು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ (Haratalu Halappa) ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಶಿವಮೊಗ್ಗದ ಪ್ರೆಸ್ ಟ್ರಸ್ಟ್ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧು ಬಂಗಾರಪ್ಪ ಅವರ ಇತ್ತೀಚಿನ ಹೇಳಿಕೆಗಳಿಗೆ ಕಟುವಾಗಿ ಪ್ರತಿಕ್ರಿಯಿಸಿದರು.
ತಂದೆಯೊಂದಿಗೇ ಇರದ ಮಧು ಅವರಿಗೆ ಹಳೆಯ ವಿಚಾರಗಳ ಅರಿವಿಲ್ಲ
ಬಂಗಾರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕಾಲಘಟ್ಟದಲ್ಲಿ ಮಧು ಬಂಗಾರಪ್ಪ ಮನೆಯಲ್ಲಿ ಇರುತ್ತಿರಲಿಲ್ಲ. ಹೀಗಾಗಿ ಅವರಿಗೆ ನಮ್ಮ ಹಾಗೂ ಬಂಗಾರಪ್ಪನವರ ನಡುವಿನ ಒಡನಾಟದ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ ಎಂದು ಹಾಲಪ್ಪ ವಾಗ್ದಾಳಿ ನಡೆಸಿದರು. ಮನೆಗೆ ಯಾವಾಗಲೋ ಬಂದು ಹೋಗುತ್ತಿದ್ದ ಮಧು, ಯಾರನ್ನೂ ಮಾತನಾಡಿಸುತ್ತಿರಲಿಲ್ಲ. ತಂದೆಯ ಕಷ್ಟದ ದಿನಗಳಲ್ಲಿ ಜೊತೆಗಿರದ ಕಾರಣ ಅವರಿಗೆ ಬಂಗಾರಪ್ಪನವರ ಜೀವನದ ಬಗ್ಗೆಯೇ ತಿಳಿದಿಲ್ಲ. ಪುಣ್ಯಾತ್ಮ ತಂದೆಯ ಬಳಿ ಬೆಳೆಯದ ಕಾರಣಕ್ಕೆ ಅವರಿಗೆ ಸಂಸ್ಕಾರವೂ ಬಂದಿಲ್ಲ; ಆದರೆ ಬಿ.ಎಸ್. ಯಡಿಯೂರಪ್ಪನವರ ಮಕ್ಕಳಿಗೆ ಕುಟುಂಬದಿಂದ ಉತ್ತಮ ಸಂಸ್ಕಾರ ಲಭಿಸಿದೆ ಎಂದು ಹಾಲಪ್ಪ ಹೋಲಿಕೆ ಮಾಡಿ ಟೀಕಿಸಿದರು. ಬಂಗಾರಪ್ಪನವರಿಗೆ ಅತಿ ಹೆಚ್ಚು ನೋವು ಕೊಟ್ಟವರೇ ಮಧು ಬಂಗಾರಪ್ಪ ಎಂಬುದನ್ನು ಸ್ವತಃ ಬಂಗಾರಪ್ಪನವರೇ ನನ್ನ ಬಳಿ ಹಾಗೂ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು ಎಂದು ಹಾಲಪ್ಪ ಹೊಸ ಬಾಂಬ್ ಸಿಡಿಸಿದರು.
ನನಗೇ ಮಧು ಬಂಗಾರಪ್ಪ ಹಣ ನೀಡಬೇಕಿದೆ
ನಾನು ಎಂದಿಗೂ ಹಣಕ್ಕಾಗಿ ಬಂಗಾರಪ್ಪನವರ ಬಳಿ ದುಡಿದವನಲ್ಲ. ಬಂಗಾರಪ್ಪನವರಿಂದಾಗಲಿ ಅಥವಾ ಮಧು ಬಂಗಾರಪ್ಪನವರಿಂದಾಗಲಿ ನಾನು ಹಣ ಪಡೆದಿಲ್ಲ, ಬದಲಾಗಿ ಮಧು ಬಂಗಾರಪ್ಪನವರೇ ನನಗೆ ಹಣ ನೀಡಬೇಕಿದೆ. ಸಮಾಜವಾದಿ ಪಕ್ಷಕ್ಕೆ ಬಂದ ಮೇಲೆ ಅವರು ನಮ್ಮ ಸಾಲವನ್ನು ತೀರಿಸಿದ್ದರು. ಈ ವಿಚಾರಗಳೆಲ್ಲಾ ಅವರಿಗೆ ಮರೆತುಹೋಗಿರಬಹುದು ಎಂದು ಹರತಾಳು ತಿರುಗೇಟು ನೀಡಿದರು. ನಾನು ಮುಳುಗಡೆ ಪ್ರದೇಶದಿಂದ ಬಂದವನಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿ ಕಾಲೇಜು ದಿನಗಳಲ್ಲೇ ವಿದ್ಯಾರ್ಥಿ ನಾಯಕನಾಗಿ ಬೆಳೆದವನು. ಬಂಗಾರಪ್ಪನವರ ಒಡನಾಡಿಗಳನ್ನು ಕೇಳಿದರೆ ನನ್ನ ನಿಷ್ಠೆ ಏನೆಂಬುದು ತಿಳಿಯುತ್ತದೆ ಎಂದರು.
ಹೋರಾಟ, ಅಭಿವೃದ್ಧಿ ಮತ್ತು ‘ಟೂರಿಂಗ್ ಟಾಕೀಸ್’ ಟೀಕೆಗೆ ಉತ್ತರ
ಮಧು ಬಂಗಾರಪ್ಪ ಅವರು ಯಾವ ಕಾಲೇಜಿನಲ್ಲಿ ಓದಿದ್ದಾರೆ ಮತ್ತು ಎಲ್ಲಿ ಹೋರಾಟ ಮಾಡಿದ್ದಾರೆ ಎಂದು ಪ್ರಶ್ನಿಸಿದ ಹಾಲಪ್ಪ, ನೀವು ಕೇವಲ ಬಂಗಾರಪ್ಪನವರ ಹೆಸರಿನ ಬಲದಿಂದ ಮಂತ್ರಿಯಾಗಿದ್ದೀರಿ ಎಂದು ವ್ಯಂಗ್ಯವಾಡಿದರು. ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪನವರ ಕಾಲಘಟ್ಟ ಹೋರಾಟದ ಯುಗವಾಗಿತ್ತು. ಯಡಿಯೂರಪ್ಪನವರು ಸಹ ಹೋರಾಟದ ಜೊತೆಗೆ ಅಭಿವೃದ್ಧಿಯನ್ನೂ ಮಾಡಿದರು. ನಾವು ಅಧಿಕಾರಕ್ಕೆ ಬಂದಾಗ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದ್ದೇವೆ, ಈಗ ಮಧು ಬಂಗಾರಪ್ಪನವರು ಅಭಿವೃದ್ಧಿ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.
ಇನ್ನು ತಮ್ಮನ್ನು ‘ಟೂರಿಂಗ್ ಟಾಕೀಸ್’ ಎಂದು ಕರೆದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಹಾಗಾದರೆ ಸೋನಿಯಾ ಗಾಂಧಿ ಬಳ್ಳಾರಿಗೆ ಏಕೆ ಬಂದರು? ಸಿದ್ದರಾಮಯ್ಯ ಬಾದಾಮಿಗೆ ಏಕೆ ಹೋದರು? ಎಸ್.ಎಂ. ಕೃಷ್ಣ ಬೇರೆ ಕ್ಷೇತ್ರದಲ್ಲಿ ಏಕೆ ಸ್ಪರ್ಧಿಸಿದರು? ಪಕ್ಷದ ನಿರ್ಧಾರಕ್ಕೆ ಬದ್ಧರಾಗಿ ನಾವು ಕೆಲಸ ಮಾಡಬೇಕಾಗುತ್ತದೆ ಎಂದರು. ಅಲ್ಲದೆ, ತಾವು ಬೇರೆ ಪಕ್ಷದಲ್ಲಿದ್ದರೂ ಪ್ರತಿ ವರ್ಷ ಹರತಾಳು ಗ್ರಾಮದಲ್ಲಿ ಬಂಗಾರಪ್ಪನವರ ಹುಟ್ಟುಹಬ್ಬವನ್ನು ಅಭಿಮಾನದಿಂದ ಆಚರಿಸುತ್ತಿರುವುದಾಗಿ ತಿಳಿಸಿದರು.
ಕೋರ್ಟ್ ಅಲೆದಾಟ ಮತ್ತು ಫೋನ್ ಕರೆಗಳ ರಹಸ್ಯ ಪ್ರಶ್ನಿಸಿದ ಹಾಲಪ್ಪ
ಇದೇ ಕಾಂಗ್ರೆಸ್ ಪಕ್ಷದವರು ಅಂದು ಬಂಗಾರಪ್ಪನವರ ಮೇಲೆ 20 ಲಕ್ಷ ರೂಪಾಯಿ ಪಡೆದಿದ್ದಾರೆಂಬ ಸುಳ್ಳು ಪ್ರಕರಣ ದಾಖಲಿಸಿದ್ದರು. ಆ ಕೇಸ್ಗಾಗಿ ಬಂಗಾರಪ್ಪನವರು 20 ವರ್ಷಗಳ ಕಾಲ 21 ಬಾರಿ ನ್ಯಾಯಾಲಯಕ್ಕೆ ಅಲೆದಾಡಿದರು. ಆದರೆ ಒಂದೇ ಒಂದು ದಿನವೂ ಮಧು ಬಂಗಾರಪ್ಪ ತಂದೆಯ ಜೊತೆ ಕೋರ್ಟ್ ಮೆಟ್ಟಿಲು ಹತ್ತಲಿಲ್ಲ ಎಂದು ಹಾಲಪ್ಪ ಕಿಡಿಕಾರಿದರು. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಪ್ರಸ್ತಾಪಿಸಿದ ಅವರು, ನನ್ನ ವಿರುದ್ಧ ದೂರು ನೀಡಿದ ವ್ಯಕ್ತಿಗೆ ಮಧು ಬಂಗಾರಪ್ಪ ಅವರ ಮನೆಯಿಂದ 192 ಬಾರಿ ಫೋನ್ ಕರೆಗಳು ಏಕೆ ಹೋಗಿದ್ದವು ಎಂಬುದಕ್ಕೆ ಉತ್ತರ ನೀಡಲಿ ಎಂದು ಆಗ್ರಹಿಸಿದರು. ನಾನು ಅನಕ್ಷರಸ್ಥ ತಂದೆ-ತಾಯಿಯ ಮಗನಾದರೂ ಗೌರವದಿಂದ ಮಾತನಾಡುತ್ತೇನೆ, ಆದರೆ ಕನ್ನಡವೂ ಸರಿಯಾಗಿ ಬಾರದ, ಕೇವಲ ‘ಟಸ್ ಪುಸ್’ ಇಂಗ್ಲಿಷ್ ಮಾತನಾಡುವ ಮಧು ಬಂಗಾರಪ್ಪ ಅವರು ಬಂಗಾರಪ್ಪನವರ ಮಗನಾಗಿ ಜವಾಬ್ದಾರಿಯಿಂದ ಮಾತನಾಡಬೇಕು. ನನ್ನ ವಿಷಯಕ್ಕೆ ಬಂದರೆ ನಾನೂ ಅವರ ವಿಚಾರಕ್ಕೆ ಹೋಗಬೇಕಾಗುತ್ತದೆ ಎಂದು ಹಾಲಪ್ಪ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: 32 ಹಿರಿಯ ಐಪಿಎಸ್ ಅಧಿಕಾರಿಗಳ ಎತ್ತಂಗಡಿ: ಬೆಂಗಳೂರಿಗೆ ಹೊಸ ವಲಯ ಆಯುಕ್ತರ ನೇಮಕ
