ಮನೆಯ ಅಡುಗೆಮನೆಯಲ್ಲಿ ಪ್ರತಿದಿನ ನೂರಾರು ರೀತಿಯ ತ್ಯಾಜ್ಯಗಳು ಉತ್ಪತ್ತಿಯಾಗುತ್ತವೆ. ತರಕಾರಿ ಸಿಪ್ಪೆಗಳು, ಹಣ್ಣಿನ ಉಳಿಕೆಗಳು ಮತ್ತು ಮೊಟ್ಟೆಯ (Plant Tips) ಸಿಪ್ಪೆಗಳನ್ನು ನಾವು ಸಾಮಾನ್ಯವಾಗಿ ಯಾವುದೇ ಯೋಚನೆಯಿಲ್ಲದೆ ಕಸದ ಬುಟ್ಟಿಗೆ ಎಸೆದುಬಿಡುತ್ತೇವೆ. ಆದರೆ ಸ್ವಲ್ಪ ಜಾಣ್ಮೆ ಬಳಸಿದರೆ, ಈ ಕಸವೆಂದು ಭಾವಿಸುವ ವಸ್ತುಗಳನ್ನೇ ನಮ್ಮ ಕೈತೋಟದ ಗಿಡಗಳಿಗೆ ವರದಾನವಾಗುವಂತೆ ಬದಲಾಯಿಸಿಕೊಳ್ಳಬಹುದು. ಅದರಲ್ಲೂ ವಿಶೇಷವಾಗಿ, ನಾವು ಬೆಳಗ್ಗೆ ಉಪಾಹಾರಕ್ಕೋ ಅಥವಾ ಅಡುಗೆಗಾಗಿಯೋ ಬಳಸುವ ಮೊಟ್ಟೆಯ ಸಿಪ್ಪೆಗಳು ಸಸ್ಯಗಳ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಇನ್ನು ಮುಂದೆ ಮೊಟ್ಟೆಯ ಸಿಪ್ಪೆಯನ್ನು ಕಸದ ಜೊತೆ ಸೇರಿಸುವ ಮುನ್ನ, ಗಿಡಗಳಿಗೆ ಅದನ್ನು ಹೇಗೆಲ್ಲಾ ಬಳಸಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ.
ಮೊಟ್ಟೆಯ ಸಿಪ್ಪೆಯಲ್ಲಿ ಏನೆಲ್ಲಾ ಪೋಷಕಾಂಶಗಳಿವೆ?
ಸಾಮಾನ್ಯವಾಗಿ ನಾವು “ದಿನಕ್ಕೊಂದು ಮೊಟ್ಟೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು” ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಮೊಟ್ಟೆಯಲ್ಲಿ ಪ್ರೊಟೀನ್ ಹಾಗೂ ಇ A, B ಸೇರಿದಂತೆ ಹಲವು ಉತ್ತಮ ಪೋಷಕಾಂಶಗಳಿರುವುದರಿಂದ ಹೆಚ್ಚಿನವರು ಇದನ್ನು ಪ್ರತಿದಿನದ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಆದರೆ ಮೊಟ್ಟೆಯ ಒಳಭಾಗವನ್ನು ತಿಂದು, ಅದರ ಮೇಲಿರುವ ಗಟ್ಟಿಯಾದ ಬಿಳಿ ಬಣ್ಣದ ಸಿಪ್ಪೆಯನ್ನು ಕಸಕ್ಕೆ ಎಸೆಯುತ್ತೇವೆ.
ವಾಸ್ತವವಾಗಿ, ಮೊಟ್ಟೆಯ ಸಿಪ್ಪೆಯಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್ ಅಂಶ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಇದು ಸಸ್ಯಗಳ ದೃಢವಾದ ಬೆಳವಣಿಗೆಗೆ ಅತ್ಯಾವಶ್ಯಕವಾದ ಕ್ಯಾಲ್ಸಿಯಂ ಒದಗಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಗಿಡಗಳ ಕಾಂಡಗಳು ಗಟ್ಟಿಯಾಗಿರಲು, ಎಲೆಗಳು ಮತ್ತು ಹಣ್ಣುಗಳು ಆರೋಗ್ಯಕರವಾಗಿ ಬೆಳೆಯಲು ಕ್ಯಾಲ್ಸಿಯಂ ಬಹಳ ಮುಖ್ಯ. ಇದರೊಂದಿಗೆ ಮೆಗ್ನೀಸಿಯಂ, ರಂಜಕ (ಫಾಸ್ಫರಸ್) ಮತ್ತು ಪೊಟ್ಯಾಸಿಯಂನಂತಹ ಇ A, B ಸೇರಿದಂತೆ ಹಲವು ಅಗತ್ಯ ಪೋಷಕಾಂಶಗಳು ಕೂಡ ಅಲ್ಪ ಪ್ರಮಾಣದಲ್ಲಿ ಲಭ್ಯವಿರುತ್ತವೆ. ಇಂತಹ ಸಮೃದ್ಧ ಪೋಷಕಾಂಶಯುಕ್ತ ಮೊಟ್ಟೆಯ ಸಿಪ್ಪೆಯನ್ನು ಸರಿಯಾದ ಪದ್ಧತಿಯಲ್ಲಿ ಮಣ್ಣಿಗೆ ಸೇರಿಸುವುದರಿಂದ ತೋಟದ ಮಣ್ಣಿನ ಫಲವತ್ತತೆಯನ್ನು ನೈಸರ್ಗಿಕವಾಗಿ ಹೆಚ್ಚಿಸಬಹುದು ಎಂದು ವಿಜ್ಞಾನ ಹಾಗೂ ತೋಟಗಾರಿಕಾ ವರದಿಗಳೂ ಕೂಡ ತಿಳಿಸುತ್ತವೆ.
ಗಿಡಗಳಿಗೆ ಮೊಟ್ಟೆಯ ಸಿಪ್ಪೆಯನ್ನು ಬಳಸುವ ಸರಿಯಾದ ವಿಧಾನ
ಮೊಟ್ಟೆಯ ಸಿಪ್ಪೆಯನ್ನು ಹಾಗೇ ನೇರವಾಗಿ ಗಿಡಗಳ ಬುಡಕ್ಕೆ ಹಾಕಬಾರದು. ಬದಲಿಗೆ ಕೆಲವೊಂದು ಸರಳ ಕ್ರಮಗಳನ್ನು ಅನುಸರಿಸಿ ಇದನ್ನು ಸಿದ್ಧಪಡಿಸಿಕೊಳ್ಳಬೇಕು:
- ಸ್ವಚ್ಛಗೊಳಿಸುವುದು: ಮೊದಲು ಬಳಸಿದ ಮೊಟ್ಟೆಯ ಸಿಪ್ಪೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಅದರಲ್ಲಿರುವ ಜಿಡ್ಡಿನಾಂಶ ಅಥವಾ ಬಿಳಿ ಅಂಶ ಸಂಪೂರ್ಣವಾಗಿ ಹೋಗುವಂತೆ ನೋಡಿಕೊಳ್ಳಬೇಕು.
- ಒಣಗಿಸುವುದು: ತೊಳೆದ ಸಿಪ್ಪೆಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಇದರಿಂದ ಅದರಲ್ಲಿರುವ ತೇವಾಂಶ ಹೋಗಿ, ಸಿಪ್ಪೆಗಳು ಗರಿಗರಿಯಾಗುತ್ತವೆ.
- ಪುಡಿ ಮಾಡುವುದು: ಒಣಗಿದ ಸಿಪ್ಪೆಗಳನ್ನು ಮಿಕ್ಸಿ ಜಾರ್ ಅಥವಾ ಕೈಯಿಂದಲೇ ಸಣ್ಣ ತುಂಡುಗಳಾಗಿ ಅಥವಾ ನುಣ್ಣಗೆ ಪುಡಿ ಮಾಡಿಕೊಳ್ಳಿ.
- ಮಣ್ಣಿನೊಂದಿಗೆ ಬೆರೆಸುವುದು: ಈ ಸಿಪ್ಪೆಯ ಪುಡಿಯನ್ನು ನೇರವಾಗಿ ಗಿಡಗಳ ಮಣ್ಣಿನಲ್ಲಿ ಅಥವಾ ನೀವು ಮನೆಯಲ್ಲಿ ತಯಾರು ಮಾಡುವ ಕಾಂಪೋಸ್ಟ್ ಗೊಬ್ಬರದೊಂದಿಗೆ ಮಿಶ್ರಣ ಮಾಡಬಹುದು. ಸಿಪ್ಪೆಯನ್ನು ನುಣ್ಣಗೆ ಪುಡಿ ಮಾಡುವುದರಿಂದ ಮಣ್ಣಿನಲ್ಲಿ ಅದು ಬೇಗನೆ ಕರಗಲು ಮತ್ತು ಗಿಡಗಳ ಬೇರುಗಳಿಗೆ ಪೋಷಕಾಂಶಗಳು ಸುಲಭವಾಗಿ ಸಿಗಲು ಸಹಾಯವಾಗುತ್ತದೆ. ಆದರೆ ನೆನಪಿಡಿ, ಮೊಟ್ಟೆಯ ಸಿಪ್ಪೆಯಲ್ಲಿರುವ ಕ್ಯಾಲ್ಸಿಯಂ ಮಣ್ಣಿಗೆ ಸ್ವಲ್ಪ ನಿಧಾನವಾಗಿ ಬಿಡುಗಡೆಯಾಗುತ್ತದೆ.
ಯಾವ ಗಿಡಗಳಿಗೆ ಇದು ಹೆಚ್ಚು ಉಪಯುಕ್ತ?
ಮನೆಯ ತೋಟದಲ್ಲಿ ಅಥವಾ ಬಾಲ್ಕನಿಯಲ್ಲಿ ಟೊಮೆಟೊ, ಮೆಣಸಿನಕಾಯಿ ಮತ್ತು ಬದನೆಕಾಯಿ ಗಿಡಗಳನ್ನು ಬೆಳೆಸುವವರಿಗೆ ಮೊಟ್ಟೆಯ ಸಿಪ್ಪೆಯ ಗೊಬ್ಬರ ರಾಮಬಾಣವಿದ್ದಂತೆ. ಈ ತರಕಾರಿ ಗಿಡಗಳಲ್ಲಿ ಕೆಲವೊಮ್ಮೆ ಕಾಯಿಗಳು ಬೆಳೆಯುವಾಗ ಅದರ ಕೆಳಭಾಗವು ಕಪ್ಪಾಗಿ ಕೊಳೆಯುವ ಸಮಸ್ಯೆ (Blossom End Rot) ಕಾಣಿಸಿಕೊಳ್ಳುತ್ತದೆ. ಇದು ಹೆಚ್ಚಾಗಿ ಮಣ್ಣಿನಲ್ಲಿ ಕ್ಯಾಲ್ಸಿಯಂ ಕೊರತೆಯಿಂದ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಮೊಟ್ಟೆಯ ಸಿಪ್ಪೆಯ ಪುಡಿಯನ್ನು ಮಣ್ಣಿಗೆ ಸೇರಿಸಿದರೆ ಗಿಡಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ದೊರೆತು ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ನಿವಾರಿಸಬಹುದು.
ಹಾಗಂದ ಮಾತ್ರಕ್ಕೆ ಸಮಸ್ಯೆ ಬಂದ ತಕ್ಷಣ ಪುಡಿ ಹಾಕಿದ ಕೂಡಲೇ ಪರಿಹಾರ ಸಿಗುತ್ತದೆ ಎಂದಲ್ಲ; ಗಿಡಗಳಿಗೆ ನಿಯಮಿತವಾಗಿ ನೀರುಣಿಸುವುದು ಮತ್ತು ಸಮತೋಲಿತ ಮಣ್ಣಿನ ನಿರ್ವಹಣೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಸಣ್ಣ ಸಸಿಗಳಿಗೆ ಮೊಟ್ಟೆಯ ಸಿಪ್ಪೆಯದ್ದೇ ಮಿನಿ ಪಾಟ್!
ಗಿಡಗಳಿಗೆ ಗೊಬ್ಬರ ನೀಡುವುದಲ್ಲದೆ, ಮೊಟ್ಟೆಯ ಸಿಪ್ಪೆಯನ್ನು ಬೀಜ ಮೊಳಕೆ ಒಡೆಯಲು ಸಣ್ಣ ಪಾಟ್ನಂತೆಯೂ (Seedling Pot) ಬಳಸಬಹುದು.
- ಮೊಟ್ಟೆಯ ಸಿಪ್ಪೆಯನ್ನು ಎಚ್ಚರಿಕೆಯಿಂದ ಅರ್ಧ ಭಾಗಕ್ಕೆ ಕತ್ತರಿಸಿ.
- ಅದರೊಳಗೆ ಸ್ವಲ್ಪ ಮಣ್ಣನ್ನು ತುಂಬಿ ನಿಮಗೆ ಬೇಕಾದ ತರಕಾರಿ ಅಥವಾ ಹೂವಿನ ಬೀಜಗಳನ್ನು ಹಾಕಿ.
- ಬೀಜ ಮೊಳಕೆಯೊಡೆದು ಸಣ್ಣ ಸಸಿಯಾಗಿ ಬೆಳೆದ ಬಳಿಕ, ಆ ಸಿಪ್ಪೆಯನ್ನು ಒಡೆಯದೆ ಹಾಗೇ ನೇರವಾಗಿ ಮಣ್ಣಿನಲ್ಲಿ ನೆಡಬಹುದು.
- ಕ್ರಮೇಣ ಸಿಪ್ಪೆಯು ಮಣ್ಣಿನಲ್ಲಿ ನೈಸರ್ಗಿಕವಾಗಿ ಕರಗಿಹೋಗುತ್ತದೆ ಮತ್ತು ಬೇರುಗಳಿಗೆ ಯಾವುದೇ ಹಾನಿಯಾಗುವುದಿಲ್ಲ.
ಮೊಟ್ಟೆಯ ಸಿಪ್ಪೆಯಲ್ಲಿ ಎಷ್ಟೇ ಪೋಷಕಾಂಶಗಳಿದ್ದರೂ ಅದನ್ನೇ ಸಂಪೂರ್ಣ ಗೊಬ್ಬರವೆಂದು ನಂಬಬಾರದು. ಗಿಡಗಳ ಅತ್ಯುತ್ತಮ ಬೆಳವಣಿಗೆಗೆ ಕಾಂಪೋಸ್ಟ್, ಸಮತೋಲಿತ ಪೋಷಕಾಂಶಗಳು, ಸರಿಯಾದ ಪ್ರಮಾಣದ ಸೂರ್ಯನ ಬೆಳಕು ಮತ್ತು ನೀರು ಅತ್ಯಗತ್ಯ. ಹೀಗಾಗಿ, ಇನ್ನು ಮುಂದೆ ಮೊಟ್ಟೆಯ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುವ ಬದಲು, ಅದನ್ನು ಸ್ವಚ್ಛಗೊಳಿಸಿ, ಒಣಗಿಸಿ, ನುಣ್ಣಗೆ ಪುಡಿ ಮಾಡಿ ನಿಮ್ಮ ಮನೆಯ ತೋಟದ ಗಿಡಗಳಿಗೆ ಅಥವಾ ಕಾಂಪೋಸ್ಟ್ಗೆ ಬಳಸಿ. ಈ ಪುಟ್ಟ ಅಭ್ಯಾಸದಿಂದ ಅಡುಗೆಮನೆಯ ತ್ಯಾಜ್ಯವನ್ನು ಕಡಿಮೆ ಮಾಡುವುದರ ಜೊತೆಗೆ ಹಸಿರು ತೋಟವನ್ನು ಸುಂದರವಾಗಿ ಕಾಪಾಡಿಕೊಳ್ಳಬಹುದು!
ಇದನ್ನೂ ಓದಿ: ಶಾಂಪೂ ಬದಲಾಯಿಸುವುದರಿಂದ ಕೂದಲು ಉದುರುವುದು ನಿಲ್ಲುತ್ತಾ? ಇಲ್ಲಿದೆ ವೈದ್ಯರು ಹೇಳುವ ಅಚ್ಚರಿಯ ಸತ್ಯ!
