TOP NEWS

Shashi Tharoor: ಗಡಿಯಲ್ಲಿ ಆಕ್ರಮಣ, ಪಾಕಿಸ್ತಾನಕ್ಕೆ ಸ್ಯಾಟಲೈಟ್ ಡೇಟಾ ಬೆಂಬಲ: ಚೀನಾದ ಕಪಟತನ ಬಿಚ್ಚಿಟ್ಟ ಶಶಿ ತರೂರ್!

Shashi Tharoor Slams China Border Aggression and Support to Pakistan During Op Sindoor Conflict

ನವದೆಹಲಿ: ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಚೀನಾದ ಜೊತೆಗಿನ ಸಂಘರ್ಷವನ್ನು ಭಾರತೀಯ ಸೇನೆಯು ಯಶಸ್ವಿಯಾಗಿ ಎದುರಿಸುತ್ತಿದೆ ಎಂದು ಐಟಿಬಿಪಿ ಮಹಾನಿರ್ದೇಶಕ ಶತ್ರುಜಿತ್ ಕಪೂರ್ ನೀಡಿರುವ ಹೇಳಿಕೆ ರಾಜಕೀಯ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಗಡಿ ಬಿಕ್ಕಟ್ಟು ಹಾಗೂ ವ್ಯಾಪಾರ ಸಂಬಂಧಗಳ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಚೀನಾ ವಿರುದ್ಧ ಭಾರತಕ್ಕೆ ಹಲವು ಬಲವಾದ ಕಾರಣಗಳಿಗಾಗಿ ಅಸಮಾಧಾನವಿದೆ ಎಂದು ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ಭಾರತದ ವಿರುದ್ಧದ ಶತ್ರುತ್ವದ ನಡವಳಿಕೆ

ಗಡಿಯಲ್ಲಿ ಚೀನಾ ನಡೆದುಕೊಳ್ಳುತ್ತಿರುವ ರೀತಿ, ಭಾರತದ ಭೂಪ್ರದೇಶವನ್ನು ಹಂತ ಹಂತವಾಗಿ ಆಕ್ರಮಿಸಿಕೊಳ್ಳುವ ಯತ್ನ ಹಾಗೂ ಕಳೆದ ವರ್ಷ ಭಾರತ-ಪಾಕಿಸ್ತಾನ ನಡುವಿನ ಸಂಘರ್ಷದ (‘ಆಪರೇಷನ್ ಸಿಂಧೂರ್’) ಸಮಯದಲ್ಲಿ ಪಾಕಿಸ್ತಾನಕ್ಕೆ ಚೀನಾ ನೀಡಿದ ಬಹಿರಂಗ ಬೆಂಬಲ ತೀವ್ರ ಆತಂಕಕಾರಿಯಾಗಿದೆ ಎಂದು ಶಶಿ ತರೂರ್ ಹೇಳಿದ್ದಾರೆ. ಯುದ್ಧದ ಸಮಯದಲ್ಲಿ ಚೀನಾ ಕೇವಲ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದು ಮಾತ್ರವಲ್ಲದೆ, ತಂಗ್ರಹಿಸಿದ ಸ್ಯಾಟಲೈಟ್ ಉಪಗ್ರಹಗಳ ಮೂಲಕ ನೇರ ಮಾಹಿತಿಯನ್ನು ಒದಗಿಸಿದೆ. ಇದು ಭಾರತದ ವಿರುದ್ಧದ ಶತ್ರುತ್ವದ ನಡವಳಿಕೆಯಾಗಿದೆ ಎಂದು ಅವರು ಖಂಡಿಸಿದ್ದಾರೆ.

ನಂಬಿಕೆಯಿಲ್ಲದ ವ್ಯಾಪಾರ ಅವಲಂಬನೆ ಭಾರತಕ್ಕೆ ಅಪಾಯಕಾರಿ!

ಭಾರತ ಮತ್ತು ಚೀನಾ ನಡುವಿನ ವ್ಯಾಪಾರ ಸಂಬಂಧವನ್ನು “ನಂಬಿಕೆಯಿಲ್ಲದ ಪರಸ್ಪರ ಅವಲಂಬನೆ” ಎಂದು ಬಣ್ಣಿಸಿರುವ ತರೂರ್, ಚೀನಾಗಿಂತ ಭಾರತವೇ ಅವರಿಗಿಂತ ಹೆಚ್ಚಾಗಿ ಆಮದುಗಳ ಮೇಲೆ ಅವಲಂಬಿತವಾಗಿದೆ ಎಂದು ಬೆರಳು ಮಾಡಿ ತೋರಿಸಿದ್ದಾರೆ. ಗಾಲ್ವಾನ್ ಸಂಘರ್ಷದ ಬಳಿಕ ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳುವ ದ್ವಿಪಕ್ಷೀಯ ಒಪ್ಪಂದಗಳನ್ನು ಚೀನಾ ಏಕಪಕ್ಷೀಯವಾಗಿ ಮುರಿದಿದೆ. ಒಂದೆಡೆ ಭಾರತಕ್ಕೆ ಮಾಡುವ ರಫ್ತಿನ ಪ್ರಮಾಣವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಿರುವ ಚೀನಾ, ಇನ್ನೊಂದೆಡೆ ಗಡಿಯಲ್ಲಿ ಉಪಟಳ ನೀಡುತ್ತಿರುವುದು ವೈಪರೀತ್ಯವಾಗಿದೆ ಎಂದಿದ್ದಾರೆ.

ಭಾರತವು ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಚೀನಾ ತನಗೆ ಬೇಕೆಂದಾಗ ಆಯುಧವಾಗಿ ಬಳಸಿಕೊಳ್ಳುತ್ತಿದೆ ಎಂದು ತರೂರ್ ಎಚ್ಚರಿಸಿದ್ದಾರೆ. ಉದಾಹರಣೆಗೆ, ರೇರ್ ಅರ್ಥ್ ವಸ್ತುಗಳು ಹಾಗೂ ಸುರಂಗ ಕೊರೆಯುವ ಬೃಹತ್ ‘ಟನಲ್ ಬೋರಿಂಗ್ ಮಿಷನ್’ಗಳ ರಫ್ತನ್ನು ಚೀನಾ ದಿಢೀರನೆ ಸ್ಥಗಿತಗೊಳಿಸಿತ್ತು. ಇದರಿಂದಾಗಿ ಭಾರತದಲ್ಲಿ ಹೆದ್ದಾರಿಗಳು ಹಾಗೂ ಬೆಟ್ಟಗಳನ್ನು ಕೊರೆಯುವ ಕಾಮಗಾರಿಗಳು ಕೆಲವು ವರ್ಷಗಳ ಕಾಲ ಸ್ಥಗಿತಗೊಂಡಿದ್ದವು. ವ್ಯಾಪಾರವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳದ, ನಂಬಿಕಸ್ಥ ಹಾಗೂ ಊಹಿಸಬಹುದಾದ ದ್ವಿಪಕ್ಷೀಯ ಸಂಬಂಧ ಭಾರತಕ್ಕೆ ತೀರಾ ಅಗತ್ಯವಾಗಿದೆ ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಮೌನ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ‘ರಾಹುಲ್ vs ಪ್ರಿಯಾಂಕಾ’ ಸಮರ ಎಂದ ಬಿಜೆಪಿ

Leave a Reply

Your email address will not be published. Required fields are marked *