TOP NEWS

Big News: ಅನಿರುದ್ಧ್ – ಕಾವ್ಯ ಮಾರನ್ ವಿವಾಹ ಸಂಭ್ರಮ: ಪ್ರಧಾನಿ ಮೋದಿ ಹಾಗೂ ಸಿಎಂಗಳಿಗೆ ಆಹ್ವಾನ!

Big news Kavya Anirudh Wedding Buzz Confirmed Invitations Sent to Dignitaries for November 21 Reception

ಚೆನ್ನೈ: ದಕ್ಷಿಣ ಭಾರತೀಯ ಚಿತ್ರರಂಗ ಹಾಗೂ ಉದ್ಯಮ ಕ್ಷೇತ್ರದಲ್ಲೀಗ ಕಾವ್ಯ ಮಾರನ್ ಮತ್ತು ಪ್ರಸಿದ್ಧ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ವಿವಾಹ ಮಹೋತ್ಸವದ ಸುದ್ದಿಯೇ ಹಲ್‌ಚಲ್ (Big News) ಎಬ್ಬಿಸಿದೆ. ಸನ್‌ ಟಿವಿ ನೆಟ್‌ವರ್ಕ್ ಕಾರ್ಯಾಧ್ಯಕ್ಷ ಕಲಾನಿಧಿ ಮಾರನ್ ಹಾಗೂ ಕಾವೇರಿ ಮಾರನ್ ದಂಪತಿಯ ಪುತ್ರಿ, ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದ ಕಾರ್ಯನಿರ್ವಾಹಕ ನಿರ್ದೇಶಕಿ ಕಾವಿಯಾ ಕಲಾನಿಧಿ ಮಾರನ್ ಮತ್ತು ಖ್ಯಾತ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರ ವಿವಾಹ ಆರತಕ್ಷತೆಯು ನವೆಂಬರ್ 21ರಂದು ಚೆನ್ನೈನಲ್ಲಿ ಅತ್ಯಂತ ವೈಭವೋಪೇತವಾಗಿ ನಡೆಯಲಿದೆ. ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕುಟುಂಬದ ಹಿರಿಯರಾಗಿ ಈ ಆರತಕ್ಷತೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಪ್ರಧಾನಿ ಮೋದಿ ಹಾಗೂ ಸಿಎಂ ವಿಜಯ್‌ಗೆ ಆಹ್ವಾನ

ಕಲಾನಿಧಿ ಮಾರನ್ ಹಾಗೂ ಅವರ ಕುಟುಂಬದವರು ದೇಶದ ಅಗ್ರಗಣ್ಯ ನಾಯಕರನ್ನು ಖುದ್ದಾಗಿ ಭೇಟಿಯಾಗಿ ಮದುವೆ ಆರತಕ್ಷತೆಗೆ ಆಹ್ವಾನ ನೀಡುತ್ತಿದ್ದಾರೆ. ಸನ್ ನ್ಯೂಸ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ, ಕಲಾನಿಧಿ ಮಾರನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ನವೆಂಬರ್ 21ರ ಆರತಕ್ಷತೆಗೆ ಗೌರವಪೂರ್ವಕ ಆಹ್ವಾನ ಪತ್ರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಾವಿಯಾ ಅವರ ತಾಯಿ ಕಾವೇರಿ ಮಾರನ್ ಹಾಗೂ ಅನಿರುದ್ಧ್ ಅವರ ಪೋಷಕರಾದ ರವಿಚಂದರ್ ಮತ್ತು ಲಕ್ಷ್ಮಿ ಅವರು ಉಪಸ್ಥಿತರಿದ್ದರು. ಮತ್ತೊಂದೆಡೆ, ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಹಾಗೂ ಅನಿರುದ್ಧ್ ರವಿಚಂದರ್ ಅವರು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ನೇರವಾಗಿ ಭೇಟಿಯಾಗಿ ಆರತಕ್ಷತೆಗೆ ಆತ್ಮೀಯ ಆಹ್ವಾನ ನೀಡಿದ್ದಾರೆ.

ತೆಲಂಗಾಣ ಸಿಎಂ ಕಚೇರಿಯಿಂದ ವಿವಾಹ ದಿನಾಂಕ ಅಧಿಕೃತ

ಇದಲ್ಲದೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರನ್ನು ಹೈದರಾಬಾದ್‌ನ ಜುಬ್ಲಿ ಹಿಲ್ಸ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದ ಕಲಾನಿಧಿ ಮಾರನ್ ದಂಪತಿ ವಿವಾಹ ಆರತಕ್ಷತೆಗೆ ಆಹ್ವಾನಿಸಿದ್ದಾರೆ. ಈ ಕುರಿತು ಸಿಎಂ ರೇವಂತ್ ರೆಡ್ಡಿ ಅವರ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ನವೆಂಬರ್ 21ರಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ ಎಂಬುದನ್ನು ಧೃಡಪಡಿಸಲಾಗಿದೆ. ಮಾಧ್ಯಮಗಳ ವರದಿಗಳ ಪ್ರಕಾರ, ಕಾವಿಯಾ ಹಾಗೂ ಅನಿರುದ್ಧ್ ಅವರ ವಿವಾಹ ಸಮಾರಂಭವು ನವೆಂಬರ್ 11ರಂದು ಗ್ರೀಸ್ ದೇಶದಲ್ಲಿ ಅತಿ ನಿಕಟ ಬಂಧುಗಳ ಸಮ್ಮುಖದಲ್ಲಿ ನಡೆಯಲಿದ್ದು, ಬಳಿಕ ಚೆನ್ನೈನಲ್ಲಿ ಬೃಹತ್ ಆರತಕ್ಷತೆ ಆಯೋಜಿಸಲಾಗಿದೆ.

ಸುದೀರ್ಘ ಹರಿದಾಡಿದ್ದ ವದಂತಿಗಳಿಗೆ ಪೂರ್ಣವಿರಾಮ

ಕಾವಿಯಾ ಮಾರನ್ ಮತ್ತು ಅನಿರುದ್ಧ್ ರವಿಚಂದರ್ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲವು ವರ್ಷಗಳಿಂದಲೇ ಭಾರಿ ಸುದ್ದಿಮಾಡುತ್ತಿದ್ದವು. 2025ರ ಜೂನ್‌ನಲ್ಲಿ ಈ ಸುದ್ದಿಯನ್ನು ನಿರಾಕರಿಸಿದ್ದ ಅನಿರುದ್ಧ್, “ಮದುವೆಯೇ? ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡುವುದನ್ನು ನಿಲ್ಲಿಸಿ” ಎಂದು ಟ್ವೀಟ್ ಮಾಡಿದ್ದರು. ಆದರೆ 2026ರ ಜೂನ್‌ನಲ್ಲಿ ಅನಿರುದ್ಧ್ ಅವರ ಚಿಕ್ಕಪ್ಪ ಹಾಗೂ ನಟ ವೈ.ಜಿ. ಮಹೇಂದ್ರನ್ ಅವರು ಮಾಧ್ಯಮವೊಂದರಲ್ಲಿ ಮಾತನಾಡುವಾಗ, ಮದುವೆಯಾಗುವುದು ಬಹುತೇಕ ಖಚಿತ ಎಂದು ಸುಳಿವು ನೀಡಿದ್ದರು. ಇದೀಗ ಪ್ರಧಾನಿ ಸೇರಿದಂತೆ ವಿವಿಧ ನಾಯಕರಿಗೆ ನೀಡಲಾದ ಆಹ್ವಾನ ಪತ್ರಿಕೆಗಳ ಮೂಲಕ ಈ ಬಹುನಿರೀಕ್ಷಿತ ಕಲ್ಯಾಣ ಮಹೋತ್ಸವ ಅಧಿಕೃತಗೊಂಡಿದೆ.

ತಮಿಳು ಚಿತ್ರರಂಗದಲ್ಲಿ ‘ಲಿಯೋ’, ‘ಇಂಡಿಯನ್ ೨’, ‘ವೆಟ್ಟೈಯಾನ್’, ‘ಕೂಲಿ’, ‘ಜೈಲರ್ ೨’ ಮುಂತಾದ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿರುವ ಅನಿರುದ್ಧ್ ಹಾಗೂ ಐಪಿಎಲ್ ಅಖಾಡದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮೂಲಕ ಭಾರಿ ಜನಪ್ರಿಯತೆ ಗಳಿಸಿರುವ ಕಾವಿಯಾ ಮಾರನ್ ಅವರ ಈ ಶುಭ ಮಿಲನಕ್ಕೆ ಚಲನಚಿತ್ರ ರಂಗ, ಉದ್ಯಮ ಜಗತ್ತು ಹಾಗೂ ರಾಜಕೀಯ ವಲಯದ ಪ್ರಮುಖರು ಶುಭ ಹಾರೈಸುತ್ತಿದ್ದಾರೆ.

ಇದನ್ನೂ ಓದಿ: ರಿಲಯನ್ಸ್‌ಗೆ ಎಲಾನ್ ಮಸ್ಕ್ ಕಂಪನಿ ಕೌಂಟರ್: ‘ಭಾರತೀಯ ನಿಯಮಗಳ ಪಾಲನೆಗೆ ಸ್ಟಾರ್‌ಲಿಂಕ್ ಸಜ್ಜು’!

Leave a Reply

Your email address will not be published. Required fields are marked *