TOP NEWS

HD Kumaraswamy: ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೂ ಸಿದ್ಧ ಎಂದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ!

HD Kumaraswamy Ready for Brain Mapping Test Demands Fair Probe in Sting Operation Case

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಈಗ ಮತ್ತಷ್ಟು ಕಾವು ಪಡೆದುಕೊಂಡಿದೆ. ಪ್ರಕರಣದ ಮುಖ್ಯ ಸೂತ್ರಧಾರಿಯನ್ನು ಮುಂದಿನ 48 ಗಂಟೆಗಳಲ್ಲಿ (2 ದಿನ) ಬಂಧಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜೆಡಿಎಸ್ ಕಾರ್ಯಕರ್ತರ ಬಂಧನಕ್ಕೆ ಆಕ್ರೋಶ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ದೂರಿನ ಆಧಾರದ ಮೇಲೆ ಸಕ್ರಿಯಗೊಂಡಿದ್ದ ಪೊಲೀಸರು, ಜೆಡಿಎಸ್ ಸೋಷಿಯಲ್ ಮೀಡಿಯಾ ವಿಭಾಗದ ಶಂಕರ್ ಹಾಗೂ ಮೋಹನ್ ಎಂಬ ಇಬ್ಬರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರು. ಈ ಬೆಳವಣಿಗೆಯಿಂದ ತೀವ್ರ ಆಕ್ರೋಶಗೊಂಡ ಕುಮಾರಸ್ವಾಮಿ ಅವರು ನೇರವಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯಾವುದೇ ಮುಂಜಾಗ್ರತಾ ನೋಟಿಸ್ ನೀಡದೆ, ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಸಿ, ಕುಟುಂಬದವರಿಗೂ ಮಾಹಿತಿ ನೀಡದೆ ರಾತ್ರೋರಾತ್ರಿ ಶೆಡ್‌ನಲ್ಲಿ ಕಾರ್ಯಕರ್ತರನ್ನು ಬಂಧನದಲ್ಲಿಟ್ಟಿರುವ ಕ್ರಮ ಕಾನೂನುಬಾಹಿರ ಎಂದು ಅವರು ಗರಂ ಆದರು. “ನನ್ನನ್ನೂ ಬಂಧಿಸುವುದಾಗಿ ಗೃಹ ಸಚಿವರು ಹೇಳಿಕೆ ನೀಡಿದ್ದರು, ನಾನೇ ಸ್ವತಃ ಕಚೇರಿಗೆ ಬಂದಿದ್ದೇನೆ, ಧೈರ್ಯವಿದ್ದರೆ ನನ್ನನ್ನು ಬಂಧಿಸಿ” ಎಂದು ಪೊಲೀಸರಿಗೆ ಬಹಿರಂಗ ಸವಾಲು ಹಾಕಿದರು.

ಕಮಿಷನರ್ ಮೆಟ್ಟಿಲ ಮೇಲೆಯೇ ಕುಳಿತು ಪಟ್ಟು: ಅಧಿಕಾರಿಗಳ ನಡವಳಿಕೆಯಿಂದ ತೀವ್ರ ಅಸಮಾಧಾನಗೊಂಡ ಕುಮಾರಸ್ವಾಮಿ ಅವರು ಕಮಿಷನರ್ ಕಚೇರಿಯ ಮೆಟ್ಟಿಲುಗಳ ಮೇಲೆಯೇ ಕುಳಿತು ಧರಣಿ ಆರಂಭಿಸಿದರು. ನಗರ ಪೊಲೀಸ್ ಆಯುಕ್ತರು ಅವರ ಮನವೊಲಿಸಲು ಪ್ರಯತ್ನಿಸಿದಾಗ, “ವಿರೋಧ ಪಕ್ಷಗಳನ್ನು ಹತೋಟಿ ತಪ್ಪಿಸಿ ಹತಗೊಳಿಸುವುದು ಈ ಸರ್ಕಾರದ ಹುನ್ನಾರವಾಗಿದೆ. ನಮಗೆ ಬೆದರಿಕೆ ಹಾಕಿದರೆ ಹೆದರುವ ಪ್ರಶ್ನೆಯೇ ಇಲ್ಲ. ಸತ್ಯಾಸತ್ಯತೆ ಹೊರಬರಬೇಕಿದ್ದರೆ ಪ್ರಕರಣದ ಪೂರ್ಣ ಪ್ರಮಾಣದ ತನಿಖೆಯಾಗಲಿ, ನಾನು ಲೈ ಡಿಟೆಕ್ಟರ್ ಅಥವಾ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೂ ಸಿದ್ಧನಿದ್ದೇನೆ. ಗೃಹ ಸಚಿವರೇ ಇಲ್ಲಿಗೆ ಬಂದು ಸೂಕ್ತ ಸಮಜಾಯಿಷಿ ನೀಡಲಿ” ಎಂದು ಪಟ್ಟು ಹಿಡಿದರು.

ಪ್ರಾಮಾಣಿಕ ತನಿಖೆಯ ಭರವಸೆ ಹಾಗೂ ಧರಣಿ ಅಂತ್ಯ: ಸಚಿವರ ಪಟ್ಟಿಗೆ ಸ್ಪಂದಿಸಿದ ಪೊಲೀಸ್ ಆಯುಕ್ತರು, ಪೊಲೀಸ್ ಇಲಾಖೆಯು ನಿಷ್ಪಕ್ಷಪಾತವಾಗಿ ಹಾಗೂ ಪ್ರಾಮಾಣಿಕವಾಗಿ ತನಿಖೆ ನಡೆಸಲಿದೆ ಎಂದು ಭರವಸೆ ನೀಡಿದರು. ‘ನಿಮ್ಮ ಅಥವಾ ಇಲಾಖೆಯ ವಿರುದ್ಧ ನಮ್ಮ ಹೋರಾಟವಲ್ಲ, ವ್ಯವಸ್ಥೆಯ ದುರುಪಯೋಗದ ವಿರುದ್ಧ’ ಎಂದು ಸ್ಪಷ್ಟಪಡಿಸಿದ ಹೆಚ್.ಡಿ. ಕುಮಾರಸ್ವಾಮಿ ಅವರು, ಆಯುಕ್ತರ ವಿನಂತಿಯನ್ನು ಮನ್ನಿಸಿ ಕೊನೆಗೆ ಧರಣಿಯನ್ನು ಹಿಂಪಡೆದರು. ಆದರೆ, ಪ್ರಕರಣದ ಮೂಲ ರುವಾರಿಯನ್ನು ಎರಡು ದಿನಗಳಲ್ಲಿ ಬಂಧಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಗಡುವು ವಿಧಿಸಿದ್ದಾರೆ.

ಇದನ್ನೂ ಓದಿ: ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಅಂಜನಾದ್ರಿ ದೇವಸ್ಥಾನ ಕಬ್ಜಾ: ಎಲ್ಲಾ ಕೊಠಡಿಗಳಿಗೆ ಬೀಗ ಮುದ್ರೆ ಹಾಕಿದ ಬಾಬಾ

Leave a Reply

Your email address will not be published. Required fields are marked *