ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್ಆರ್ ನಗರ) ವಿಧಾನಸಭಾ ಕ್ಷೇತ್ರದ ಬಿಜೆಪಿ ರಾಜಕೀಯದಲ್ಲಿ ಮತ್ತೆ ಭಾರಿ ಬಿರುಗಾಳಿ ಎದ್ದಿದೆ. ಕ್ಷೇತ್ರದ ಶಾಸಕ ಮುನಿರತ್ನ ಅವರ ಏಕಪಕ್ಷೀಯ ನಡವಳಿಕೆ, ಸಾರ್ವಜನಿಕರ ಮೇಲಿನ ದೌರ್ಜನ್ಯ ಹಾಗೂ ಕಾರ್ಯಕರ್ತರ ಮೇಲಿನ ಕಿರುಕುಳದಿಂದ ಬೇಸತ್ತು ಮಾಜಿ ಬಿಬಿಎಂಪಿ ಕಾರ್ಪೋರೇಟರ್ ಹಾಗೂ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರಿಂದ ‘ಬೆಸ್ಟ್ ಕಾರ್ಪೋರೇಟರ್ ಆಫ್ ಬೆಂಗಳೂರು’ ಬಿರುದು ಪಡೆದಿದ್ದ ಜಿ.ಕೆ. ವೆಂಕಟೇಶ್ (ಎಸ್.ಟಿ.ಆರ್) ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ (Big News) ನೀಡಿದ್ದಾರೆ. ಈ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸುದೀರ್ಘ ಹಾಗೂ ಸ್ಫೋಟಕ ಸುದೀರ್ಘ ಪತ್ರ ಬರೆದಿರುವ ಅವರು, ಶಾಸಕರ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.
ವಿದ್ಯಾರ್ಥಿ ನಾಯಕನಿಂದ ಜನಪ್ರಿಯ ಕಾರ್ಪೋರೇಟರ್ವರೆಗೆ ಬೆಳೆದ ಯಾನ
ಜಿ.ಕೆ. ವೆಂಕಟೇಶ್ ಅವರು ಎಂ.ಕಾಂ. ಹಾಗೂ ಎಂ.ಎ. ಫಿಲಾಸಫಿ ಪದವೀಧರರಾಗಿದ್ದು, ಕಾಲೇಜು ದಿನಗಳಿಂದಲೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಕಳೆದ 2015-20ನೇ ಸಾಲಿನ ಬಿಬಿಎಂಪಿ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ಮತಗಳನ್ನು ಗಳಿಸಿ ಯಶವಂತಪುರ ವಾರ್ಡ್ ಸಂಖ್ಯೆ 37 ರಿಂದ ಆಯ್ಕೆಯಾಗಿದ್ದರು. ಅವರ ನಿರಂತರ ಸಾರ್ವಜನಿಕ ಸೇವೆಯನ್ನು ಗುರುತಿಸಿ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ಅವರನ್ನು ಅಭಿನಂದಿಸಿ ಗೌರವಿಸಿದ್ದರು. ಮುನಿರತ್ನ ಅವರು ಮೊದಲಿಗೆ ಕಾರ್ಪೋರೇಟರ್ ಆಗಿ, ತದನಂತರ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಗೆಲ್ಲುವಲ್ಲಿ ವೆಂಕಟೇಶ್ ಹಾಗೂ ಅವರ ವಾರ್ಡಿನ ಜನಪ್ರಿಯತೆ ಪ್ರಮುಖ ಕಾರಣವಾಗಿತ್ತು. ಆದರೆ ನಂತರದ ದಿನಗಳಲ್ಲಿ ಮುನಿರತ್ನ ಅವರ ವೈಖರಿ ಸಂಪೂರ್ಣ ಬದಲಾಯಿತು.
ಬಿಜೆಪಿ ಕಾರ್ಯಕರ್ತರ ಮೇಲೆಯೇ ದೌರ್ಜನ್ಯ ಮತ್ತು ರೌಡಿಸಂ ಆರೋಪ
ಮುನಿರತ್ನ ಅವರು ಕಾಂಗ್ರೆಸ್ನಿಂದ ಶಾಸಕರಾದ ನಂತರ ಆರ್ಆರ್ ನಗರ ವ್ಯಾಪ್ತಿಯಲ್ಲಿ ಬಿಜೆಪಿ ಶಕ್ತಿಯನ್ನು ಕುಗ್ಗಿಸಲು ಮೂಲ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪೊಲೀಸ್ ಕೇಸುಗಳನ್ನು ಹಾಕಿ, ರೌಡಿಗಳನ್ನು ಬಿಟ್ಟು ದಾಳಿ ಮಾಡಿಸಿ ಕಿರುಕುಳ ನೀಡುತ್ತಿದ್ದರು ಎಂದು ವೆಂಕಟೇಶ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 2018-19ರಲ್ಲಿ ಮಂತ್ರಿಯಾಗುವ ಆಸೆಯಿಂದ ಮುನಿರತ್ನ ಅವರು 17 ಶಾಸಕರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಅವರು ಬಿಜೆಪಿ ಸೇರ್ಪಡೆಯಾದ ಮೇಲೆಯೂ ಅವರ ಹಳೆಯ ಕೆಟ್ಟ ಪ್ರವೃತ್ತಿ ಬದಲಾಗಲಿಲ್ಲ. ಮೂಲ ಬಿಜೆಪಿಯವರಿಗೆ ಕಿರುಕುಳ ನೀಡುವುದು, ರೌಡಿಗಳನ್ನು ಬಿಟ್ಟು ಬೆದರಿಸುವುದು ನಿರಂತರವಾಗಿ ನಡೆಯುತ್ತಿತ್ತು.
ಶಾಸಕರ ಈ ಕೆಟ್ಟ ನಡವಳಿಕೆಯನ್ನು ತಿದ್ದುಕೊಳ್ಳುವಂತೆ ವೆಂಕಟೇಶ್ ಸೇರಿದಂತೆ ಹಲವು ಹಿರಿಯ ಕಾರ್ಪೋರೇಟರ್ಗಳು ಎಷ್ಟೇ ತಿಳುವಳಿಕೆ ಹೇಳಿದರೂ ಅವರು ಕಿವಿಗೊಡಲಿಲ್ಲ. ಪರಿಣಾಮವಾಗಿ, 2023ರ ವಿಧಾನಸಭಾ ಚುನಾವಣೆಯ ನಂತರ ಅವರ ನಡವಳಿಕೆಗೆ ಬೇಸತ್ತು ಪ್ರಮುಖ ಬಿಬಿಎಂಪಿ ಕಾರ್ಪೋರೇಟರ್ಗಳಾದ ಆಶಾ ಸುರೇಶ್, ವೇಲು ನಾಯ್ಕರ್, ಶ್ರೀನಿವಾಸಮೂರ್ತಿ (ಜಾನಿ), ಮೋಹನ್ ಕುಮಾರ್, ಸಿದ್ದೇಗೌಡ, ಮಂಜುಳಾ ನಾರಾಯಣಸ್ವಾಮಿ ಸೇರಿದಂತೆ ಹಲವರು ತಮ್ಮ ರಾಜಕೀಯ ಭವಿಷ್ಯ ಹಾಗೂ ವರ್ಚಸ್ಸನ್ನು ಉಳಿಸಿಕೊಳ್ಳಲು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು.
ಅಭಿವೃದ್ಧಿ ಹೆಸರಿನಲ್ಲಿ ಅನುದಾನ ದುರುಪಯೋಗ ಹಾಗೂ ಸಾರ್ವಜನಿಕ ಆಸ್ತಿ ನಾಶ
ಮುನಿರತ್ನ ಅವರ ತಪ್ಪುಗಳನ್ನು ತಿದ್ದುಕೊಂಡು ಅವರನ್ನು ಒಳ್ಳೆಯ ಮನುಷ್ಯನನ್ನಾಗಿ ಪರಿವರ್ತಿಸಲು ತಾವು ನಡೆಸಿದ ಪ್ರಯತ್ನ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವೆಂಕಟೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಶಾಸಕರು ಸಾರ್ವಜನಿಕರಿಗೆ ತೊಂದರೆ ನೀಡಿದ ಹಾಗೂ ಪಕ್ಷಕ್ಕೆ ಮುಜುಗರ ಉಂಟುಮಾಡಿದ ಹಲವು ಉದಾಹರಣೆಗಳನ್ನು ಅವರು ಪತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಸುಮಾರು 50 ರಿಂದ 60 ವರ್ಷಗಳಿಂದ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದ ಸುಸಜ್ಜಿತ ಹೆರಿಗೆ ಆಸ್ಪತ್ರೆಯನ್ನು ಕೆಡವಿ, ದೊಡ್ಡ ಮಟ್ಟದ ಜನರಲ್ ಆಸ್ಪತ್ರೆ ನಿರ್ಮಿಸುವುದಾಗಿ ಹೇಳಿ ಕೋಟ್ಯಾಂತರ ರೂಪಾಯಿ ಅನುದಾನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಇಂದಿಗೂ ಅಲ್ಲಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿಲ್ಲ. ಬಿ.ಕೆ. ನಗರದಲ್ಲಿದ್ದ ಬಡ ಜನರ ಕೊಳಚೆ ಪ್ರದೇಶದ ಮನೆಗಳನ್ನು ಕೆಡವಿ, ಬಹುಮಹಡಿ ಕಟ್ಟಡ ನಿರ್ಮಿಸಿಕೊಡುವುದಾಗಿ ನಂಬಿಸಿ ಬಡವರನ್ನು ಬೀದಿಗೆ ತಳ್ಳಲಾಗಿದೆ. ಬಿಬಿಎಂಪಿ ಅನುದಾನ ಪಡೆದಿದ್ದರೂ ಕಾಮಗಾರಿ ಅರ್ಧಕ್ಕೇ ನಿಂತಿದ್ದು, ಬಡವರ ಶಾಪಕ್ಕೆ ಕಾರಣವಾಗಿದೆ.
ಇಷ್ಟೇ ಅಲ್ಲದೆ, ಹಳೆಯ ಕನ್ನಡ ಸರ್ಕಾರಿ ಶಾಲೆಯನ್ನು ಕೆಡವಿ ಆಧುನಿಕ ಕಟ್ಟಡ ಕಟ್ಟುವುದಾಗಿ ಹೇಳಿ, ಯಾವುದೇ ಸರ್ಕಾರಿ ಆದೇಶವಿಲ್ಲದೆ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಕನ್ನಡ ಭಾಷೆ ಮತ್ತು ವಿದ್ಯಾರ್ಥಿಗಳಿಗೆ ದ್ರೋಹ ಎಸಗಲಾಗಿದೆ. ಜೆ.ಪಿ. ಪಾರ್ಕ್ನಲ್ಲಿದ್ದ ಅಂತರಾಷ್ಟ್ರೀಯ ಮಟ್ಟದ ಸುಸಜ್ಜಿತ ಈಜುಕೊಳವನ್ನು ನವೀಕರಣ ಹೆಸರಿನಲ್ಲಿ ಸಂಪೂರ್ಣವಾಗಿ ಹಾಳುಮಾಡಲಾಗಿದೆ. ಆರ್ಆರ್ ನಗರ ಕ್ಷೇತ್ರದಲ್ಲಿ ರಸ್ತೆ, ಒಳಚರಂಡಿ ಮತ್ತು ಬೀದಿ ದೀಪದ ಕಾಮಗಾರಿಗಳಿಗೆ ಸರ್ಕಾರ ನೀಡಿದ ಕೋಟ್ಯಾಂತರ ರೂಪಾಯಿ ಹಣದಲ್ಲಿ ಮುನಿರತ್ನ ಅವರೇ ಬೇನಾಮಿ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಲು ಬಂದ ಗುತ್ತಿಗೆದಾರರಿಗೆ ಬೆದರಿಕೆ ಹಾಕಿ ಓಡಿಸಲಾಗಿದೆ. ಈ ಕಳಪೆ ಕಾಮಗಾರಿಗಳ ಕುರಿತು ಲೋಕಾಯುಕ್ತದಲ್ಲೂ ಪ್ರಕರಣಗಳು ದಾಖಲಾಗಿವೆ.
ಜೈಲಿನಿಂದ ಬಂದ ಮೇಲೆಯೂ ಬದಲಾಗದ ನಡವಳಿಕೆ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ
ಗುತ್ತಿಗೆದಾರರ ಬಳಿ ಲಂಚಕ್ಕೆ ಬೇಡಿಕೆ, ಜಾತಿ ನಿಂದನೆ, ಅತ್ಯಾಚಾರದಂತಹ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಪಾಲಾಗಿ ಬಿಡುಗಡೆಯಾದ ಮೇಲೆಯೂ ಶಾಸಕರಲ್ಲಿ ಯಾವುದೇ ಪಶ್ಚಾತ್ತಾಪ ಮೂಡಿಲ್ಲ. ಜೈಲಿನಿಂದ ಬಂದ ನಂತರ ಅವರಿಗೆ ತಿಳುವಳಿಕೆ ನೀಡಲು ಹೋದಾಗ, “ಹುಟ್ಟು ಗುಣ ಸುಟ್ಟರೂ ಹೋಗಲ್ಲ, ನಾಯಿ ಬಾಲ ಎಂದಿಗೂ ಡೊಂಕು, ನನ್ನಲ್ಲಿ ಯಾವ ಬದಲಾವಣೆಯನ್ನೂ ನಿರೀಕ್ಷಿಸಬೇಡಿ” ಎಂದು ಹಾಸ್ಯದಾಟಿಯಲ್ಲಿ ಹಗುರವಾಗಿ ಉತ್ತರಿಸಿದ್ದಾರೆ ಎಂದು ವೆಂಕಟೇಶ್ ಬಹಿರಂಗಪಡಿಸಿದ್ದಾರೆ.
ಹಿಂದೂ ಧರ್ಮದ ರಕ್ಷಣೆಯನ್ನು ಆದ್ಯತೆಯಾಗಿಟ್ಟುಕೊಂಡಿರುವ ಬಿಜೆಪಿ ಪಕ್ಷದಲ್ಲಿದ್ದುಕೊಂಡೇ, ಯಶವಂತಪುರದಲ್ಲಿರುವ 200 ವರ್ಷಗಳ ಹಳೆಯ ಶಿವ ಹಾಗೂ ಶನಿದೇವಸ್ಥಾನಗಳನ್ನು ಕೆಡವಲು ಮುನಿರತ್ನ ಅವರು ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಆ ಸಮಯದಲ್ಲಿ ಸ್ಥಳೀಯ ಸಾರ್ವಜನಿಕರು ಬೃಹತ್ ಹೋರಾಟ ನಡೆಸಿ ದೇವಸ್ಥಾನಗಳನ್ನು ಉಳಿಸಿಕೊಂಡಿದ್ದರು. ಹಾಗೆಯೇ, ಮುನಿರತ್ನ ಅವರ ಮನೆಯ ಪಕ್ಕದಲ್ಲಿ ಸಾರ್ವಜನಿಕರು ಗಣೇಶ ಹಬ್ಬವನ್ನು ಆಚರಿಸುತ್ತಿದ್ದಾಗ, ಜನರನ್ನು ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮೂರ್ತಿಯನ್ನು ತೆರವುಗೊಳಿಸುವಂತೆ ಬೆದರಿಕೆ ಹಾಕಿದ್ದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಅವರ ಮನೆಗೆ ಘೆರಾವ್ ಮಾಡಿ ಆಕ್ರೋಶ ಹೊರಹಾಕಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಸ್ವಚ್ಛ ಭಾರತ ಆಂದೋಲನ’ ದೇಶಾದ್ಯಂತ ಜಾರಿಯಲ್ಲಿದ್ದಾಗ, ಮುನಿರತ್ನ ಅವರು ಸಾರ್ವಜನಿಕ ಸ್ಥಳದಲ್ಲೇ ಮೂತ್ರ ವಿಸರ್ಜನೆ ಮಾಡಿ ಸಾರ್ವಜನಿಕರಿಂದ ಕಪಾಳಮೋಕ್ಷ ಮಾಡಿಸಿಕೊಂಡು ಬಿಜೆಪಿ ಪಕ್ಷಕ್ಕೆ ತೀವ್ರ ಮುಜುಗರ ತಂದಿದ್ದರು.
ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ: ಹೈಕಮಾಂಡ್ಗೆ ಮನವಿ
ಮುನಿರತ್ನ ಅವರ ಇಂತಹ ಕೆಟ್ಟ ನಡವಳಿಕೆ ಹಾಗೂ ಸ್ವಭಾವದಿಂದ ಪಕ್ಷ ಸಂಘಟನೆ ಮಾಡಲು ಸಾಧ್ಯವೇ ಇಲ್ಲ. ಕಾರ್ಯಕರ್ತರು ಎಷ್ಟೇ ದೂರು ನೀಡಿದರೂ ಪಕ್ಷದ ಹಿರಿಯ ನಾಯಕರು ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಮುನಿರತ್ನ ಅವರು ಇರುವ ಕ್ಷೇತ್ರದಲ್ಲಿ ಬಿಜೆಪಿ ಸೊನ್ನೆ ಮತ ಗಳಿಸಿದರೂ ಆಶ್ಚರ್ಯವಿಲ್ಲ. ಹೀಗಾಗಿ ಪಕ್ಷದ ಹಿತದೃಷ್ಟಿಯಿಂದ ಅವರನ್ನು ತಕ್ಷಣವೇ ಬಿಜೆಪಿಯಿಂದ ಉಚ್ಛಾಟನೆ ಮಾಡಿ, ಕ್ಷೇತ್ರಕ್ಕೆ ಒಳ್ಳೆಯ ನಾಯಕನನ್ನು ನೀಡಬೇಕು ಎಂದು ವೆಂಕಟೇಶ್ ಆಗ್ರಹಿಸಿದ್ದಾರೆ.
ಇಂತಹ ನಾಯಕನ ಜೊತೆ ಸೇರಿ ಕೆಲಸ ಮಾಡಲು ಮನಸ್ಸಾಗದೆ ತಾವು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿರುವ ಅವರು, ಈ ಪತ್ರದ ಪ್ರತಿಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಸಲ್ಲಿಸಿದ್ದಾರೆ. ಈ ತಕ್ಷಣವೇ ಶಾಸಕ ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಆರ್ಆರ್ ನಗರ ಕ್ಷೇತ್ರದಲ್ಲಿ ಸಾಧಾರಣ ಬಿಜೆಪಿ ಕಾರ್ಯಕರ್ತರೂ ಸಹ ಸಾಲು ಸಾಲಾಗಿ ಪಕ್ಷ ತೊರೆಯುವುದು ಖಚಿತ ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.
ಇದನ್ನೂ ಓದಿ: ಸೌಜನ್ಯ ಕೇಸ್ ಮರುತನಿಖೆ ಚುರುಕು: ಹಳೆಯ ವಿಡಿಯೋ ರಿಲೀಸ್ ಮಾಡಿ ಸ್ಫೋಟಕ ಆರೋಪ ಮಾಡಿದ ವಕೀಲ
