TOP NEWS

DK Shivakumar: ಮುಖ್ಯಮಂತ್ರಿಗಳ 100 ದಿನಗಳ ಕಾರ್ಯಕ್ರಮ ಪ್ರಗತಿ ಪರಿಶೀಲನೆ: ಕೃಷಿ, ಶಿಕ್ಷಣ, ಪಶುಸಂಗೋಪನೆಗೆ ಬೂಸ್ಟರ್ ಡೋಸ್

From AI Education to Agritech Karnataka CM dk shivakumar Sets High Targets in 100 Day Review

ಬೆಂಗಳೂರು: ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜರುಗಿದ 100 ದಿನಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ, ಶಾಲಾ ಶಿಕ್ಷಣ ಹಾಗೂ ಪಶುಸಂಗೋಪನೆ ಸೇರಿದಂತೆ ಹಲವು ಪ್ರಮುಖ ಇಲಾಖೆಗಳ ಆದ್ಯತಾ ಯೋಜನೆಗಳು ಹಾಗೂ ಹೊಸ ನೇಮಕಾತಿಗಳ ಕುರಿತು ಸಮಗ್ರ ವಿಮರ್ಶೆ ನಡೆಸಲಾಯಿತು. ಸಭೆಯಲ್ಲಿ ಸರ್ಕಾರದ ಯೋಜನೆಗಳು ವೇಗವಾಗಿ (DK Shivakumar) ಜನಸಾಮಾನ್ಯರನ್ನು ತಲುಪುವಂತೆ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಯಿತು.

ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಗಳು: ‘ಮುಖ್ಯಮಂತ್ರಿ ರೈತ ಚೈತನ್ಯ ಅಗ್ರಿಟೆಕ್ ಮಿಷನ್’ ಯೋಜನೆಯನ್ನು ದಕ್ಷವಾಗಿ ಜಾರಿಗೆ ತರಲು ಸಿದ್ಧತೆ ನಡೆದಿವೆ. ಈ ಯೋಜನೆಯಡಿ ಈಗಾಗಲೇ 25 ಲಕ್ಷ ರೈತರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ತಲುಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ದೃಶ್ಯ ಮಾಧ್ಯಮದ (ವಿಡಿಯೋ) ಮೂಲಕ ಅವರಿಗೆ ಸುಲಭವಾಗಿ ಅರ್ಥವಾಗುವಂತೆ ಸಂದೇಶ ಕಳುಹಿಸಲು ಸಿಎಂ ಸೂಚನೆ ನೀಡಿದ್ದಾರೆ. ತಂತ್ರಜ್ಞಾನ ಆಧಾರಿತ ಚಾಟ್‌‌ಬಾಟ್ ಸಂಯೋಜನೆ ಪ್ರಗತಿಯಲ್ಲಿದ್ದು, ಡ್ರೋನ್ ಹಾಗೂ ಉಪಗ್ರಹಗಳ ನೆರವಿನಿಂದ ಬೆಳೆ ಅಂದಾಜು ಮಾಡಲು ಮತ್ತು ಡಿಜಿಟಲ್ ಬೆಳೆ ಸಮೀಕ್ಷೆಗೆ ಟೆಂಡರ್ ಪ್ರಕ್ರಿಯೆಯನ್ನು ಸದ್ಯದಲ್ಲೇ ಆರಂಭಿಸಲಾಗುವುದು.

ಕೃಷಿ ಯಾಂತ್ರೀಕರಣಕ್ಕೆ ಉತ್ತೇಜನ ನೀಡುವ ‘ಮುಖ್ಯಮಂತ್ರಿ ನೇಗಿಲ ಯೋಗಿ’ ಯೋಜನೆಗೆ ಬಿಡುಗಡೆಯಾಗಿರುವ ‘JFarm App’ನಲ್ಲಿ ಸೇವೆ ನೀಡಲು ಸುಮಾರು 2.5 ಲಕ್ಷ ಜನರು ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯ ಸೇವೆಗಳನ್ನು ನವೆಂಬರ್ 1 ರಿಂದ ಅಧಿಕೃತವಾಗಿ ಸಾರ್ವಜನಿಕರಿಗೆ ಒದಗಿಸಲು ತಿಳಿಸಲಾಗಿದೆ. ಇನ್ನು ತೋಟಗಾರಿಕೆ ಹಾಗೂ ಕೃಷಿ ರಫ್ತು ಉತ್ತೇಜನಕ್ಕೆ ವಿಶೇಷ ಒತ್ತು ನೀಡಲಾಗಿದ್ದು, ಮಾರ್ಚ್ 2027ರ ಒಳಗೆ 2000 ರೈತರನ್ನು ಯಶಸ್ವಿ ರಫ್ತುದಾರರನ್ನಾಗಿ ಮಾಡಲು ತರಬೇತಿ ಹಾಗೂ ಪ್ರಮಾಣೀಕರಣ ನೀಡುವ ಬೃಹತ್ ಗುರಿ ಹೊಂದಲಾಗಿದೆ. ಸಮೂಹ ಕೃಷಿ (Group Farming) ಮತ್ತು ವೈಜ್ಞಾನಿಕ ಸಂಗ್ರಹಣೆಗೆ ಮಾರ್ಗದರ್ಶನ ನೀಡುವುದರ ಜೊತೆಗೆ, ಪುಷ್ಪೋದ್ಯಮ ಉತ್ತೇಜನಕ್ಕೆ ಕನಿಷ್ಠ 5 ಎಕರೆ ಜಾಗವನ್ನು ಗುರುತಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶಿಸಲಾಗಿದೆ.

ಶಾಲಾ ಶಿಕ್ಷಣ ಮತ್ತು ಕೃತಕ ಬುದ್ಧಿಮತ್ತೆ (AI) ಶಿಕ್ಷಣ: ಶಿಕ್ಷಣ ಕ್ಷೇತ್ರದಲ್ಲಿ ಪ್ರಯೋಗಾತ್ಮಕ ಬದಲಾವಣೆ ತರಲಾಗುತ್ತಿದ್ದು, ನಗರ ಪ್ರದೇಶದ 941 ಶಾಲೆಗಳ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳನ್ನು ಪ್ರಗತಿಪರ ರೈತರ ಜಮೀನುಗಳಿಗೆ ಕರೆದೊಯ್ಯುವ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗಿದೆ. ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ತಂಗಲು ಹಾಸ್ಟೆಲ್ ಹಾಗೂ ಸಮುದಾಯ ಭವನಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲು ಮತ್ತು ಈ ಕಾರ್ಯಕ್ರಮವನ್ನು ಖಾಸಗಿ ಶಾಲೆಗಳೂ ಡಿಸೆಂಬರ್ ಒಳಗೆ ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ.

ರಾಜ್ಯದ 1000 ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಅಭಿವೃದ್ಧಿಯನ್ನು ಚುರುಕುಗೊಳಿಸಲು ಜಿಲ್ಲಾಧಿಕಾರಿಗಳಿಗೇ ಡಿಪಿಆರ್ ಹಾಗೂ ಟೆಂಡರ್ ಅನುಮೋದನೆ ಅಧಿಕಾರ ನೀಡಲಾಗಿದೆ. ನವೆಂಬರ್ 14ರ ಒಳಗೆ ಈ ಶಾಲೆಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಸೂಚಿಸಲಾಗಿದೆ. ಇದಲ್ಲದೆ ಸಿಎಸ್‌ಆರ್ (CSR) ಅಡಿಯಲ್ಲಿ ಕಂಪನಿಗಳ ಸಹಯೋಗದೊಂದಿಗೆ 100 KPS ಶಾಲೆಗಳ ಅಭಿವೃದ್ಧಿಗೆ ಯೋಜಿಸಿದ್ದು, ಈಗಾಗಲೇ 60 ಶಾಲೆಗಳಿಗೆ ಖಾಸಗಿ ಸಂಸ್ಥೆಗಳು ಆಸಕ್ತಿ ತೋರಿವೆ.

ತಂತ್ರಜ್ಞಾನಕ್ಕೆ ಪೂರಕವಾಗಿ 9ನೇ ತರಗತಿಗೆ ಎಐ (AI) ತರಬೇತಿ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ 6ನೇ ತರಗತಿಯಿಂದಲೇ ಇದನ್ನು ಜಾರಿಗೆ ತರಲು ಮಾಹಿತಿ ತಂತ್ರಜ್ಞಾನ ಇಲಾಖೆಯ ನೆರವು ಪಡೆಯಲಾಗುವುದು. ತೆಲಂಗಾಣದ ಮಾದರಿಯಲ್ಲಿ ಗೂಗಲ್ ಸಂಸ್ಥೆಯ ಸಹಯೋಗದೊಂದಿಗೆ ಶಾಲೆಗಳಲ್ಲಿ ಎಐ ತರಬೇತಿ ನೀಡುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಲು ತಿಳಿಸಲಾಗಿದೆ. ಹೊಸ ಎಐ ವಿಶ್ವವಿದ್ಯಾಲಯ ಸ್ಥಾಪನೆಗೆ ಅಗತ್ಯ ಜಾಗ ಗುರುತಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಶಾಲಾ ಶಿಕ್ಷಣಕ್ಕೆ ಪೂರಕವಾಗಿ 956 ಶಿಕ್ಷಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ.

ಪಶುಸಂಗೋಪನೆ ಇಲಾಖೆಯ ಯೋಜನೆಗಳು: ನಾಡಿನಲ್ಲಿ ಪ್ರೊಟೀನ್ ಲಭ್ಯತೆ ಹೆಚ್ಚಿಸುವ ‘ಪ್ರೊಟೀನ್ ಮಿಷನ್’ ಅಡಿಯಲ್ಲಿ ಚಾಮರಾಜನಗರ, ಚಿತ್ರದುರ್ಗ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ನಾಲ್ಕು ಬೃಹತ್ ‘ಪ್ರೊಟೀನ್ ಪಾರ್ಕ್’ಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಜಾನುವಾರು ಮತ್ತು ಕುಕ್ಕುಟ ಉದ್ಯಮಕ್ಕೆ ವೇಗ ನೀಡುವ ಮೂಲಕ ಮೊಟ್ಟೆ ಉತ್ಪಾದನಾ ಮೌಲ್ಯವನ್ನು ಪ್ರಸ್ತುತ ಇರುವ 1058 ಕೋಟಿ ರೂ.ಗಳಿಂದ 1137 ಕೋಟಿಗೆ ಏರಿಸುವ ಗುರಿ ಹೊಂದಲಾಗಿದೆ. ಇದಲ್ಲದೆ, ಈ ವಲಯದಲ್ಲಿ ವಿದ್ಯುತ್ ಸಮಸ್ಯೆ ನಿವಾರಿಸಲು ಸೋಲಾರ್ ಅಳವಡಿಕೆಗೆ ಶೇಕಡಾ 50 ರಷ್ಟು ಸಬ್ಸಿಡಿ ನೀಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.

ಇದನ್ನೂ ಓದಿ: ಫಾರ್ಮ್-6 ಮೂಲಕ ಮರು ನೋಂದಣಿಗೆ ಅವಕಾಶ: ಬಿಟ್ಟುಹೋದ ಅರ್ಹ ಮತದಾರರಿಗೆ ಸಿಇಒ ಅನ್ಬುಕುಮಾರ್ ಅಭಯ

Leave a Reply

Your email address will not be published. Required fields are marked *