ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವ್ಯಂಗ್ಯಪೂರಿತ ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ದೇಶವೇ ಅಲ್ಲೋಲ ಕಲ್ಲೋಲವಾಗುವಂತಹ ಸುದ್ದಿಯೊಂದನ್ನು ಬಹಿರಂಗಪಡಿಸಲಿದ್ದಾರೆ ಎಂದು ಲೇವಡಿ ಮಾಡಿರುವ ಅವರು, ಆ ಸುದ್ದಿಯ ವಿವರಗಳನ್ನು ತಾವೇ ಮುಂಚಿತವಾಗಿ ‘ಬ್ರೇಕ್’ ಮಾಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಕುಮಾರಸ್ವಾಮಿ ಮೇಲೆ ಆರೋಪ ಮಾಡಿದ ಪ್ರದೀಪ್
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರದೀಪ್ ಈಶ್ವರ್, ಕುಮಾರಸ್ವಾಮಿ ಹೇಳ ಹೊರಟಿರುವ ಸುದ್ದಿಗಳು ರಾಜ್ಯದ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ್ದು ಎಂದು ಆರೋಪಿಸಿದ್ದಾರೆ. ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ (ಒಬಿಸಿ) ಹಿತಾಸಕ್ತಿಯನ್ನು ಹೇಗೆ ಕಡೆಗಣಿಸಬೇಕು, ಹಿಂದುಳಿದ ವರ್ಗಗಳ ನಾಯಕರನ್ನು ಹೇಗೆ ಮೂಲೆಗುಂಪು ಮಾಡಬೇಕು ಎಂಬ ವಿಷಯಗಳನ್ನೇ ಕುಮಾರಸ್ವಾಮಿ ದೊಡ್ಡದಾಗಿ ಹೇಳಲಿದ್ದಾರೆ ಎಂದು ಟೀಕಿಸಿದ್ದಾರೆ.
ಇದರ ಜೊತೆಗೆ, ಸ್ವಯಂ ಕೃಷಿಯಿಂದ ಬೆಳೆದು ಬಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ಮೇಲೆ ವಿನಾಕಾರಣ ಸುಳ್ಳು ಆರೋಪಗಳನ್ನು ಹೊರಿಸುವುದು ಹೇಗೆ ಎಂಬ ಯೋಜನೆಯನ್ನು ಅವರು ರೂಪಿಸಿದ್ದಾರೆ ಎಂದು ಶಾಸಕರು ವ್ಯಂಗ್ಯವಾಡಿದ್ದಾರೆ. ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ತರಲಿರುವ ‘ದೇಶವೇ ಅಲ್ಲೋಲ ಕಲ್ಲೋಲ ಮಾಡುವ’ ಸುದ್ದಿಯ ಹಿಂದಿನ ನೈಜ ಉದ್ದೇಶವೇ ಇದು ಎಂದು ಪ್ರದೀಪ್ ಈಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಜೆಡಿಎಸ್ ನಾಯಕರ ನಡುವೆ ಈಗಾಗಲೇ ಆರೋಪ-ಪ್ರತ್ಯಾರೋಪಗಳು ಜೋರಾಗಿದ್ದು, ಪ್ರದೀಪ್ ಈಶ್ವರ್ ಅವರ ಈ ಪೋಸ್ಟ್ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಕಾವು ಹೆಚ್ಚಿಸಿದೆ.
ಸರ್ಕಾರದ ವಿರುದ್ಧ ದಾಖಲೆ ಸಮೇತ ಸಮರ ಸಾರಿದ ಕುಮಾರಸ್ವಾಮಿ: ಅಮೆರಿಕ ಪ್ರವಾಸದಿಂದ ಮರಳುತ್ತಲೇ ಎಚ್‌ಡಿಕೆ ಹೊಸ ಬಾಂಬ್!
ಅಮೆರಿಕ ಪ್ರವಾಸ ಮುಗಿಸಿಕೊಂಡು ರಾಜ್ಯಕ್ಕೆ ಮರಳಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯ ರಾಜಕೀಯ ಅಂಗಳದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಹಾಸನದ ಮಾವಿನಕೆರೆ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಪ್ರಮುಖ ನಾಯಕರ ಭ್ರಷ್ಟಾಚಾರ ಮತ್ತು ಹಗರಣಗಳನ್ನು ಶೀಘ್ರದಲ್ಲೇ ಸೂಕ್ತ ಸಾಕ್ಷ್ಯಧಾರಗಳೊಂದಿಗೆ ಸಾರ್ವಜನಿಕರ ಮುಂದೆ ಬಹಿರಂಗಪಡಿಸುವುದಾಗಿ ಸವಾಲು ಹಾಕಿದ್ದಾರೆ.
ಅಮೆರಿಕ ಪ್ರವಾಸದ ಬಳಿಕ ನಿದ್ದೆಗೆಟ್ಟ ನಾಯಕರು
ತಮ್ಮ ಇತ್ತೀಚಿನ ವಿದೇಶಿ ಪ್ರವಾಸವನ್ನು ಉಲ್ಲೇಖಿಸಿದ ಕುಮಾರಸ್ವಾಮಿ, ಪ್ರವಾಸಕ್ಕೆ ತೆರಳುವ ಮುನ್ನವೇ ಹಲವು ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಿದ್ದಾಗಿ ನೆನಪಿಸಿದರು. ತಾವು ಅಮೆರಿಕದಲ್ಲಿದ್ದಾಗ ರಾಜ್ಯದ ಹಲವು ಪ್ರಭಾವಿ ನಾಯಕರು ನಿದ್ದೆಗೆಟ್ಟಿದ್ದರು ಎಂದು ವ್ಯಂಗ್ಯವಾಡಿದ ಅವರು, ಯಾರು ಆತಂಕದಲ್ಲಿದ್ದಾರೆ ಎಂಬುದು ಅವರ ಮನಸಾಕ್ಷಿಗೆ ಗೊತ್ತಿದೆ ಎಂದರು. ಕೇವಲ ಗಾಳಿಯಲ್ಲಿ ಗುಂಡು ಹಾರಿಸುವ ಅಥವಾ ಆರೋಪ ಮಾಡುವ ರಾಜಕಾರಣವನ್ನು ತಾವು ಮಾಡುವುದಿಲ್ಲ. ಸರ್ಕಾರ ನಡೆಸಿರುವ ಅಕ್ರಮಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಪ್ರತಿಯೊಂದನ್ನೂ ಸಾಕ್ಷ್ಯ ಸಮೇತ ಜನರ ಮುಂದಿಡುವುದಾಗಿ ಸ್ಪಷ್ಟಪಡಿಸಿದರು.
ದೇಶವೇ ಅಲ್ಲೋಲ-ಕಲ್ಲೋಲ ಮಾಡುವ ಸುದ್ದಿಯನ್ನು ಕುಮಾರಣ್ಣ ಹೇಳಲಿದ್ದಾರೆ. ಆ ಸುದ್ದಿ ನನಗೆ ಈಗ ತಾನೇ ತಿಳಿದುಬಂದಿದೆ. ಅವರ Exclusive ಸುದ್ದಿಯನ್ನು ನಾನು ಬ್ರೇಕ್ ಮಾಡುತ್ತಿದ್ದೇನೆ.
— Pradeep Eshwar (@Pradeep__Eshwar) September 15, 2026
ಸುದ್ದಿ-1: ಕರ್ನಾಟಕ ರಾಜ್ಯದ OBCಗಳ ಮೇಲೆ ಚಪ್ಪಲಿ ಬಿಸಾಕುವುದು ಹೇಗೆ?
ಸುದ್ದಿ-2: ಹಿಂದುಳಿದ ವರ್ಗದವರನ್ನು ಮೂಲೆ ಗುಂಪು ಮಾಡುವುದು ಹೇಗೆ?
ಸುದ್ದಿ-3:…
ಮುಖ್ಯಮಂತ್ರಿ ಮತ್ತು ನೈಸ್ ಅಕ್ರಮಗಳ ವಿರುದ್ಧ ಕಿಡಿಕಾರಿದ ಎಚ್‌ಡಿಕೆ
ಉಪ ಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ನೈಸ್ ಸಂಸ್ಥೆಯ ಗುತ್ತಿಗೆದಾರರ ನಡುವಿನ ಇತ್ತೀಚಿನ ಭೇಟಿಯನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಸ್ಥಾನದಲ್ಲಿರುವ ನಾಯಕರು ತಮ್ಮ ಅಧಿಕಾರವನ್ನು ಸರಿಯಾಗಿ ಚಲಾಯಿಸಬೇಕು ಎಂದರು. ಮುಖ್ಯಮಂತ್ರಿಗಳು ತಮ್ಮದೇ ಸಮುದಾಯದವರು ಎಂಬ ಕಾರಣಕ್ಕೆ ತಮಗೆ ಯಾವುದೇ ರೀತಿಯ ಅಸೂಯೆ ಅಥವಾ ವಿರೋಧವಿಲ್ಲ. ಅವರು ಪ್ರಾಮಾಣಿಕ ಮತ್ತು ಜನಪರ ಆಡಳಿತ ನೀಡಿದರೆ ಬೆಂಬಲಿಸಲು ಸಿದ್ಧ, ಆದರೆ ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದರೆ ಅದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಸಂವಿಧಾನದ ನಾಲ್ಕು ಅಂಗಗಳಲ್ಲಿ ಒಂದಾದ ಮಾಧ್ಯಮ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಕುಟುಂಬದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ದೂರಿದ ಅವರು, ತಂದೆ ದೇವೇಗೌಡರ ಹಾದಿಯಲ್ಲೇ ತಾವು ಯಾವುದೇ ಪ್ರಚೋದನೆಗೆ ಒಳಗಾಗದೆ ಕಾನೂನುಬದ್ಧವಾಗಿ ಹೋರಾಡುವುದಾಗಿ ಹೇಳಿದರು.
ಕೆಪಿಎಸ್‌ಸಿ ಹಗರಣ ಮತ್ತು ಪ್ರಜ್ವಲ್ రೇವಣ್ಣ ಪ್ರಕರಣದ ಮೇಲೆ ಅನುಮಾನ
ಇದೇ ವೇಳೆ ಕೆಪಿಎಸ್‌ಸಿ ನೇಮಕಾತಿ ಹಗರಣದ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಹಗರಣದ ಹಣವನ್ನು ಜಪ್ತಿ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರ, ಆ ಅಕ್ರಮ ಹಣ ಯಾರಿಗೆ ಸೇರಿದ್ದು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಮತ್ತೊಂದೆಡೆ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಉಲ್ಲೇಖಿಸಿ, ನ್ಯಾಯಾಲಯ ನೀಡುವ ಯಾವುದೇ ತೀರ್ಪಿಗೆ ತಮ್ಮ ಕುಟುಂಬ ಬದ್ಧವಾಗಿರುತ್ತದೆ ಎಂದರು. ಆದರೆ ಜೈಲಿನಲ್ಲಿದ್ದ ಪ್ರಜ್ವಲ್‌ಗೆ ಮೊಬೈಲ್ ಫೋನ್ ಹೇಗೆ ಸಿಕ್ಕಿತು? ಅಶ್ಲೀಲ ವೀಡಿಯೊಗಳಿದ್ದ ಪೆನ್‌ಡ್ರೈವ್‌ಗಳನ್ನು ಜೈಲಿನೊಳಗೆ ತಲುಪಿಸಿದ್ದು ಯಾರು? ಎಂಬ ಗಂಭೀರ ಪ್ರಶ್ನೆಗಳನ್ನು ಎತ್ತಿದರು. ತಮ್ಮ ಕುಟುಂಬವನ್ನು ರಾಜಕೀಯವಾಗಿ ನಿರ್ನಾಮ ಮಾಡಲು ಸರ್ಕಾರವೇ ಈ ರೀತಿಯ ಸಂಚು ರೂಪಿಸಿದೆಯೇ ಎಂಬ ಶಂಕೆ ವ್ಯಕ್ತಪಡಿಸಿದ ಅವರು, ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಎಚ್.ಡಿ. ಕುಮಾರಸ್ವಾಮಿ ಅವರ ಈ ಸಾಲು ಸಾಲು ಗಂಭೀರ ಆರೋಪಗಳು ಹಾಗೂ ದಾಖಲೆ ಬಹಿರಂಗಪಡಿಸುವ ಬೆದರಿಕೆಯು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದ್ದು, ರಾಜ್ಯ ರಾಜಕೀಯದಲ್ಲಿ ಮುಂಬರುವ ದಿನಗಳಲ್ಲಿ ತೀವ್ರ ವಾಕ್ಸಮರಕ್ಕೆ ಹಾದಿಮಾಡಿಕೊಟ್ಟಿದೆ.
ಇದನ್ನೂ ಓದಿ: ದೋಸ್ತಿ ನಾಯಕರ ಬಿಗ್ ಪ್ಲಾನ್: ಕಲ್ಲು ತೂರಾಟ ನಡೆದಿದ್ದ ಹಳೆಯ ಮಾರ್ಗದಲ್ಲೇ ಮತ್ತೆ ವಿಜೃಂಭಣೆಯ ಮೆರವಣಿಗೆ
