ನವದೆಹಲಿ: ಶಾಲಾ ಶಿಕ್ಷಕರು ನೀಡಿದ ಕಠಿಣ ಶಿಕ್ಷೆಯೊಂದು ಹತ್ತರ ಹರೆಯದ ಪುಟ್ಟ ಬಾಲಕಿಯ ಪ್ರಾಣವನ್ನೇ ಬಲಿ ಪಡೆದಿರುವ ಅತ್ಯಂತ ಆಘಾತಕಾರಿ ಘಟನೆ ದೇಶದ ರಾಜಧಾನಿ ದೆಹಲಿಯಲ್ಲಿ (Crime) ನಡೆದಿದೆ. ತರಗತಿಗೆ ಪಠ್ಯಪುಸ್ತಕ ತರಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳನ್ನು ಸುಡುವ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿದ್ದರಿಂದ, ಆಕೆ ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಆಗಸ್ಟ್ 27 ರಂದು ನಡೆದಿದ್ದ ಘಟನೆ
ಪೂರ್ವ ದೆಹಲಿಯ ವಿನೋದ್ ನಗರದಲ್ಲಿರುವ ಸರ್ವೋದಯ ಕನ್ಯಾ ವಿದ್ಯಾಲಯದಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಮೃತ ಬಾಲಕಿಯನ್ನು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 10 ವರ್ಷದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಆಗಸ್ಟ್ 27ರಂದು ಈ ದುರಂತ ನಡೆದಿದ್ದು, ಘಟನೆಯ ವಿವರಗಳು ತಡವಾಗಿ ಬೆಳಕಿಗೆ ಬಂದಿವೆ.
ಬಾಲಕಿಯ ಕುಟುಂಬಸ್ಥರು ನೀಡಿದ ಮಾಹಿತಿಯ ಪ್ರಕಾರ, ಘಟನೆಯ ದಿನದಂದು ಬಾಲಕಿಯು ತರಗತಿಗೆ ಅಗತ್ಯವಿದ್ದ ಪುಸ್ತಕವನ್ನು ತೆಗೆದುಕೊಂಡು ಹೋಗಿರಲಿಲ್ಲ. ಇದರಿಂದ ಕೆರಳಿದ ಶಿಕ್ಷಕಿ, ಆಕೆಗೆ ಶಾಲೆಯ ಆವರಣದ ಬಿಸಿಲಿನಲ್ಲಿ ನಿಲ್ಲುವಂತೆ ಕಠಿಣ ಶಿಕ್ಷೆ ವಿಧಿಸಿದ್ದರು. ತೀವ್ರ ಬಿಸಿಲಿನ ತಾಪ ತಾಳಲಾರದೆ ಬಾಲಕಿಯ ಆರೋಗ್ಯ ಸ್ಥಿತಿ ಇದ್ದಕ್ಕಿದ್ದಂತೆ ಕ್ಷೀಣಿಸತೊಡಗಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಶಾಲೆಯ ಆಡಳಿತ ಮಂಡಳಿಯು ಬಾಲಕಿಯ ತಾಯಿ ಅಂಜಲಿ ಅವರಿಗೆ ಕರೆ ಮಾಡಿ ತಕ್ಷಣವೇ ಶಾಲೆಗೆ ಬರುವಂತೆ ತಿಳಿಸಿದೆ.
ಚಿಕಿತ್ಸೆಗೆ ಫಲಕಾರಿಯಾಗದೇ ಬಾಲಕಿ ಸಾವು
ಸುದ್ದಿ ತಿಳಿದು ಗಾಬರಿಯಿಂದ ಶಾಲೆಗೆ ಧಾವಿಸಿದ ತಾಯಿ ಅಂಜಲಿ ಅವರಿಗೆ ಅಲ್ಲಿ ಕಂಡ ದೃಶ್ಯ ಆಘಾತ ಮೂಡಿಸಿದೆ. ತಮ್ಮ ಮಗಳು ತೀವ್ರ ಬಿಸಿಲಿನಲ್ಲಿ ನಿಂತು ನರಳುತ್ತಿದ್ದುದನ್ನು ಮತ್ತು ಆಕೆಯ ಆರೋಗ್ಯ ತೀರಾ ಹದಗೆಟ್ಟಿರುವುದನ್ನು ಅವರು ಕಂಡಿದ್ದಾರೆ. ತಕ್ಷಣವೇ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತಾದರೂ, ಆಕೆ ಚಿಕಿತ್ಸೆಗೆ ಸ್ಪಂದಿಸದೆ ಚಿಕಿತ್ಸೆಯ ಅವಧಿಯಲ್ಲೇ ಕೊನೆಯುಸಿರೆಳೆದಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಈ ದುರಂತ ಸುದ್ದಿ ಹರಡುತ್ತಿದ್ದಂತೆಯೇ ಆಕ್ರೋಶಗೊಂಡ ಬಾಲಕಿಯ ಕುಟುಂಬಸ್ಥರು ಹಾಗೂ ಸ್ಥಳೀಯ ನಿವಾಸಿಗಳು ಶಾಲೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಮಗಳ ಸಾವಿಗೆ ಕಾರಣರಾದ ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿಯ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ವಿಷಯ ತಿಳಿಯುತ್ತಿದ್ದಂತೆಯೇ ಬಿಜೆಪಿ ಶಾಸಕ ರವೀಂದ್ರ ಸಿಂಗ್ ನೇಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಹಾಗೂ ತಪ್ಪಿತಸ್ಥ ಶಾಲಾ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಪ್ರಸ್ತುತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಬ್ಲಾಕ್ಮೇಲ್ ಕಿರುಕುಳಕ್ಕೆ ಬೆಚ್ಚಿದ ಯುವತಿ: ಬೆಂಗಳೂರಿನ ಅಗ್ರಹಾರ ಕೆರೆಗೆ ಹಾರಿ ಆತ್ಮಹತ್ಯೆ
