ಬೆಂಗಳೂರು: ಶ್ರಾವಣ ಮಾಸ ಮುಗಿದು ಹಬ್ಬಗಳ ಸಾಲು ಆರಂಭವಾಗುತ್ತಿದ್ದಂತೆಯೇ ರಾಜಧಾನಿಯಲ್ಲಿ ಸಿಹಿ ತಿನಿಸುಗಳು ಹಾಗೂ ಬೇಕರಿ ಉತ್ಪನ್ನಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಆದರೆ, ಸಾರ್ವಜನಿಕರಿಗೆ ಪೂರೈಕೆಯಾಗುತ್ತಿರುವ ಈ ಆಹಾರ ಪದಾರ್ಥಗಳು ಎಷ್ಟು ಸುರಕ್ಷಿತ? ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ರಂಗಕ್ಕಿಳಿದಿದ್ದಾರೆ. ನಗರದ ಹಲವು ಸ್ವೀಟ್ಸ್ ಮತ್ತು ಬೇಕರಿ ಉತ್ಪಾದನಾ ಘಟಕಗಳ ಮೇಲೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲನೆ ಚುರುಕುಗೊಳಿಸಿದೆ.
ಹಬ್ಬಗಳ ಸಮಯದಲ್ಲಿ ತರಾತುರಿಯಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ, ಅತ್ಯಂತ ಅಸ್ವಚ್ಛ ವಾತಾವರಣದಲ್ಲಿ ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತಿದೆ ಎಂದು ಸಾರ್ವಜನಿಕರಿಂದ ಸಾಲುಸಾಲು ದೂರುಗಳು ಬಂದಿದ್ದವು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ, ವಿಶೇಷ ಕಾರ್ಯಾಚರಣೆ ತಂಡವನ್ನು ರಚಿಸಿ ಬೆಂಗಳೂರಿನ ಪ್ರಮುಖ ತಯಾರಿಕಾ ಘಟಕಗಳ ಮೇಲೆ ದಾಳಿ ಸಂಘಟಿಸಿದೆ.
ಈ ಶೋಧ ಕಾರ್ಯದ ವೇಳೆ ಸಿಹಿ ತಿಂಡಿ ತಯಾರಿಕೆಗೆ ಬಳಸಲಾಗುವ ಕಚ್ಚಾ ಸಾಮಗ್ರಿಗಳ ತನಿಖೆ, ತಯಾರಿಕಾ ಪ್ರದೇಶದ ನೈರ್ಮಲ್ಯ ಹಾಗೂ ಘಟಕಗಳು ಹೊಂದಿರುವ ಪರವಾನಗಿಗಳನ್ನು ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ. ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಮತ್ತು ನೈರ್ಮಲ್ಯ ನಿಯಮಗಳನ್ನು ಗಾಳಿಗೆ ತೂರುವ ತಯಾರಕರ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ FSSAI ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಮೆಡಿಕಲ್ ಕಾಲೇಜು ಹಾಸ್ಟೆಲ್ ಕ್ಯಾಂಟೀನ್‌ಗಳಿಗೆ ‘ಆಹಾರ ಇಲಾಖೆ’ ಶಾಕ್: ದಾಳಿಯಲ್ಲಿ ಬಯಲಾಯ್ತು ಅಸಲಿ ಕರ್ಮಕಾಂಡ!
ಬೆಂಗಳೂರು: ರಾಜಧಾನಿಯ ವೈದ್ಯಕೀಯ ಕಾಲೇಜುಗಳ (Medical College) ಹಾಸ್ಟೆಲ್‌ಗಳಲ್ಲಿ ಭಾವಿ ವೈದ್ಯರಿಗೆ ಪೂರೈಸಲಾಗುತ್ತಿರುವ ಆಹಾರದ ಸುರಕ್ಷತೆ ಹಾಗೂ ನೈರ್ಮಲ್ಯದ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಬೆಂಗಳೂರಿನ ಬರೋಬ್ಬರಿ 34 ಸರ್ಕಾರಿ ಹಾಗೂ ಖಾಸಗಿ ಮೆಡಿಕಲ್ ಕಾಲೇಜುಗಳ ಹಾಸ್ಟೆಲ್ ಮೆಸ್ ಮತ್ತು ಕ್ಯಾಂಟೀನ್‌ಗಳ ಮೇಲೆ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ನಡೆಸಲಾದ ಈ ಕಾರ್ಯಾಚರಣೆಯ ವೇಳೆ ಕ್ಯಾಂಟೀನ್ ಆಡಳಿತ ಮಂಡಳಿಯ ಬೇಜವಾಬ್ದಾರಿ ಹಾಗೂ ಗಂಭೀರ ಲೋಪಗಳು ಬೆಳಕಿಗೆ ಬಂದಿವೆ. ತಪಾಸಣೆ ನಡೆಸಿದ ಅಧಿಕಾರಿಗಳಿಗೆ ಅಡುಗೆ ಕೋಣೆಗಳಲ್ಲಿ ಕಂಡ ದೃಶ್ಯಗಳು ತೀವ್ರ ಆಘಾತ ಮೂಡಿಸಿವೆ.
ಕೊಳೆತ ತರಕಾರಿ, ಜಿರಳೆಗಳ ಕಾಟ: ಜಪ್ತಿಯಾಯ್ತು ಎಕ್ಸ್‌ಪೈರಿ ವಸ್ತುಗಳು!
ಅಧಿಕಾರಿಗಳ ತಂಡವು ಅಡುಗೆ ಮನೆಗಳಲ್ಲಿ ಬಳಸಲಾಗುತ್ತಿದ್ದ ಕಚ್ಚಾ ಸಾಮಗ್ರಿಗಳ ಗುಣಮಟ್ಟ, ಅವುಗಳ ಬಳಕೆಯ ಅವಧಿ (Expiry Date), ಸಂಗ್ರಹಣಾ ವ್ಯವಸ್ಥೆ ಹಾಗೂ ನೈರ್ಮಲ್ಯ ಸ್ಥಿತಿಗತಿಯನ್ನು ಕೂಲಂಕುಷವಾಗಿ ತಪಾಸಣೆಗೊಳಪಡಿಸಿತು.
ಈ ವೇಳೆ, ದಿನನಿತ್ಯದ ಬಾಗಿಗೆ ಬಳಸುವ ಅವಧಿ ಮೀರಿದ ರವೆ ಹಾಗೂ ಹಾಲು ಪತ್ತೆಯಾಗಿದ್ದು, ಅಧಿಕಾರಿಗಳು ಅವುಗಳನ್ನು ತಕ್ಷಣವೇ ಜಪ್ತಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅಡುಗೆಗೆ ಇಡಲಾಗಿದ್ದ ಕೊಳೆತ ತರಕಾರಿಗಳು ಹಾಗೂ ಬಳಕೆಗೆ ಯೋಗ್ಯವಲ್ಲದ ಕಲುಷಿತ ಮಾಂಸ ಸಂಗ್ರಹಿಸಿಟ್ಟಿರುವುದು ಸಾಬೀತಾಗಿದೆ. ಅತ್ಯಂತ ಶೋಚನೀಯ ಸಂಗತಿಯೆಂದರೆ, ಆಹಾರ ತಯಾರಿಸುವ ಸ್ಥಳಗಳಲ್ಲೇ ಜಿರಳೆಗಳ ಕಾಟ ವಿಪರೀತವಾಗಿದ್ದು, ಕನಿಷ್ಠ ಸ್ವಚ್ಛತೆಯನ್ನೂ ಕಾಯ್ದುಕೊಳ್ಳದಿರುವುದು ಕಂಡುಬಂದಿದೆ.
ಐದು ಕ್ಯಾಂಟೀನ್‌ಗಳಿಗೆ ನೋಟಿಸ್: ಕೋರ್ಟ್ ಮೆಟ್ಟಿಲೇರಲು ಇಲಾಖೆ ಸಜ್ಜು
ಆಹಾರ ಭದ್ರತಾ ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಐದು ಪ್ರಮುಖ ಕ್ಯಾಂಟೀನ್‌ಗಳಿಗೆ ಇಲಾಖೆಯು ತಕ್ಷಣವೇ ನೋಟಿಸ್ ಜಾರಿ ಮಾಡಿದೆ.
“ನಾವು ಕೇವಲ ನೋಟಿಸ್ ನೀಡುವುದಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ನೈರ್ಮಲ್ಯ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವ ಸಂಸ್ಥೆಗಳ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಠಿಣ ಶಿಕ್ಷೆಯಾಗುವಂತೆ ಕಾನೂನು ಕ್ರಮ ಜರುಗಿಸಲಿದ್ದೇವೆ” ಎಂದು ದಾಳಿಯ ನೇತೃತ್ವ ವಹಿಸಿದ್ದ ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಜನರ ಆರೋಗ್ಯವನ್ನು ಕಾಯುವ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೇ ಇಂತಹ ಅಸುರಕ್ಷಿತ ಮತ್ತು ಕಳಪೆ ಆಹಾರ ನೀಡುತ್ತಿರುವುದು ಸಾರ್ವಜನಿಕರು ಹಾಗೂ ಪೋಷಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಪ್ರತಿಯೊಂದು ಕ್ಯಾಂಟೀನ್ ಹಾಗೂ ಮೆಸ್‌ನವರು FSSAI ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಮುಂದಿನ ದಿನಗಳಲ್ಲೂ ಇಂತಹ ಸರ್ಪ್ರೈಸ್ ರೈಡ್‌ಗಳು ಮುಂದುವರಿಯಲಿದ್ದು, ನಿಯಮ ಮೀರುವವರ ವಿರುದ್ಧ ದಾಕ್ಷಿಣ್ಯವಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಕೆಪಿಎಸ್‌ಸಿ ಅಕ್ರಮ ಆರೋಪ: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ
