ಮಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ನಕಲಿ ಔಷಧ ಮಾಫಿಯಾ ಹಾಗೂ ಹೋಟೆಲ್, ರಸ್ತೆಬದಿಯ ತಿನಿಸು ಕೇಂದ್ರಗಳಲ್ಲಿ ಮಾರಾಟವಾಗುತ್ತಿರುವ ಕಳಪೆ ಮತ್ತು ಅಸ್ವಚ್ಛ ಆಹಾರ ಪದಾರ್ಥಗಳಿಗೆ ಶಾಶ್ವತವಾಗಿ ಕಡಿವಾಣ ಹಾಕಲು ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ತಾಲೂಕು ಮಟ್ಟದಲ್ಲೂ ನಿವೃತ್ತ ಹಿರಿಯ ನಾಗರಿಕರನ್ನು ಒಳಗೊಂಡ ವಿಶೇಷ ‘ವಾಚ್ ಟೀಮ್’ ರಚಿಸಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ (UT Khader) ಶನಿವಾರ ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಾಚ್ ಟೀಮ್ ರಚನೆಗೆ ಸಿದ್ದತೆ
ರಾಜ್ಯಾದ್ಯಂತ ಕೋಟ್ಯಂತರ ಜನರಿದ್ದು, ಕೇವಲ ಬೆರಳಣಿಕೆಯಷ್ಟು ಇರುವ ತನಿಖಾಧಿಕಾರಿಗಳಿಂದ ಪ್ರತಿಯೊಂದು ಮೂಲೆಯನ್ನು ತಪಾಸಣೆ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ 60 ವರ್ಷ ಮೇಲ್ಪಟ್ಟ ನಿವೃತ್ತ ವೈದ್ಯರು, ಪೌಷ್ಟಿಕಾಂಶ ತಜ್ಞರು, ಪ್ರಾಧ್ಯಾಪಕರು ಹಾಗೂ ಸಾಮಾಜಿಕ ಕಾಳಜಿಯುಳ್ಳ ಹಿರಿಯ ನಾಗರಿಕರನ್ನು ಗುರುತಿಸಿ ಈ ವಾಚ್ ಟೀಮ್‌ಗಳನ್ನು ರಚಿಸಲಾಗುತ್ತದೆ. ಈ ತಂಡದ ಸದಸ್ಯರು ಸ್ಥಳೀಯ ಹೋಟೆಲ್, ಬೇಕರಿ ಹಾಗೂ ಔಷಧ ಅಂಗಡಿಗಳಿಗೆ ನೇರವಾಗಿ ಭೇಟಿ ನೀಡಿ ಸ್ವಚ್ಛತೆ ಮತ್ತು ಗುಣಮಟ್ಟವನ್ನು ಪರಿಶೀಲಿಸಿ, ಸರ್ಕಾರ ಹಾಗೂ ಇಲಾಖೆಗೆ ವರದಿ ನೀಡುವ ಅಧಿಕಾರ ಹೊಂದಿರಲಿದ್ದಾರೆ. ಈ ವ್ಯವಸ್ಥೆಗೆ ಶೀಘ್ರವೇ ಕಾನೂನು ಚೌಕಟ್ಟು ರೂಪಿಸಲಾಗುವುದು ಎಂದು ಸಚಿವರು ವಿವರಿಸಿದರು.
ಇದಲ್ಲದೆ, ಕಳಪೆ ಆಹಾರ ಮತ್ತು ಅವಧಿ ಮೀರಿದ ಔಷಧಗಳ ಬಗ್ಗೆ ಸಾರ್ವಜನಿಕರು ತಕ್ಷಣ ದೂರು ನೀಡಲು ಅನುವಾಗುವಂತೆ ಹೋಟೆಲ್ ಹಾಗೂ ಔಷಧ ಮಳಿಗೆಗಳಲ್ಲಿ ‘ಕ್ಯೂಆರ್ ಕೋಡ್’ ವ್ಯವಸ್ಥೆ ಜಾರಿಗೆ ತರಲಾಗಿದೆ. ಸಾರ್ವಜನಿಕರು ಇದನ್ನು ಸ್ಕ್ಯಾನ್ ಮಾಡಿ ದೂರು ಸಲ್ಲಿಸಿದ ತಕ್ಷಣ, ತನಿಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲಿದ್ದಾರೆ. ಈ ನೂತನ ತಂತ್ರಜ್ಞಾನ ಆಧರಿತ ವ್ಯವಸ್ಥೆಯ ಮೂಲಕ ಕಳೆದ ಎರಡೇ ದಿನಗಳಲ್ಲಿ 400ಕ್ಕೂ ಅಧಿಕ ದೂರುಗಳು ಸಲ್ಲಿಕೆಯಾಗಿವೆ. ಮತ್ತೊಂದೆಡೆ, ರಾಜ್ಯದಲ್ಲಿ ಪತ್ತೆಯಾಗಿರುವ ಬೃಹತ್ ನಕಲಿ ಔಷಧ ಜಾಲದ ವಿರುದ್ಧ ತನಿಖೆ ಚುರುಕುಗೊಳಿಸಲಾಗಿದ್ದು, ಹಿಮಾಚಲ ಪ್ರದೇಶ ಹಾಗೂ ತೆಲಂಗಾಣದಿಂದ ನಕಲಿ ಜೀವರಕ್ಷಕ ಔಷಧಗಳನ್ನು ತಂದು ಪ್ರಸಿದ್ಧ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ಮಾಫಿಯಾವನ್ನು ಬೇರುಸಹಿತ ಕಿತ್ತೊಗೆಯಲು ಪೊಲೀಸ್ ಮತ್ತು ಡ್ರಗ್ಸ್ ಇಲಾಖೆಯನ್ನೊಳಗೊಂಡ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ದುಬೈನಲ್ಲಿರುವ ಈ ಜಾಲದ ಮುಖ್ಯಸ್ಥರನ್ನು ಬಂದಿಸಲು ಬಲೆ ಬೀಸಲಾಗಿದೆ.
ಕೃತಕ ಪನೀರ್ ಮಾರಾಟವನ್ನು ರಾಜ್ಯದಲ್ಲಿ ಸಂಪೂರ್ಣ ನಿಷೇಧ
ಆಹಾರ ಭದ್ರತೆಯ ಭಾಗವಾಗಿ, ಪಾಮ್ ಆಯಿಲ್ ಬಳಸಿ ತಯಾರಿಸುವ ಕೃತಕ ಪನೀರ್ ಮಾರಾಟವನ್ನು ರಾಜ್ಯದಲ್ಲಿ ಸಂಪೂರ್ಣ ನಿಷೇಧಿಸಲಾಗಿದೆ. ದೊಡ್ಡ ಹೋಟೆಲ್‌ಗಳಲ್ಲಿ ಬಳಸಿದ ಎಣ್ಣೆಯನ್ನು ರಸ್ತೆಬದಿಯ ಅಂಗಡಿಗಳಿಗೆ ಮರುಮಾರಾಟ ಮಾಡುವುದನ್ನು ತಡೆಯಲು, ಆ ಎಣ್ಣೆಯನ್ನು ಜೈವಿಕ ಇಂಧನ (ಬಯೋ-ಡೀಸೆಲ್) ತಯಾರಿಕೆಗೆ ನೀಡುವ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ, ಶೀತಲೀಕರಿಸಿದ ಕೋಳಿ ಮಾಂಸ ಹಾಗೂ ಬನ್‌ಗಳನ್ನು ಎಷ್ಟು ದಿನಗಳಿಂದ ಕಾಯ್ದಿರಿಸಲಾಗಿದೆ ಎಂಬ ನಿಖರ ಮಾಹಿತಿಯನ್ನು ಹೋಟೆಲ್‌ಗಳು ಬೋರ್ಡ್‌ನಲ್ಲಿ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ನಿಗದಿಗಿಂತ ಹೆಚ್ಚು ಸಕ್ಕರೆ ಬಳಸುವುದನ್ನು ತಡೆಯಲು ಕೇಂದ್ರಕ್ಕೂ ಪ್ರಸ್ತಾವನೆ ಸಲ್ಲಿಸಲಾಗುವುದು. ಇದೇ ವೇಳೆ ಜನೌಷಧಿ ಕೇಂದ್ರಗಳಲ್ಲಿ ಅಧಿಕೃತ ಜೆನರಿಕ್ ಔಷಧಗಳ ಕೊರತೆ ಸೃಷ್ಟಿಸಿ ಖಾಸಗಿ ಕಂಪನಿಗಳ ಔಷಧ ಮಾರಾಟ ಮಾಡುತ್ತಿರುವ ಬಗ್ಗೆಯೂ ತಪಾಸಣೆ ನಡೆಯುತ್ತಿದೆ. ಕೊನೆಯಲ್ಲಿ, ಶಾಲಾ ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಿ 800 ಉರ್ದು ಹಾಗೂ 200 ಹಿಂದಿ ಭಾಷಾ ಶಿಕ್ಷಕರ ಹೆಚ್ಚುವರಿ ನೇಮಕಾತಿಗೆ ಕ್ರಮ ವಹಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ: ಶಾಲಾ ಬಿಸಿಊಟದಲ್ಲಿ ಹಲ್ಲಿ ಬಿದ್ದು 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ; ತಾಲೂಕು ಆಸ್ಪತ್ರೆಗೆ ದಾಖಲು!
