ಬೆಳಗಾವಿ: ಕಿತ್ತೂರಿನ ಪ್ರಸಿದ್ಧ ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದಿದ್ದ ಭಾರಿ ಕಳ್ಳತನ ಪ್ರಕರಣವನ್ನು ಅತ್ಯಂತ ಕ್ಷಿಪ್ರವಾಗಿ ಭೇದಿಸಿರುವ ಕಿತ್ತೂರು ಠಾಣೆ ಪೊಲೀಸರು, ಐವರು ಅಂತರರಾಜ್ಯ ಖದೀಮರ (Crime) ಜಾಲವನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಸ್ಥಳದಿಂದ ಪರಾರಿ
ಬಂಧಿತ ಆರೋಪಿಗಳಲ್ಲಿ ನಾಲ್ವರು ರಾಜಸ್ಥಾನ ಮೂಲದವರಾಗಿದ್ದು, ಮತ್ತೊಬ್ಬ ಮಧ್ಯಪ್ರದೇಶ ಮೂಲದವನೆಂದು ಗುರುತಿಸಲಾಗಿದೆ. ಆಗಸ್ಟ್ 12ರ ತಡರಾತ್ರಿ ಕಿತ್ತೂರು ಪಟ್ಟಣದಲ್ಲಿರುವ ‘ಮಾನಜ್ಜ ಜ್ಯುವೆಲ್ಲರಿ’ ಅಂಗಡಿಯನ್ನು ಗುರಿಯಾಗಿಸಿಕೊಂಡಿದ್ದ ಈ ಖದೀಮರ ಮುಸುಕುಧಾರಿ ಪಡೆ, ಅಂಗಡಿಯ ಶಟರ್ ಬೀಗ ಮುರಿದು ಒಳನುಗ್ಗಿತ್ತು. ಅಂಗಡಿಯಲ್ಲಿದ್ದ ಕೆಜಿಗಟ್ಟಲೆ ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ಅಂಗಡಿ ಮಾಲೀಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಕಿತ್ತೂರು ಪೊಲೀಸರು, ಆರೋಪಿಗಳ ಬಂಧನಕ್ಕಾಗಿ ತೀವ್ರ ಜಾಲ ಬೀಸಿದ್ದರು.
ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು, ತಾಂತ್ರಿಕ ತನಿಖೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರ ಸುಳಿವು ಪತ್ತೆಹಚ್ಚಿ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಗಳಿಂದ ಒಟ್ಟು 17 ಲಕ್ಷ ರೂಪಾಯಿ ಮೌಲ್ಯದ 7 ಕೆಜಿ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಇದರೊಂದಿಗೆ ಕಳ್ಳತನದ ಕೃತ್ಯಕ್ಕೆ ಮತ್ತು ಪರಾರಿಯಾಗಲು ಬಳಸಲಾಗಿದ್ದ 5 ಲಕ್ಷ ರೂಪಾಯಿ ಮೌಲ್ಯದ ‘ಐ20’ ಕಾರನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವರ್ತಕರಿಂದ ಭಾರಿ ಪ್ರಶಂಸೆ ವ್ಯಕ್ತ
ಬಂಧಿತ ಐವರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಸರಗಿ ಹಾಗೂ ಬೈಲಹೊಂಗಲ ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಕಿತ್ತೂರು ಸಿಪಿಐ ಮತ್ತು ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡ ಈ ಕಾರ್ಯಚರಣೆ ನಡೆಸಿ ಕಳ್ಳರನ್ನು ಹೆಡೆಮುರಿ ಕಟ್ಟಿದೆ. ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಹಾಗೂ ವರ್ತಕರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿ: ಸಿರಿ ವೈಭವ ಸೊಸೈಟಿ ಅಕ್ರಮ ಪ್ರಕರಣ: ಇಡಿಯಿಂದ ಮತ್ತಷ್ಟು ₹18.32 ಕೋಟಿ ಮೌಲ್ಯದ ಆಸ್ತಿ ಜಪ್ತಿ!
