ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನಾನಾ ರೀತಿಯ ವಿಚಿತ್ರ ಹಾಗೂ ಕುತೂಹಲಕಾರಿ ವೀಡಿಯೋಗಳು ವೈರಲ್ (Viral News) ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ತಮಾಷೆಯ ವೀಡಿಯೋ ಇಂಟರ್‌ನೆಟ್‌ನಲ್ಲಿ ಸಖತ್ ಸೌಂಡು ಮಾಡುತ್ತಿದೆ. ವ್ಯಕ್ತಿಯೊಬ್ಬ ನೂರಾರು ಚಪ್ಪಲಿಗಳ ಮಧ್ಯೆ ಕಳೆದುಹೋಗಿದ್ದ ತನ್ನ ನೆಚ್ಚಿನ ‘ಕ್ಲಾಗ್ಸ್’ (ಒಂದು ರೀತಿಯ ಶೂ/ಚಪ್ಪಲಿ) ಅನ್ನು ಹುಡುಕಲು ಕೃತಕ ಬುದ್ಧಿಮತ್ತೆಯ (AI) ‘ChatGPT’ ಮೊರೆ ಹೋಗಿದ್ದು, ಕೊನೆಗೂ ಅದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾನೆ!
ಸುಲಭವಾಗಿ ಕ್ಲಾಗ್ಸ್ ಪತ್ತೆ ಹಚ್ಚಿದ ಚಾಟ್ ಜಿಪಿಟಿ
ಶುಭಂಗ್ ಬೋರ್ಕರ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಹಂಚಿಕೊಂಡಿರುವ ಈ ವೀಡಿಯೋದಲ್ಲಿ, ಬೃಹತ್ ಪ್ರಮಾಣದ ಚಪ್ಪಲಿಗಳನ್ನು ರಾಶಿ ಹಾಕಲಾದ ಸ್ಥಳವೊಂದನ್ನು ಕಾಣಬಹುದು. ಅಲ್ಲಿ ಸಾವಿರಕ್ಕೂ ಹೆಚ್ಚು ಚಪ್ಪಲಿಗಳ ನಡುವೆ ತನ್ನ ಒಂದು ಕಾಲಿನ ಕ್ಲಾಗ್ಸ್ ಕಳೆದುಕೊಂಡಿದ್ದ ವ್ಯಕ್ತಿ, ಅದನ್ನು ಹುಡುಕಲು ಕೈಯಿಂದ ಹುಡುಕಾಡುವ ಬದಲು AI ತಂತ್ರಜ್ಞಾನ ಬಳಸಲು ನಿರ್ಧರಿಸಿದ್ದಾನೆ. ಚಪ್ಪಲಿಗಳ ರಾಶಿಯ ಫೋಟೋ ತೆಗೆದು ChatGPT ಗೆ ಅಪ್‌ಲೋಡ್ ಮಾಡಿದ ಆತ, ತನ್ನ ಕ್ಲಾಗ್ಸ್ ಎಲ್ಲಿದೆ ಎಂದು ಹುಡುಕಿಕೊಡುವಂತೆ ಕೇಳಿದ್ದಾನೆ. ಆಶ್ಚರ್ಯವೆಂದರೆ, ತಕ್ಷಣವೇ ಚಾಟ್‌ಜಿಪಿಟಿ ಆ ಚಪ್ಪಲಿಯನ್ನು ಗುರುತಿಸಿದ್ದು, ವ್ಯಕ್ತಿ ಅದನ್ನು ಸುಲಭವಾಗಿ ಪತ್ತೆಹಚ್ಚಿ ತನ್ನದಾಗಿಸಿಕೊಂಡಿದ್ದಾನೆ.
ನೆಟ್ಟಿಗರಿಂದ ಮಸ್ತ್ ಮಸ್ತ್ ಕಮೆಂಟ್
ಈ ವಿಶಿಷ್ಟ ವೀಡಿಯೋ ಈಗಾಗಲೇ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್‌ಗಳ ಮೂಲಕ ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ. “ನಮಗೆ AI ಅನ್ನು ಈ ರೀತಿಯೂ ಬಳಸಬಹುದು ಎಂದು ಗೊತ್ತೇ ಇರಲಿಲ್ಲ” ಎಂದು ಒಬ್ಬರು ಕಾಮೆಂಟ್ ಮಾಡಿದರೆ, “ಅಲ್ಲಿರುವ ಅತ್ಯಂತ ಸುಂದರವಾದ ಜೋಡಿ ಚಪ್ಪಲಿ ಎತ್ತಿಕೊಂಡು ಹೋಗಬೇಕಿತ್ತು” ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು “ಆಧುನಿಕ ಸಮಸ್ಯೆಗಳಿಗೆ ಆಧುನಿಕ ಪರಿಹಾರಗಳು” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, “Gemini Live ಬಳಸಿ ನೋಡಬೇಕಿತ್ತು” ಹಾಗೂ “ಖೂಷಿಯಿಂದ AI ಮೂಲೆಯಲ್ಲಿ ಕುಳಿತು ಅಳುತ್ತಿದೆ” ಎಂದೆಲ್ಲಾ ಕಾಲೆಳೆದಿದ್ದಾರೆ. ಇದೇ ವೇಳೆ ಮಹಿಳೆಯೊಬ್ಬರು ಕಾಮೆಂಟ್ ಮಾಡಿ, ತಮ್ಮ ಪತಿ ಕೂಡ ಪುಸ್ತಕ ಮೇಳದಲ್ಲಿ ಪುಸ್ತಕಗಳ ರಾಶಿಯಿಂದ ನಿರ್ದಿಷ್ಟ ಪುಸ್ತಕ ಹುಡುಕಲು ಹೀಗೆಯೇ ChatGPT ಬಳಸಿದ್ದರು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಈ ವೀಡಿಯೋದ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲವಾದರೂ, ದೈನಂದಿನ ಜೀವನದಲ್ಲಿ ಕೃತಕ ಬುದ್ಧಿಮತ್ತೆ (AI) ಹೇಗೆ ಹಾಸುಹೊಕ್ಕಾಗುತ್ತಿದೆ ಎಂಬುದಕ್ಕೆ ಈ ಘಟನೆ ಉತ್ತಮ ನಿದರ್ಶನವಾಗಿದೆ. ದೊಡ್ಡ ದೊಡ್ಡ ತಾಂತ್ರಿಕ ಕೆಲಸಗಳಿಗೆ ಮಾತ್ರವಲ್ಲದೆ, ಇಂತಹ ಪುಟ್ಟ ಹಾಗೂ ತಮಾಷೆಯ ಕೆಲಸಗಳಿಗೂ AI ನೆರವಿಗೆ ಬರುತ್ತಿರುವುದು ಜನರ ಆಶ್ಚರ್ಯಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ರಾಮಮಂದಿರ ದೇಣಿಗೆ ಅಕ್ರಮ ಆರೋಪ: AI ವೀಡಿಯೋ ಶೇರ್ ಮಾಡಿ ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ!
