ತುಮರಿ: ಸ್ವತಂತ್ರ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ (Independence Day) ಶುಭ ಸಂದರ್ಭದಲ್ಲಿ, ಶರಾವತಿ ಹಿನ್ನೀರು ಸಂತ್ರಸ್ತರ ದಶಕಗಳ ಕಾಯುವಿಕೆಗೆ ಸಾಕ್ಷಿಯಾಗಿರುವ ಹೊಳೆಬಾಗಿಲು ಸೇತುವೆಯ ಮೇಲೆ ವಿನೂತನ ಮಾದರಿಯ ಸಂಭ್ರಮಾಚರಣೆ ಆಯೋಜಿಸಲಾಗಿದೆ.
ಆಗಸ್ಟ್ 14ರ ಮಧ್ಯರಾತ್ರಿ 12:00 ಗಂಟೆಗೆ ಕಾರ್ಯಕ್ರಮ
ಆಗಸ್ಟ್ 14ರ ಮಧ್ಯರಾತ್ರಿ 12:00 ಗಂಟೆಗೆ ಶ್ರೀ ಗಣೇಶೋತ್ಸವ ಸಮಿತಿ, ತುಮರಿ ಇವರ ನೇತೃತ್ವದಲ್ಲಿ ಹೊಳೆಬಾಗಿಲು ಸೇತುವೆಯ ಮೇಲೆ ಸಾರ್ವಜನಿಕರು ಹಾಗೂ ಶರಾವತಿ ಸಂತ್ರಸ್ತರು ಒಂದಾಗಿ ಸೇರಿ ತ್ರಿವರ್ಣ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಿದ್ದಾರೆ.
ಶರಾವತಿ ಯೋಜನೆಯಿಂದಾಗಿ ದಶಕಗಳ ಕಾಲ ಸಂಪರ್ಕ ಕಳೆದುಕೊಂಡು ಸಂಕಷ್ಟ ಅನುಭವಿಸಿದ ಈ ಭಾಗದ ಜನರಿಗೆ ‘ಶರಾವತಿ ಸಂತ್ರಸ್ತರ ಶಾಪ ವಿಮೋಚನಾ ಸೇತುವೆ’ಯಾಗಿ ಹೊಳೆಬಾಗಿಲು ಸೇತುವೆ ಮೂಡಿಬಂದಿದೆ. ಹೀಗಾಗಿ, ಈ ವಿಶೇಷ ಸೇತುವೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಅರ್ಥ ನೀಡಲು ಸ್ಥಳೀಯರು ಮುಂದಾಗಿದ್ದಾರೆ.
ರಾತ್ರಿ ಧ್ವಜಾರೋಹಣ ನೆರವೇರಿಸುವ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸಂಘಟಕರು ವಿನಂತಿಸಿದ್ದು, ತುಮರಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಶರಾವತಿ ಸಂತ್ರಸ್ತರು, ಯುವಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಾಷ್ಟ್ರಪ್ರೇಮ ಮೆರೆಯುವಂತೆ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಕೋರಿದ್ದಾರೆ.
ಇದನ್ನೂ ಓದಿ: ಆದಿವಾಸಿ ಮತ್ತು ಅಲೆಮಾರಿ ಆಯೋಗ ರಚನೆ: ಸಿಎಂ ಡಿ ಕೆ ಶಿವಕುಮಾರ್ ಆದೇಶ
